ಬೆಂಗಳೂರು: ದಕ್ಷ ಹಾಗೂ ಜನಸ್ನೇಹಿ ಆಡಳಿತಕ್ಕೆ ಹೆಸರಾಗಿದ್ದ ದಿವಂಗತ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಅವರ ಪುತ್ರಿ ಚೈತನ್ಯಾ ಬೀಳಗಿ ಅವರಿಗೆ ರಾಜ್ಯ ಸರ್ಕಾರವು ಅನುಕಂಪದ ಆಧಾರದ ಮೇಲೆ ಸರ್ಕಾರಿ ಉದ್ಯೋಗ ನೀಡಿದೆ. ಇಂದು (ಜನವರಿ 28) ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕೃತವಾಗಿ ನೇಮಕಾತಿ ಆದೇಶದ ಪ್ರತಿಯನ್ನು ಹಸ್ತಾಂತರಿಸಿದರು.
ಪ್ರಾಮಾಣಿಕ ಹಾಗೂ ಕರ್ತವ್ಯನಿಷ್ಠ ಅಧಿಕಾರಿಯಾಗಿದ್ದ ಮಹಾಂತೇಶ್ ಬೀಳಗಿ ಅವರು ಸೇವೆಯಲ್ಲಿದ್ದಾಗಲೇ 2025ರ ನವೆಂಬರ್ 25ರಂದು ಸಂಭವಿಸಿದ ರಸ್ತೆ ಅಪಘಾತದಲ್ಲಿ ಅಕಾಲಿಕ ನಿಧನ ಹೊಂದಿದ್ದರು. ಅವರ ನಿಧನವು ಇಡೀ ರಾಜ್ಯಕ್ಕೆ ದೊಡ್ಡ ನಷ್ಟವಾಗಿತ್ತು. ಕುಟುಂಬದ ಆಧಾರಸ್ತಂಭವಾಗಿದ್ದ ಅವರ ಅಗಲಿಕೆಯಿಂದ ಸಂಕಷ್ಟಕ್ಕೀಡಾಗಿದ್ದ ಕುಟುಂಬಕ್ಕೆ ನೆರವಾಗಲು ಸರ್ಕಾರಿ ನೌಕರಿ ನೀಡಬೇಕೆಂಬ ಒತ್ತಾಯ ಕೇಳಿಬಂದಿತ್ತು.
ಕರ್ನಾಟಕ ನಾಗರಿಕ ಸೇವಾ (ಅನುಕಂಪದ ಆಧಾರದ ಮೇಲೆ ನೇಮಕಾತಿ) ನಿಯಮಗಳು 1996ರ ಅನ್ವಯ ಈ ನೇಮಕಾತಿ ಮಾಡಲಾಗಿದೆ. ಚೈತನ್ಯಾ ಬೀಳಗಿ ಅವರಿಗೆ ಪ್ರಥಮ ದರ್ಜೆ ಸಹಾಯಕಿ (FDA) ಹುದ್ದೆಯನ್ನು ನೀಡಲಾಗಿದೆ. ವಾಣಿಜ್ಯ ತೆರಿಗೆ ಇಲಾಖೆಯಲ್ಲಿ (Commercial Tax Department) ನೇಮಕ ಮಾಡಲಾಗಿದೆ.
ವೇತನ: ಈ ಹುದ್ದೆಗೆ ಸರ್ಕಾರಿ ನಿಯಮಾನುಸಾರ ಮಾಸಿಕ ಸುಮಾರು 40,000 ರೂ.ಗಳಿಂದ 50,000 ರೂ. ವರೆಗೆ ಆರಂಭಿಕ ವೇತನ ಹಾಗೂ ಇತರೆ ಭತ್ಯೆಗಳು ಲಭ್ಯವಿರಲಿವೆ.
ಮಹಾಂತೇಶ್ ಬೀಳಗಿ ಅವರ ಜನಪರ ಕಾಳಜಿ ಮತ್ತು ದಕ್ಷ ಸೇವೆಯನ್ನು ಸ್ಮರಿಸಿದ ಸರ್ಕಾರ, ಅವರ ಕುಟುಂಬದ ಹಿತದೃಷ್ಟಿಯಿಂದ ಈ ಕ್ರಮ ಕೈಗೊಂಡಿದೆ. ನೇಮಕಾತಿ ಪತ್ರ ಸ್ವೀಕರಿಸಿದ ಚೈತನ್ಯಾ ಬೀಳಗಿ ಅವರಿಗೆ ಶುಭ ಹಾರೈಕೆಗಳು ಹರಿದುಬರುತ್ತಿವೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


