ಊರು: ಸುರಪುರವೆಂಬ ಹಳ್ಳಿ, ಮಿತ್ರರ ಹೆಸರು: ಸೋಮ, ಭೀಮ, ವರ್ಗ: ಸ್ವಲ್ಪ ಮಧ್ಯಮ ವರ್ಗದ ಬಡತನದ ಜೀವನ, ಮಾತಿಗೆ ಸೇರುವ ಜಾಗ: ಊರ ಹೊರಗಿನ ಅರಳಿ ಕಟ್ಟೆ.
ಭೀಮ:- (ಅರಳಿಕಟ್ಟೆ ಮೇಲೆ ಕುಳಿತು, ಎಲೆ ಅಡಿಕೆ ಜಗಿಯುತ್ತಾ, ಸೋಮ ಬರುವಿಕೆಯನ್ನು ಕಂಡು) ಓಹೋಹೋ ಬಾರಪ್ಪ ಸೋಮ, ಊಟ ಆಯ್ತನಪ್ಪ…
ಸೋಮ:- ಹು ಭೀಮು ಊಟ ಆಯ್ತು, ನಿಂದು ಆಯ್ತನಪ್ಪ
ಭೀಮ:- ಹು ಸೋಮು ನಂದು ಆಯ್ತು, ಈ ಬದಿ ಕುಂತುಕೋ, ಅಲ್ಲಿ ನಾಯಿ ಕಸ ಮಾಡದೆ.
ಸೋಮ:- ಹೂ ಕಣೋ ಭೀಮು ನಾನು ನೋಡ್ಲೇ ಇಲ್ಲ ನೋಡು ಮತ್ತೆ, ನೀನು ಹೇಳದೇ ಹೋಗಿದ್ದರೆ, ಅದರ ಮೇಲೆನೇ ಕುಂತ್ಕೋತಿದ್ದೆ.
ಭೀಮ:- ನೀನು ಇಂಗೆ ಮಾಡ್ತಿಯ ಅಂತ ನಂಗೆ ಮುಂದಾಗೆ ಗೊತ್ತಿತ್ತು ನೋಡು ಅದ್ಕೆ ಅಂಗೆ ಹೇಳ್ದೆ.
ಸೋಮ:- ಅದೆಂಗಲಾ ಮುಂದಾಗೆ ಗೊತ್ತಿತ್ತು?
ಭೀಮ:- ಅದು ಅಂಗೆಯಾ, ನಮ್ಮ ತಾತ ಭವಿಷ್ಯ ಹೇಳ್ತಿದ್ದ ನೋಡು ಅದು ಅಂಗೆ ನನ್ ತಲೆಗೆ ಬಟ್ಟಿ ಇಳ್ಕೊಂಬುಟೈತೆ.
ಸೋಮ:- ಬದ್ನೆ ಕಾಯಿ, ಎಂತದು ಇಲ್ಲ, ಸುಮ್ನೆ ಕುಂತ್ಕೊತಿಯ ವಸಿ, ನೀನು ಮೊದ್ಲೆ ನೋಡಿದ್ದೆ ಅದ್ಕೆ ಅಂಗೆ ಹೇಳ್ದೆ ನಂಗೇನು ತಿಳಿಯಕ್ಕಿಲ್ವಾ? ಅದಿರ್ಲಿ, ಇದೇನು ಮಾಡ್ದೆ?
ಭೀಮ:- ಯಾವ್ದು?
ಸೋಮ:- ಅದೇ ಅವತ್ತು ಹೇಳಿದ್ನಲ್ಲಾ? (ತಲೆ ಕೆರೆಯುತ್ತಾ)
ಭೀಮ:- ಬಾಯಿ ಬುಟ್ಟು ಹೇಳ್ಳ ವಸಿ, ಅಂಗೆ ತಲೆ ಕೆರಕೊಂಡ್ರೆ ಹೆಂಗ್ಲಾ ಗೊತ್ತಾಯ್ತದೆ?
ಸೋಮ:- ಏ ಅದೆಯಾ ವಸಿ ಅಮೌಂಟು ಬೇಕಿತ್ತು ಅಂತ ಹೇಳಿದ್ನಲ್ಲಾ ಅದು..
ಭೀಮ:- (ಅಮೌಂಟು ಅನ್ನುತ್ತಿದ್ದಂತೆ ಮನದಲ್ಲಿ, “ನಾನೇ ದೊಡ್ಡ ಭಿಕಾರಿ, ಈ ನನ್ ಮಗನಿಗೆ ಎಲ್ಲಿಂದ ಕೊಡ್ಲಿ ದುಡ್ಡು, ಏನಾರ ಸುಳ್ಳು ಬುಡ್ತಿನಿ)
ಏ.. ಅದು..ಅದು.. ನೀನು ಮೊದ್ಲೆ ಕೇಳ್ಬೇಕಿತ್ತು ನೋಡು, ದುಡ್ಡು ಇತ್ತು ಆ ಮೂಲೆ ಮನೆ ಬಸ್ಯ ಬಂದು ಇಸ್ಕೊಂಬಿಟ್ಟ ನೋಡು, ಏನೋ ಎಮರ್ಜೆನ್ಸಿ ಇತ್ತಂತೆ ಪಾ..ಪ… ಅವನು ಬಂದು ಕೇಳಿದ್ದು ನೋಡಿ ನಂಗೆ ಅಂಗೆಯ ಕಣ್ಣಲ್ಲಿ ನೀರು ಬಂದು ಕೊಟ್ಟುಬುಟ್ಟೆ ನೋಡು.
ಸೋಮ:- ಮೂಲೆ ಮನೆ ಬಸ್ಯ..??? ಏ…. ಅವ ಸತ್ತು 6 ತಿಂಗ್ಳು ಆಯ್ತಲ್ಲಾ? ಅದೆಂಗಲಾ ಬರ್ತಾನೆ…?
ಭೀಮ:- ಹೌದಲ್ವಾ… ಥೂ ನನ್ನ ಜನ್ಮಕ್ಕಿಟ್ಟು ನೋಡು, ಮಸ್ಯ ಅನ್ನಕ್ಕೆ ಹೋಗಿ ಬಸ್ಯ ಅಂದುಬುಟ್ಟೆ, ಸೂರಿ ಕಳ್ಳಾ..
ಸೋಮ:- ಸೂರಿ ಅಲ್ಲಕಳ್ಳಾ ಅದು ಸಾರಿ, ನಿನ್ನ ಮಕ್ಕೆ ಇಂಗ್ಲೀಷ್ ಬೇರೆ ಕೇಡು, ಅಲ್ಲಲೇ ಮಸ್ಯ ಸತ್ತು ಒಂದು ವರ್ಷ ನೇ ಆಯ್ತಲ್ಲಾ??
ಭೀಮ:- ಥೂ….ಥೂ…. ನೋಡು ಮಸ್ಯನು ಅಲ್ಲಾಕಳ್ಳಾ ಇವನು … ಇವನು… ಅವನ ಹೆಸರೇ ಜಲ್ದೀ ಜಪ್ತೀ ಬರ್ತಿಲ್ಲಾ ನೋಡು. ಇವ್ನು ಕಣ್ಳಾ…
ಸೋಮ:- ನಿಂಗೆ ಕೊಡಕ್ಕೆ ಮನ್ಸು ಇಲ್ಲಾಂದ್ರೆ ಹೇಳ್ಬುಡು, ಸುಮ್ನೆ ಯಾಕೆ ಕಂತೆ ಸುಳ್ಳು ಬುಡ್ತೀ…
ಭೀಮ:- ಹು ಕಳಾ ನಾನು ಸುಳ್ಳು ಬುಟ್ಟೆ, ಮತ್ತೇನು ಸುಮ್ ಸುಮ್ನೆ ಕೊಟ್ಟಾರೆ ದುಡ್ಡ.. ನೀನೇನು ಬಡ್ಡಿ ಕೊಟ್ಟೀಯ, ಬಾಕಿ ಕೊಟ್ಟೀಯ, ಫ್ರಂಡು ಅನ್ಕೊಂಡು ನೀನು ಕೊಟ್ಟಾಗ ಇಸ್ಕೊಳನೇ… ಕೊನೆಗೆ ನೀನು ಕೊಟ್ರು ಕೊಟ್ಟೆ ಬುಟ್ರು ಬುಟ್ಟೆ, ಕೊನೆಗೆ ಕೈ ಎತ್ತುಬುಟ್ರೆ ಏನ ಮಾಡನೆ….? ಯಾರ್ ತವ್ ಕೇಳಾನೆ..ಏ ಹೋಗ್ಲಾ ಕ್ಯಾಮೆ ಇದ್ರೆ ನೋಡ್ಕೋ ಹೋಗು, ಬಂದು ಬಿಟ್ಟ ಇಲ್ಲಿ ದುಡ್ಡು ಕೇಳಕ್ಕೆ, ನಂಗೆ ಇಲ್ಲ ಇಲ್ಲಿ.
ಸೋಮ:- ಏ ಯಾಕ್ಲಾ ನನ್ ಮೇಲೆ ನಂಬ್ಕೆ ಇಲ್ವನ್ಲಾ… ಫ್ರಂಡು ಶಿಪ್ ಗೆ ಇಷ್ಟೇಯೇನ್ಲಾ ಬೆಲೆ ಕೊಡೋದು ನೀನು, ನಾನೇನು ಊರು ಬುಟ್ಟು ಓಯ್ತಿದ್ನೆ ಐನೂರುಪಾಯ್ಗೆ…
ಭೀಮ:- ದುಡ್ಡು ಎಂತೋರ್ನು ದೂರನು ಮಾಡ್ತದೆ, ಹತ್ರನು ಮಾಡ್ತದೆ ಕಣ್ಳಾ… ನಿಂಗೇನ್ಲಾ ಗೊತ್ತು..
ಸೋಮ:- ಸರಿ ಬುಡು ನಾನು ಹೋಯ್ತಿನಿ, ನಿನ್ ತವು ಏನ ಉಪಯೋಗ ಇಲ್ಲ.. ಗೊತ್ತಾತು(ಎಂದು ಎದ್ದು ಹೊರಟ)
ಭೀಮ:- (ಸೋಮ ಬೇಜಾರು ಮಾಡಿಕೊಂಡಿದ್ದು ನೋಡಿ ಭೀಮ) ಸೋಮ ಬೇಜಾರಾಗಬೇಡ ನಾನೇನೊ ಕುಡಿಯಕ್ಕೆ ಏನೋ ತಂದಿದ್ದೆ, ಬಾ ಇಲ್ಲೆ ಕೂತ್ಕೊಂಡು ಇಬ್ರು ಕುಡಿಯುವ… ಮಾತಾಕ್ಡೊಂಡ
ಸೋಮ:- (ಭೀಮ ಕುಡಿಯುವ ಅನ್ನುತ್ತಿದ್ದಂತೆ, ಸೋಮನ ಮುಖ ಅರಳಿ) ನಂಗೆ ಗೊತ್ತಿತ್ತು ಕಣ್ಳಾ ನೀನು ಫ್ರಂಡು ಶಿಪ್ ಗೆ ಎಷ್ಟು ಬೆಲೆ ಕೊಡ್ತೀ ಅಂತ. ಇದೇ ಕಣ್ಳಾ ನಿಜವಾದ ಫ್ರಂಡ್ ಶಿಪ್ ಅಂದ್ರೆ, ದುಡ್ಡಿನ ಮನೆ ಹಾಳಾಗ್ಲಿ ಮೊದ್ಲು ತೆಗಿಲಾ ಪಾಕೆಟ್ ಇಬ್ರು ಕುಡಿಯುವ (ಎನ್ನುತ್ತಾ ಅರಳಿ ಕಟ್ಟೆ ಮೇಲೆ ಮತ್ತೆ ಏರಿ ಕುಳಿತನು)
ಭೀಮ:- ಅದೆ ಕಣ್ಳಾ ಬಿಸಿಲು ಅಲ್ವಾ ಅದಿಕ್ಕೆ ನೋಡು ಏನ ತಂದಿದಿನಿ ಅಂತ..(ಎನ್ನುತ್ತಾ ತನ್ನ ಕಿಸೆ ಒಳಗಿಂದ ಎರಡು ಮಜ್ಜಿಗೆ ಪ್ಯಾಕೆಟ್ ಗಳನ್ನು ಹೊರ ತೆಗೆದ)
ಸೋಮ:- (ಮಜ್ಜಿಗೆ ಪ್ಯಾಕೆಟ್ ಗಳನ್ನು ನೋಡುತ್ತಿದ್ದಂತೆ ಉರಿದು ಉಪ್ಪಾದ ಸೋಮ ಹೀಗಂದ) ನಾನೇನೋ ಎಣ್ಣೆ ಪಾಕೆಟ್ ತಂದಿದಿಯ ಅನ್ಕೊಂಡ್ರೆ ನೀನು ಮಜ್ಜಿಗೆ ಪಾಕೆಟ್ ತಂದಿದಿಯ, ಕೊಡ್ಲಾ ಇಲ್ಲಿ (ಎಂದು ಮಜ್ಜಿಗೆ ಪಾಕೆಟ್ ಗಳನ್ನು ಭೀಮನ ಕೈ ಇಂದ ಕಿತ್ತುಕೊಂಡು, ಭೀಮನ ಮುಖದ ಹತ್ತಿರ ಹಿಡಿದು ಪಾಕೆಟ್ ಗಳನ್ನು ಪಚಕ್ ಎಂದು ಬೆರಳುಗಳಿಂದ ಹಿಚುಕಿ, ಅವನ ಮುಖ ಮೈಗೆಲ್ಲಾ ಮಜ್ಜಿಗೆ ಸಿಡಿಸಿ ಕೊನೆಗೆ ಪಿತ್ತ ಏರಿಸಿಕೊಂಡವನಂತೆ ಹೀಗಂದ) ನೀನು ಒಬ್ಬನೇಯೇನ್ಲಾ ದುಡ್ಡು ನೋಡಿರದು, ನನ್ ತವು ಶಾನೆ ಜನ ಅವ್ರೆ ದುಡ್ಡು ಕೊಡೋರು, ಅವರ ತವೇ ಓಯ್ತಿನಿ, ಏನೋ ಫ್ರಂಡು ಅನ್ಕೊಂಡು ಬಂದ್ರೆ, ನೀನು ಯಾವ ಸೀಮೆ ಫ್ರಂಡ್ ಲಾ, ಏ ಹೋಗಲೇ ಎದ್ದು…(ಎನ್ನತ್ತಾ ಕಟ್ಟೆಯಿಂದ ಜಿಗಿದು ಸರಸರನೆ ಹೋಗಿಬಿಟ್ಟ)

ಸಂಪಾದಕರ ನುಡಿ
ಗ್ರಾಮೀಣ ಬದುಕಿನ ನೈಜತೆ, ಮಾತಿನಲ್ಲೇ ಹುಟ್ಟುವ ಹಾಸ್ಯ, ಸ್ನೇಹದ ಒಳಹೊರಗಿನ ತಿಕ್ಕಾಟ—ಇವೆಲ್ಲವನ್ನೂ “ಅರಳಿ ಕಟ್ಟೆ ಮಿತ್ರರು” ಡ್ರಾಮವು ಸರಳವಾಗಿ, ಆದರೆ ಪರಿಣಾಮಕಾರಿಯಾಗಿ ನಮ್ಮ ಮುಂದಿಡುತ್ತದೆ. ಊರ ಹೊರಗಿನ ಅರಳಿ ಕಟ್ಟೆಯೇ ಲೋಕವಾಗಿರುವ ಸೋಮ–ಭೀಮರ ಸಂಭಾಷಣೆ, ಮಧ್ಯಮ ವರ್ಗದ ಬಡತನದ ಬದುಕಿನಲ್ಲಿ ಸ್ನೇಹ ಹೇಗೆ ದುಡ್ಡಿನ ಮುಂದೆ ತೂಗಾಡುತ್ತದೆ ಎಂಬ ಸತ್ಯವನ್ನು ನಗುತ ನಗುತ ಹೇಳುತ್ತದೆ.
ಭೀಮನ ತಪ್ಪಿಸಿಕೊಳ್ಳುವ ಚಾತುರ್ಯ, ಸೋಮನ ನೇರವಾದ ಮನಸ್ಸು, “ಅಮೌಂಟು” ಎಂಬ ಒಂದೇ ಪದದಿಂದ ಉಂಟಾಗುವ ಗೊಂದಲ—ಇವೆಲ್ಲವು ಗ್ರಾಮೀಣ ಭಾಷೆಯ ಜೀವಂತಿಕೆಯಿಂದ ಓದುಗರ ಕಣ್ಣ ಮುಂದೆ ದೃಶ್ಯವಾಗಿ ಮೂಡುತ್ತವೆ. ಕೊನೆಯಲ್ಲಿ ಮಜ್ಜಿಗೆ ಪ್ಯಾಕೆಟ್ ಮೂಲಕ ಬಿಚ್ಚಿಕೊಳ್ಳುವ ಹಾಸ್ಯ, ಸ್ನೇಹದ ನಿರೀಕ್ಷೆ ಮತ್ತು ವಾಸ್ತವದ ನಡುವಿನ ವ್ಯತ್ಯಾಸವನ್ನು ತೀಕ್ಷ್ಣವಾಗಿ ತೋರಿಸುತ್ತದೆ.
ಇದು ಕೇವಲ ನಗಿಸುವ ನಾಟಕವಲ್ಲ; ದುಡ್ಡು–ಸ್ನೇಹ–ನಂಬಿಕೆಗಳ ನಡುವಿನ ಸೂಕ್ಷ್ಮ ಸಂಬಂಧದ ಮೇಲೆ ಮಾಡಿದ ಸಮಾಜದ ವ್ಯಂಗ್ಯವೂ ಹೌದು. ಸ್ಥಳೀಯ ಭಾಷೆ, ನೈಜ ಪಾತ್ರಗಳು ಮತ್ತು ಸರಳ ಹಾಸ್ಯದಿಂದ ಈ ಕೃತಿ ಓದುಗರಿಗೆ ತಮ್ಮದೇ ಊರಿನ ಅರಳಿ ಕಟ್ಟೆಯ ನೆನಪನ್ನು ತರಿಸುತ್ತದೆ.
— ಸಂಪಾದಕರು
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


