ಸರಗೂರು: ಪಟ್ಟಣ ಬಸ್ ನಿಲ್ದಾಣದ ಮುಂಭಾಗದಲ್ಲಿ ಸಂಯುಕ್ತ ಕರ್ನಾಟಕ ರೈತ ಹಸಿರು ಸೇನೆಯ ತಾಲೂಕು ಘಟಕದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಭಾನುವಾರ, ರೈತರ ಕುರಿತು ಡಿಸಿಎಂ ಡಿ.ಕೆ.ಶಿವಕುಮಾರ್ ನೀಡಿರುವ ಹೇಳಿಕೆಯನ್ನು ಖಂಡಿಸಿ ರೈತ ಸಂಘದ ಅಧ್ಯಕ್ಷ ಚನ್ನಾಯಕ ನೇತೃತ್ವದಲ್ಲಿ ಮಾನವ ಸರಪಳಿ ರಚಿಸಿ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಸಂಯುಕ್ತ ಕರ್ನಾಟಕ ಹಸಿರು ಸೇನೆ ರೈತ ಸಂಘದ ತಾಲೂಕು ಪ್ರಧಾನ ಕಾರ್ಯದರ್ಶಿ ನಂದೀಶ್ವರ ಸ್ವಾಮಿ ಮಾತನಾಡಿ, ಈ ಹಿಂದೆ ರೈತರ ಸರಣಿ ಆತ್ಮಹತ್ಯೆ ವಿಷಯ ಬಂದಾಗ “ಎಲ್ಲಿದೆ ಆತ್ಮಹತ್ಯೆ, ಸ್ವಂತಕ್ಕೆ ಆತ್ಮಹತ್ಯೆ ಮಾಡಿಕೊಂಡವರನ್ನೆಲ್ಲಾ ರೈತರು ಅನ್ನೋಕಾಗುತ್ತಾ. ಅದೆಲ್ಲಾ ಸುಳ್ಳು ಎಂದು ರೈತರ ಬಗ್ಗೆ ತುಚ್ಚವಾಗಿ ಮಾತನಾಡಿದ್ದೀರಿ, ರೈತರಿಗೆ ದಿಧಿಕ್ಕಾರ ಕೂಗೋದು ಬಿಟ್ಟು ಬೇರೇನೋ ಮಾಡೋಕ್ಕಾಗಲ್ಲ ಎಂದು ರೈತರ ಅಸಹಾಯಕರು ಅನ್ನುವ ರೀತಿಯಲ್ಲಿ ಹೀಯಾಳಿಸಿ ಮಾತನಾಡಿದ್ದೀರಿ ಅಂತ ಡಿಸಿಎಂ ಶಿವಕುಮಾರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಇಡೀ ದೇಶಕ್ಕೆ ಅನ್ನ ನೀಡುವ ರೈತ ಜೀವನವಿಡೀ ತಾನು ಬದುಕುವುದು.ದುಡಿಯುವುದು ಎಲ್ಲವೂ ಇನ್ನೊಬ್ಬರಿಗಾಗಿಯೇ ಹೊರತು ತನ್ನ ಸ್ವಂತಕ್ಕಾಗಿ ಅಲ್ಲ ಎಂದು ಶಿವಕುಮಾರ್ ತಿಳಿದುಕೊಳ್ಳಬೇಕು ಎಂದು ಎಚ್ಚರಿಕೆ ನೀಡಿದರು.
ಆದರೆ ತಮ್ಮ ಜೀವನದ ಆಧಾರ ಸ್ತಂಭ ವಾಗಿರುವ ಜಮೀನು ಕಳೆದುಕೊಳ್ಳುತ್ತಿರುವ ರೈತರ ಬಳಿ ಹೇಗೆ ಮಾತನಾಡಬೇಕು, ಯಾವ ರೀತಿ ಸಂವೇದನೆಯಿಂದ ನಡೆದುಕೊಳ್ಳಬೇಕು ಎನ್ನುವ ಕನಿಷ್ಠ ಸೌಜನ್ಯವೂ ಇಲ್ಲದ ತಮ್ಮಂತಹವರು ಮುಂದೊಂದು ದಿನ ಮುಖ್ಯಮಂತ್ರಿ ಆಗುವ ಕನಸು ಕಾಣುತ್ತಿರುವುದು ಈ ನಮ್ಮ ನಾಡಿನ ದುರಂತ ಎಂದರು.
ರೈತ ಸಂಘದ ಯುವ ಘಟಕದ ಪ್ರಧಾನ ಕಾರ್ಯದರ್ಶಿ ನವೀನ್ ಹಳೆಹೆಗ್ಗುಡಿಲು ಮಾತನಾಡಿ, ರೈತರ ಕಷ್ಟ ಕೃಷಿಯಲ್ಲಿರುವ ಸಮಸ್ಯೆಗಳ ಬಗ್ಗೆ ಗೊತ್ತಿರುವ ನಿಜವಾದ ಅನ್ನದಾತರು ಬಗ್ಗೆ ಈ ರೀತಿಯ ದರ್ಪದ ಮಾತುಗಳನ್ನು ಎಂದಿಗೂ ಆಡುವುದಿಲ್ಲ, ಒಕ್ಕಲಿಕೆಯನ್ನು ಮಣ್ಣಿನ ಮಕ್ಕಳನ್ನು ಅಪಮಾನ ಮಾಡುತ್ತಿರುವ ತಮ್ಮ ಈ ದುರ್ನಡತೆಯ ಪರಿಣಾಮ ಮುಂದೆ ಗೊತ್ತಾಗುತ್ತದೆ ಹಾಗೂ ಉಪ ಮುಖ್ಯಮಂತ್ರಿ ಸ್ಥಾನದಿಂದ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ನಂತರ ಸರಗೂರು ಅಭಿವೃದ್ಧಿ ಹೋರಾಟ ಸಮಿತಿ ಸಂಚಾಲಕ ಸರಗೂರು ಕೃಷ್ಣ ಮಾತನಾಡಿ, ಕೆರೆಗೆ ನೀರು ತುಂಬಿಸುವ ಯೋಜನೆಯನ್ನು ಕೈಬಿಟ್ಟರೆ ಗಣಿ ಮಾಲೀಕರಿಗಲ್ಲದೆ ಬೇರೆ ಯಾರಿಗೂ ಉಪಯೋಗವಿಲ್ಲ. ಡಿ.ಕೆ.ಶಿವಕುಮಾರ್‌ರವರು ತಮ್ಮ ಹೇಳಿಕೆ ಹಿಂಪಡೆದು ರೈತ ಸಮುದಾಯಕ್ಕೆ ಕ್ಷಮೆ ಕೊರಬೇಕು’ ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸಂಯುಕ್ತ ಕರ್ನಾಟಕ ಹಸೀರು ಸೇನೆ ತಾಲೂಕು ಅಧ್ಯಕ್ಷ ಚನ್ನಾಯಕ, ಪ್ರದಾನ ಕಾರ್ಯದರ್ಶಿ ನಂದೀಶ್ವರ ಸ್ವಾಮಿ, ಯುವ ಘಟಕದ ಪ್ರಧಾನ ಕಾರ್ಯದರ್ಶಿ ನವೀನ್, ಯುವ ಘಟಕದ ಅಧ್ಯಕ್ಷ ನವೀನ್, ಶಿವಪ್ಪ, ಕಾರ್ಯಾಧ್ಯಕ್ಷ ಕುಮಾರಗೌಡ, ನಿಂಗನಾಯಕ, ಗೌರವಾಧ್ಯಕ್ಷ ಶಿವಕುಮಾರಾಧ್ಯರು, ಉಪಾಧ್ಯಕ್ಷರು ಮಹದೇವನಾಯಕ, ನಾಗಣ್ಣ, ಹೋಬಳಿ ಮಟ್ಟದ ಅಧ್ಯಕ್ಷ ನಾಗರಾಜು ಸರಗೂರು ಅಭಿವೃದ್ಧಿ ಹೋರಾಟ ಸಮಿತಿ ಸಂಚಾಲಕ ಸರಗೂರು ಕೃಷ್ಣ, ರೈತ ಸಂಘದ ಪದಾಧಿಕಾರಿಗಳು ಹಾಗೂ ಮುಖಂಡರು ಸೇರಿದಂತೆ ಹಾಜರಿದ್ದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


