ತುಮಕೂರು: ನಗರದ ಟೌನ್ ಹಾಲ್ ವೃತ್ತದ ಬಳಿ ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ. ಪರಮೇಶ್ವರ ಅವರು ಶನಿವಾರ ಹೆಲಿಕಾಪ್ಟರ್ ವೇದಿಕೆ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದರು.
ನಂತರ ಮಾತನಾಡಿದ ಅವರು, ಜಿಲ್ಲೆಯ ಗುಬ್ಬಿ ತಾಲ್ಲೂಕು ಬಿದರೆಹಳ್ಳದ ಬಳಿ ಹೆಚ್ ಎಎಲ್ ಹೆಲಿಕಾಪ್ಟರ್ ತಯಾರಿಕಾ ಘಟಕದ ಕುರುಹಾಗಿ ಪಾಲಿಕೆ ಕಚೇರಿಯ ಹೊರ ಆವರಣದಲ್ಲಿ 30 ಲಕ್ಷ ರೂ. ವೆಚ್ಚದಲ್ಲಿ ಹೆಲಿಕಾಪ್ಟರ್ ಅನ್ನು ಪ್ರದರ್ಶಿಸಲು ವೇದಿಕೆ ನಿರ್ಮಾಣ ಮಾಡಲಾಗುತ್ತಿದೆ. ಜಿಲ್ಲೆಯ ಹಾಗೂ ಹೊರಗಿನಿಂದ ಬರುವವರಿಗೂ ಜಿಲ್ಲೆಯಲ್ಲಿರುವ ಹೆಲಿಕಾಪ್ಟರ್ ತಯಾರಿಕಾ ಕಾರ್ಖಾನೆ ಬಗ್ಗೆ ಮಾಹಿತಿ ತಿಳಿಯಲಿದೆ ಎಂದು ತಿಳಿಸಿದರು.
ಹೆಲಿಕಾಪ್ಟರ್ ಘಟಕದ ಕುರುಹಾಗಿ ೫೦ ಲಕ್ಷ ರೂ. ಮೌಲ್ಯದ ಲೈಟ್ ಯುಟಿಲಿಟಿ ಹೆಲಿಕಾಪ್ಟರ್ (Light Utility Helicopter)ಅನ್ನು ಪ್ರದರ್ಶಿಸಲಾಗುವುದು. ಹೆಲಿಕಾಪ್ಟರ್ ಪ್ರದರ್ಶನಕ್ಕಾಗಿ ೫ ಅಡಿ ಎತ್ತರ ಹಾಗೂ ೫೦ ಅಡಿ ವ್ಯಾಸದ ಸುತ್ತುವ ವೇದಿಕೆ(Rotation Platform)ಯನ್ನು ನಿರ್ಮಾಣ ಮಾಡಲಾಗುವುದು ಎಂದು ಹೇಳಿದರು.
ನಂತರ ಮಾತನಾಡಿದ ಪಾಲಿಕೆ ಆಯುಕ್ತ ಬಿ.ವಿ. ಅಶ್ವಿಜ, ಬಿದರೆಹಳ್ಳದಲ್ಲಿರುವ ಹೆಚ್ ಎಎಲ್ ಹೆಲಿಕಾಪ್ಟರ್ ಕಾರ್ಖಾನೆಯವರು ಎಲ್ ಯುಹೆಚ್ ಹೆಲಿಕಾಪ್ಟರ್ ಅನ್ನು ಕೊಡುಗೆಯಾಗಿ ನೀಡುತ್ತಿದ್ದು, ಮಾರ್ಚ್ ಮಾಹೆ ಅಂತ್ಯಕ್ಕೆ ಹೆಲಿಕಾಪ್ಟರ್ ವೇದಿಕೆಯನ್ನು ಪೂರ್ಣಗೊಳಿಸಲಾಗುವುದು. ವೇದಿಕೆ ನಿರ್ಮಾಣವನ್ನು ಪಾಲಿಕೆ ವತಿಯಿಂದ ಕೈಗೊಳ್ಳಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಶಾಸಕರಾದ ಜಿ.ಬಿ.ಜ್ಯೋತಿಗಣೇಶ್, ಹೆಚ್.ವಿ. ವೆಂಕಟೇಶ್, ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರಭು ಜಿ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ ಕೆ.ವಿ. ಮತ್ತಿತರರು ಭಾಗವಹಿಸಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4