ಕೊರಟಗೆರೆ : ತಾಲೂಕು ಚನ್ನರಾಯನದುರ್ಗ ಹೋಬಳಿ ಸಿದ್ದರಬೆಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೌರಿಕಲ್ಲು ಗ್ರಾಮದ ಸರ್ವೆ ನಂ.36ರಲ್ಲಿ 4ಎಕರೆ ಖನಿಜ ಸಂಪತ್ತಿನ ಕಲ್ಲುಕ್ವಾರಿಯ ಕಥೆಯಿದು. ಪೂರ್ವಕ್ಕೆ ಕರಡಿಧಾಮದ ಮೀಸಲು ಅರಣ್ಯ ಇದೆ. ಪಶ್ಚಿಯಕ್ಕೆ ಹಿರೇಬೆಟ್ಟ ರಕ್ಷಿತ ಅರಣ್ಯ ಇದ್ದರೂ ಸರಕಾರಿ ಅಧಿಕಾರಿವರ್ಗ ಸ್ಥಳಕ್ಕೆ ಭೇಟಿ ನೀಡದೇ ಅನುಮತಿ ನೀಡಿದ ಪರಿಣಾಮ ಈಗ ಕಾರ್ಮಿಕರು ಮತ್ತು ಸ್ಥಳೀಯ ರೈತರಿಗೆ ಮತ್ತೇ ಶುರುವಾಯ್ತು ಸಂಕಷ್ಟ.
ಸಿದ್ದರಬೆಟ್ಟ ಗ್ರಾ.ಪಂ. ವ್ಯಾಪ್ತಿಯ ಗೌರಿಕಲ್ಲು, ದೊಗ್ಗನಹಳ್ಳಿ, ಮಲ್ಲೇಕಾವು, ಗೊಲ್ಲರಹಟ್ಟಿ, ಗೊಂದಿಹಳ್ಳಿ ಮತ್ತು ವಿರೋಬನಹಳ್ಳಿಯ ಅಕ್ಕ–ಪಕ್ಕದ ನೂರಾರು ರೈತರ ಜಮೀನುಗಳಿವೆ. ರೈತರ ಜಮೀನುಗಳ ಬಳಿಯೇ ಕಲ್ಲುಕ್ವಾರೇ ಪ್ರಾರಂಭವಾದ್ರೇ ಬಂಡೆಶಬ್ದದ ಜೊತೆ ಕ್ರಷರ್ ಧೂಳಿನಿಂದ ರೈತರ ಬೆಳೆಗಳಿಗೆ ಹಾನಿಯ ಜೊತೆ ದುಡಿದು ತಿನ್ನುವ ಕಾರ್ಮಿಕರಿಗೆ ಅತಿದೊಡ್ಡ ಸಮಸ್ಯೆ ಆಗಲಿದೆ.
4 ಎಕರೆ ಕಲ್ಲು ಕ್ವಾರೇಗೆ 30ವರ್ಷ ಗುತ್ತಿಗೆ:
ಬೆಂಡೋಣಿಯ ಕಲ್ಲುಗಣಿ ಗುತ್ತಿಗೆದಾರ ಬಿ.ಆರ್.ಜಯರಾಮ್ ಗೆ 2011ರಲ್ಲೇ ಕೊರಟಗೆರೆ ತಾಲೂಕಿನ ಗೌರಿಕಲ್ಲು ಗ್ರಾಮದ ಸರ್ವೆ ನಂಬರ್ 36ರಲ್ಲಿ 4 ಎಕರೆ ಸರಕಾರಿ ಖನಿಜ ಭೂಮಿ ಮತ್ತು 2014ರಲ್ಲಿ ಗೌರಿಕಲ್ಲು ಗ್ರಾಮದ ಸರ್ವೆ ನಂಬರ್ 41/1ರಲ್ಲಿ ಎಸ್.ಜೆ.ಸ್ಟೋನ್ ಕ್ರಷರ್ ಸ್ಥಾಪನೆಗೆ 30 ವರ್ಷಗಳ ಕಾಲ ಗುತ್ತಿಗೆ ನೀಡಿ ತುಮಕೂರು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಆದೇಶ ಮಾಡಿದೆ.
ಕಾರ್ಮಿಕರ 15 ವರ್ಷಗಳ ಸಂಘರ್ಷ:
ಗೌರಿಕಲ್ಲು ಸರ್ವೆ ನಂ.36ರ ಬಂಡೆಗಾಗಿ ಗುತ್ತಿಗೆದಾರ ಜಯರಾಮ್ ಮತ್ತು ಬಂಡೆ ಕಾರ್ಮಿಕರ ನಡುವೆ ಕಳೆದ 15 ವರ್ಷಗಳಿಂದ ಸಂಘರ್ಷ ನಡೆಯುತ್ತಿದೆ. 2017ರಲ್ಲೂ ಸಹ ಕ್ರಷರ್ ಸ್ಥಾಪನೆಯಾದ ವೇಳೆ ಕಾರ್ಮಿಕರಿಂದ ವಿರೋಧವಾಗಿ ಸ್ಥಳಕ್ಕೆ ಅಂದಿನ ಜಿಲ್ಲಾಧಿಕಾರಿ ಆಗಮಿಸಿ ಕ್ರಷರ್ ಸ್ಥಗೀತ ಮಾಡಿ ಪಾರಂಪರಿಕ ಕಲ್ಲು ಬಂಡೆ ಕಾರ್ಮಿಕರಿಗೆ ಅನುಕೂಲ ಮಾಡಿದ್ದರು. ಈಗ ಮತ್ತೇ ಕ್ರಷರ್ ಮತ್ತು ಕಲ್ಲು ಗಣಿಗಾರಿಕೆಯ ಕೆಲಸ ಮುನ್ನಲೆಗೆ ಬಂದಿದೆ.
ಬ್ಲಾಸ್ಟಿಂಗ್ ಅನುಮತಿ ನೀಡಿದೋರು ಯಾರು..?
ಬ್ಲಾಸ್ಟಿಂಗ್ ಪರವಾನಗಿಯೇ ಪಡೆಯದೇ ಗೌರಿಕಲ್ಲು ಸರ್ವೆ ನಂ.36ರಲ್ಲಿ ನಂಬರೇ ಇಲ್ಲದ ಟ್ರಾಕ್ಟರ್ ಬಳಸಿ 20ಅಡಿ ಆಳದ ರಂಧ್ರವನ್ನು ಕೊರೆಯುತ್ತಿದ್ದಾರೆ. ಕಾರ್ಮಿಕರು ಪ್ರಶ್ನಿಸಲು ಹೋದರೇ ಕಲ್ಲಿನ ಜೊತೆ ನಿಮ್ಮನ್ನು ಬ್ಲಾಸ್ಟ್ ಮಾಡ್ತೀವಿ ಎಂದು ಧಮ್ಕಿ ಹಾಡುವುದು ಸರ್ವೆ ಸಾಮಾನ್ಯವಾಗಿದೆ.
ಕಾಡಿನ ಪ್ರಾಣಿ–ಪಕ್ಷಿಗಳಿಗೆ ಬ್ಲಾಸ್ಟಿಂಗ್ ಸಂಕಷ್ಟ:
ಕರಡಿಧಾಮ ಮತ್ತು ಹಿರೇಬೆಟ್ಟ ಮೀಸಲು ಅರಣ್ಯದ ಮಧ್ಯೆ ನಿರ್ಮಾಣ ಆಗುತ್ತಿರುವ ಗಣಿಗಾರಿಕೆ ಮತ್ತು ಕ್ರಷರ್ ಘಟಕದಿಂದ ಕಾಡಿನಲ್ಲಿ ವಾಸಿಸುವ ಪ್ರಾಣಿ ಮತ್ತು ಪಕ್ಷಿಗಳಿಗೆ ಸಂಕಷ್ಟ ಎದುರಾಗಲಿದೆ. ಈಗಾಗಲೇ ಕಾಡುಪ್ರಾಣಿಗಳ ಹಾವಳಿಯಿಂದ ನಲುಗಿರುವ ಕಾಡಂಚಿನ ರೈತರಿಗೆ ಮತ್ತೇ ಪ್ರಾಣಿಗಳ ದಾಳಿಯು ತಪ್ಪಿದಲ್ಲ. ತಕ್ಷಣ ಸಂಬಂಧಪಟ್ಟ ಅರಣ್ಯ ಇಲಾಖೆ ಇವರಿಗೆ ನೀಡಿರುವ ಅನುಮತಿಯನ್ನ ರದ್ದು ಮಾಡಬೇಕಿದೆ.
ಮೀಸಲು ಅರಣ್ಯದ ನಡುವೆ ರಸ್ತೆ ನಿರ್ಮಾಣ:
ಹಿರೇಬೆಟ್ಟ ಮೀಸಲು ಅರಣ್ಯದ ಗಡಿಯನ್ನೇ ಮುಚ್ಚಿ ಗಣಿಗಾರಿಕೆಯ ಲಾರಿ ಸಂಚಾರಕ್ಕೆ ದಾರಿ ಮಾಡಲಾಗಿದೆ. ಇದರ ಜೊತೆಯಲ್ಲಿ ಕೃಷಿ ಭೂಮಿಗೆ ಕೊಳವೆಬಾವಿ ಮತ್ತು ವಿದ್ಯುತ್ ಸಂಪರ್ಕ ಹಾಕಿಸಿಕೊಂಡು ಕ್ರಷರ್ ಘಟಕ ನಿರ್ಮಾಣಕ್ಕೆ ದುರ್ಬಳಕೆ. ಬೆಸ್ಕಾಂ ಮತ್ತು ಗ್ರಾಮ ಪಂಚಾಯಿತಿ ಅಧಿಕಾರಿಗಳ ಪರೋಕ್ಷ ಬೆಂಬಲವೇ ಶಕ್ತಿಯಾಗಿ ಬಡ ಕಾರ್ಮಿಕರ ಮೇಲೆ ದಬ್ಬಾಳಿಕೆ ಹೆಚ್ಚಾಗುತ್ತಿದೆ.
ಪತ್ರಕರ್ತರಿಗೆ ಗಣಿ ದಂಧೆಕೋರರಿಂದ ಧಮ್ಕಿ:
ಕ್ರಷರ್ ನಿರ್ಮಾಣದ ಬಳಿ ವಿಡೀಯೊ ಚಿತ್ರಿಕರಣ ಮಾಡಿದ ಪತ್ರಕರ್ತರನ್ನು ತಡೆದು ವಿಡಿಯೊ ಮಾಡಲು ನಮ್ಮ ಅನುಮತಿ ಪಡೆಯಿರಿ. ನಿಮ್ಮ ಐಡಿ ಕಾರ್ಡು ನಮಗೇ ತೋರಿಸಿ ಇಲ್ಲವಾದ್ರೇ ನಿಮ್ಮನ್ನ ಸುಮ್ಮನೇ ಇಲ್ಲಿಂದ ಬೀಡೋದಿಲ್ಲ. ನಿಮ್ಮ ಹೆಸರೇನು ಹೇಳಿ ನಮಗೇ ಗೊತ್ತು ಏನು ಮಾಡಬೇಕು ಅಂತಾ ಎಂದು ಗಣಿಗಾರಿಕೆ ಗುತ್ತಿಗೆದಾರ ಜಯರಾಮ್ನ ಗೂಂಡಾ ಬೆಂಬಲಿಗರು ಪತ್ರಕರ್ತರಿಗೆ ಧಮ್ಕಿ ಹಾಕಿ ಹೆದರಿಸಿದ ಘಟನೆಯು ನಡೆದಿದೆ..
ವರದಿ: ಮಂಜುಸ್ವಾಮಿ ಎಂ.ಎನ್., ಕೊರಟಗೆರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4