ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎರಡು ತಿಂಗಳುಗಳಲ್ಲಿಯೇ ಏಗ್ಗಿಲ್ಲದೇ ವರ್ಗಾವಣೆ ದಂಧೆ ನಡೆಯುತ್ತಿರುವುದು ಸ್ಪಷ್ಟವಾಗುತ್ತಿದೆ. ಸರ್ಕಾರದ ಮಂತ್ರಿ ಮಹೋದಯಗಳ ವರ್ಗಾವಣೆ ದಂಧೆ ನಿಜವೆಂಬುದು ಅವರದೇ ಪಕ್ಷದ ಹಿರಿಯ ಶಾಸಕ ಬಿ. ಆರ್. ಪಾಟೀಲರ ಪತ್ರದಿಂದ ಸಾಬೀತಾಗುತ್ತಿದೆ. ಸರ್ಕಾರವು ವರ್ಗಾವಣೆ ದಂಧೆಯಲ್ಲಿ ಮುಳುಗಿರುವ ಅನುಮಾನ ಇದೆ ಎಂದು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಇಂದಿಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ತಿಳಿಸಿದರು.
ಕಾಂಗ್ರೆಸ್ ನವರಿಗೆ ಕೇವಲ ಆಮ್ ಆದ್ಮಿ ಪಕ್ಷದ ಕಾರ್ಯಕ್ರಮಗಳನ್ನು ಕಳ್ಳತನ ಮಾಡುವುದು ಗೊತ್ತಿದೆಯೇ ಹೊರತು, ಭ್ರಷ್ಟಾಚಾರ ಮುಕ್ತ ಸರ್ಕಾರ ಇದ್ದಲ್ಲಿ ಮಾತ್ರ ಈ ರೀತಿಯ ಗ್ಯಾರಂಟಿಗಳನ್ನು ಅನುಷ್ಠಾನಕ್ಕೆ ತರಬಹುದು ಮತ್ತು ದೆಹಲಿ ಮಾದರಿಯ ಸಾಲ ಮುಕ್ತ ಬಜೆಟ್ ಗಳನ್ನು ಘೋಷಿಸಬಹುದು ಎಂಬುದು ಗೊತ್ತಿಲ್ಲ.
ಚುನಾವಣಾ ಅಕ್ರಮಗಳಿಗಾಗಿ ಖರ್ಚು ಮಾಡಿರುವ ಹಣವನ್ನು ಕೂಡಲೇ ಹೇಗಾದರೂ ಮಾಡಿ ವಸೂಲಿ ಮಾಡಿಕೊಳ್ಳಬೇಕೆಂಬ ಧಾವಂತ ಕಾಂಗ್ರೆಸ್ ಶಾಸಕರುಗಳಲ್ಲಿ ಇರುವುದು ಬಿ. ಆರ್. ಪಾಟೀಲರ ಪತ್ರದಿಂದ ಸ್ಪಷ್ಟವಾಗುತ್ತಿದೆ ಎಂಬ ಅನುಮಾನ ರಾಜ್ಯದ ಜನತೆಯಲ್ಲಿ ಹಾಗೂ ನಮ್ಮಲ್ಲೂ ಕಾಡುತ್ತಿದೆ ಎಂದು ಮುಖ್ಯಮಂತ್ರಿ ಚಂದ್ರು ತಿಳಿಸಿದರು.
ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳು ಸರ್ಕಾರದಲ್ಲಿ ಯೋಜನೆಗಳಿಗಾಗಿ ಯಾವುದೇ ಹಣವಿಲ್ಲ. ಶಾಸಕರುಗಳಾರು ಅನುದಾನಕ್ಕಾಗಿ ಒತ್ತಾಯ ಮಾಡಬಾರದೆಂದು ಹೇಳುತ್ತಾರೆ. ಯೋಜನೆಗಳಲ್ಲಿ ಯಾವುದೇ ಕಮಿಷನ್ ಬಾರದ ಈ ಪರಿಸ್ಥಿತಿಯಲ್ಲಿ ಅಧಿಕಾರಿಗಳ ವರ್ಗಾವಣೆ ದಂದೆಯೇ ಇವರಿಗೆ ಗಟ್ಟಿ, ಅಧಿಕಾರಿಗಳ ಮೇಲೆ ಒತ್ತಡ ಹೇರಿ ವಸೂಲಿ ಮಾಡುವುದೊಂದೇ ಈಗಿರುವ ಏಕೈಕ ಮಾರ್ಗ. ಇದರಿಂದಾಗಿ ಮುಂದಿನ ದಿನಗಳಲ್ಲಿ ಜನಸಾಮಾನ್ಯನು ಸರ್ಕಾರಿ ಕಚೇರಿಗಳಲ್ಲಿನ ಭ್ರಷ್ಟಾಚಾರಗಳಿಂದಾಗಿ ಪರಿತಪಿಸುವುದು ಗ್ಯಾರಂಟಿ ಎಂದು ಮುಖ್ಯಮಂತ್ರಿ ಚಂದ್ರು ಆಕ್ರೋಶ ವ್ಯಕ್ತಪಡಿಸಿದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IHoly2pCaZPEkuV6RjAGNC
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA


