ತುಮಕೂರು: ಸಹಕಾರ ಕ್ಷೇತ್ರದಲ್ಲಿ ದೇಶಕ್ಕೆ ಮಾದರಿ ಆಗುವಂತಹ ಕಾಯ್ದೆ ಜಾರಿಗೆ ತರಲಾಗಿದೆ ಎಂದು ಮಾಜಿ ಸಹಕಾರ ಸಚಿವರೂ ಆದ ಶಾಸಕ ಕೆ.ಎನ್.ರಾಜಣ್ಣ ಶನಿವಾರ ಹೇಳಿದರು.
ನಾನು ಸಚಿವನಾಗಿದ್ದಾಗ ತಿದ್ದುಪಡಿ ಮಾಡಿ ರೂಪಿಸಿರುವ ಕಾನೂನು ಪೂರ್ಣ ಪ್ರಮಾಣದಲ್ಲಿ ಜಾರಿಗೆ ಬಂದ ನಂತರ ಅದರ ಮಹತ್ವ ಜನರಿಗೆ ಅರಿವಾಗುತ್ತದೆ. ಸಹಕಾರ ಕ್ಷೇತ್ರದಲ್ಲಿ ಸಾಕಷ್ಟು ಸುಧಾರಣೆ ತರಲಾಗಿದೆ. ಹೊಸ ಕಾಯ್ದೆ ಬಗ್ಗೆ ಅಕ್ಕಪಕ್ಕದ ರಾಜ್ಯದವರೂ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಸಹಕಾರ ಸಂಘ, ಸಂಸ್ಥೆಗಳಲ್ಲಿ ಚುನಾವಣೆಗೆ ಸ್ಪರ್ಧಿಸುವವರು ತಮ್ಮ ಆಸ್ತಿ ವಿವರ ಸಲ್ಲಿಸುವುದು ಕಡ್ಡಾಯ ಮಾಡಲಾಗಿದೆ. ವಿಧಾನಸಭೆ, ಲೋಕಸಭೆ ಚುನಾವಣೆಯಲ್ಲಿ ಆಸ್ತಿ ವಿವರ ಸಲ್ಲಿಸುವ ರೀತಿಯಲ್ಲಿ ಸಹಕಾರ ಕ್ಷೇತ್ರದ ಚುನಾವಣೆಯಲ್ಲೂ ಆಸ್ತಿ ವಿವರ ನೀಡುವುದು ಕಡ್ಡಾಯವಾಗಿದೆ ಎಂದರು.
ಹಾಲು ಉತ್ಪಾದಕರ ಸಹಕಾರ ಸಂಘಗಳು, ವ್ಯವಸಾಯ ಸೇವಾ ಸಹಕಾರ ಸಂಘಗಳು, ಡಿಸಿಸಿ ಬ್ಯಾಂಕ್, ಅಪೆಕ್ಸ್ ಬ್ಯಾಂಕ್‌ನಲ್ಲಿ ಅಧ್ಯಕ್ಷ, ಉಪಾಧ್ಯಕ್ಷರ ಸ್ಥಾನಕ್ಕೂ ಮೀಸಲಾತಿ ತರಲಾಗಿದೆ. ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷರಿಗೆ ಇರುವಂತೆ ಇಲ್ಲೂ ಮೀಸಲಾತಿ ಕಲ್ಪಿಸಲಾಗಿದೆ. ಸಹಕಾರ ಸಂಘ, ಸಂಸ್ಥೆಗಳ ಲೆಕ್ಕಪರಿಶೋಧನೆಗೂ ಬದಲಾವಣೆ ತರಲಾಗಿದೆ ಎಂದು ವಿವರಿಸಿದರು.
ಸರ್ಕಾರದ ನೆರವು ಪಡೆಯುವ ಖಾಸಗಿ ಸಂಸ್ಥೆಗಳು, ಡೇರಿ, ವ್ಯವಸಾಯ ಸೇವಾ ಸಂಘಗಳು ಸೇರಿದಂತೆ ಎಲ್ಲ ಸಹಕಾರ ಸಂಸ್ಥೆಗಳಿಗೂ ಮೂವರು ನಾಮನಿರ್ದೇಶನ ಮಾಡುವ ಕಾನೂನು ಜಾರಿಯಾಗಿದೆ. ಅದರಲ್ಲಿ ತಲಾ ಒಬ್ಬರು ಎಸ್ ಸಿ, ಎಸ್ ಟಿ ಹಾಗೂ ಇತರರು ಇರುತ್ತಾರೆ. ಆಯ್ಕೆ ಆಗಿರುವ ಸದಸ್ಯರ ಜಾತಿಯನ್ನು ಹೊರತುಪಡಿಸಿ, ಇತರೆ ಜಾತಿಯವರನ್ನು ನಾಮನಿರ್ದೇಶನ ಮಾಡಬೇಕಿದೆ ಎಂದು ಮಾಹಿತಿ ನೀಡಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC