ಬೆಂಗಳೂರು: ರಾಜ್ಯದಲ್ಲಿ ಹುಕ್ಕಾ ಬಾರ್ ನಿಷೇಧಕ್ಕೆ ಚಿಂತನೆ ನಡೆಸಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ರಾಜ್ಯದಲ್ಲಿ ಹುಕ್ಕಾ ಬಾರ್ ನಿಷೇಧ ಮಾಡುವ ಸಂಬಂಧ ಆರೋಗ್ಯ ಇಲಾಖೆ ಮತ್ತು ಯುವಜನ ಸಬಲೀಕರಣ, ಕ್ರೀಡಾ ಇಲಾಖೆಯ ಸಹಯೋಗದಲ್ಲಿ ಸಚಿವರಾದ ದಿನೇಶ್ ಗುಂಡೂರಾವ್ ಮತ್ತು ನಾಗೇಂದ್ರ ನೇತೃತ್ವದಲ್ಲಿ ವಿಕಾಸಸೌಧದಲ್ಲಿ ನಡೆದ ಸಭೆಯ ಬಳಿಕ ಅವರು ಮಾತನಾಡಿದರು.
ಹುಕ್ಕಾ ಬಾರ್ ನಿಂದಚಿಕ್ಕ ಮಕ್ಕಳ ಬಹಳವೇ ಪರಿಣಾಮ ಆಗುತ್ತಿದೆ. ಇದು ತಂಬಾಕು ಸೇವನೆಯ ಪ್ರಕ್ರಿಯೆಯಾಗಿದೆ. ಹುಕ್ಕಾಬಾರ್ ಗೆ ಅವಕಾಶ ಕೊಡಬಾರದು ಅಂತ ಚಿಂತನೆ ಮಾಡಿದ್ದೇವೆ. ಅದಕ್ಕೆ ಕಾನೂನು ತರಲು ಸಭೆಯಲ್ಲಿ ಚರ್ಚೆ ಆಗಿದೆ. ಹುಕ್ಕಾಬಾರ್ ನಿಯಂತ್ರಣ ಮಾಡಲು ಸಾಧ್ಯ ಆಗುತ್ತಿಲ್ಲ. ಅದಕ್ಕೆ ನಾವು ಕಂಟ್ರೋಲ್ ಮಾಡಲು ಮುಂದಾಗಿದ್ದೇವೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಹುಕ್ಕಾ ಬಾರ್ ಅನ್ನು ಕಾನೂನು ವ್ಯಾಪ್ತಿಯಲ್ಲಿ ನಿಯಂತ್ರಣ ಮಾಡಲು ಮುಂದಾಗಿದ್ದೇವೆ. ತಂಬಾಕು ನಿಷೇಧ ವಲಯವನ್ನು ವಿಸ್ತರಣೆ ಮಾಡಲು ಮುಂದಾಗಿದ್ದೇವೆ. ದೇವಸ್ಥಾನ, ಚರ್ಚ್, ಮಸೀದಿ, ಆಸ್ಪತ್ರೆ ಸುತ್ತ ತಂಬಾಕು ವಸ್ತು ಮಾರಾಟಕ್ಕೆ ನಿಷೇಧ ಮಾಡಲು ತಿರ್ಮಾನ ಮಾಡುತ್ತಿದ್ದೇವೆ. ತಂಬಾಕು ಉತ್ಪನ್ನಗಳನ್ನು ಈಗ 18 ವರ್ಷ ಮೇಲ್ಪಟ್ಟವರು ಖರೀದಿ ಮಾಡಲು ಅವಕಾಶ ಇದೆ. ಅದನ್ನು 21 ವರ್ಷಕ್ಕೆ ಏರಿಕೆ ಮಾಡಲು ಚಿಂತನೆ ಮಾಡಿದ್ದೇವೆ ಎಂದು ಅವರು ತಿಳಿಸಿದರು.


