ತುಮಕೂರು: ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಡೆಂಗ್ಯೂ, ಚಿಕುಂಗುನ್ಯಾ, ಮೆದುಳುಜ್ವರ, ಆನೆ ಕಾಲು ರೋಗ, ಮಲೇರಿಯಾ ನಿಯಂತ್ರಣದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕೆಂದು ಅಪರ ಜಿಲ್ಲಾಧಿಕಾರಿ ಡಾ.ಎನ್. ತಿಪ್ಪೇಸ್ವಾಮಿ ಮಲೇರಿಯಾ ಅಧಿಕಾರಿ ಡಾ.ಕೆ.ಎಸ್. ರಂಗನಾಥ್ ಅವರಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿಯ ನ್ಯಾಯಾಲಯ ಸಭಾಂಗಣದಲ್ಲಿ ಸೋಮವಾರ ರಾಷ್ಟ್ರೀಯ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ, ತಾಯಿ ಮರಣ ಮತ್ತು ಶಿಶು ಮರಣ ಪ್ರಕರಣಗಳ ಪರಿಶೀಲನೆಗೆ ಸಂಬಂಧಿಸಿದಂತೆ ಅಂತರ ಇಲಾಖಾ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಮಲೇರಿಯ, ಡೆಂಗ್ಯೂ, ಚಿಕುಂಗುನ್ಯಾ, ಮೆದುಳುಜ್ವರ, ಆನೆ ಕಾಲು ರೋಗದ ಪ್ರಕರಣಗಳು ಬಾರದಂತೆ ಶಾಲಾ–ಕಾಲೇಜು, ವಸತಿ ನಿಲಯಗಳಲ್ಲಿಯೂ ಅರಿವು ಕಾರ್ಯಕ್ರಮಗಳನ್ನು ಏರ್ಪಡಿಸಬೇಕು ಎಂದು ಸೂಚಿಸಿದರು.
ಸೊಳ್ಳೆಗಳ ಮೂಲಕ ಡೆಂಗ್ಯೂ, ಚಿಕುಂಗುನ್ಯಾ, ಮೆದುಳುಜ್ವರ ರೋಗಗಳು ಹರಡುತ್ತಿದ್ದು, ಸೊಳ್ಳೆಗಳನ್ನು ನಿಯಂತ್ರಿಸಲು ಮನೆಯ ಸುತ್ತ-ಮುತ್ತ ನೀರು ನಿಲ್ಲದಂತೆ ಎಚ್ಚರವಹಿಸುವ; ಸ್ವಚ್ಛತೆ ಕಾಪಾಡಿಕೊಳ್ಳುವ; ನೀರಿನ ಬಾವಿ, ಕಾರಂಜಿ, ಕೆರೆ–ಕುಂಟೆ, ಹೊಂಡಗಳಿಗೆ ಸೊಳ್ಳೆ ಮರಿಗಳನ್ನು ತಿನ್ನುವ; ಗ್ಯಾಂಬೂಸಿಯಾ ಮತ್ತು ಗಪ್ಪಿ ಲಾರ್ವಾಹಾರಿ ಮೀನುಗಳನ್ನು ಬಿಡುವ; ಹಠಾತ್ತನೆ ಬರುವ ತೀವ್ರ ಜ್ವರ, ತಲೆ ನೋವು, ವಾಕರಿಕೆ ಲಕ್ಷಣಗಳು ಕಂಡು ಬಂದಾಗ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯುವ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ಆರೋಗ್ಯ, ಮಹಾನಗರಪಾಲಿಕೆ, ಶಿಕ್ಷಣ, ಮೀನುಗಾರಿಕೆ, ಸಮಾಜ ಕಲ್ಯಾಣ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸೇರಿದಂತೆ ಸಂಬAಧಿಸಿದ ಇಲಾಖಾಧಿಕಾರಿಗಳಿಗೆ ಸೂಚನೆ ನೀಡಿದರು.
ಮಲೇರಿಯಾ ಅಧಿಕಾರಿ ಡಾ.ಕೆ.ಎಸ್.ರಂಗನಾಥ್ ಮಾತನಾಡಿ ಜಿಲ್ಲೆಯಲ್ಲಿ 2020 ರಿಂದ 2025ರ ಏಪ್ರಿಲ್ ಮಾಹೆವರೆಗೆ 40 ಮಲೇರಿಯಾ, 305 ಮೈಕ್ರೋಫೈಲೇರಿಯಾ, 1807 ಡೆಂಗ್ಯೂ, 566 ಚಿಕುಂಗುನ್ಯಾ ಪ್ರಕರಣಗಳು ದೃಢಪಟ್ಟಿವೆ. ದೃಢಪಟ್ಟ ಎಲ್ಲಾ ಮಲೇರಿಯಾ ಹಾಗೂ ಮೈಕ್ರೋಫೈಲೇರಿಯಾ ಪ್ರಕರಣಗಳು ಇತರೆ ರಾಜ್ಯ ಮತ್ತು ಬೇರೆ ಜಿಲ್ಲೆಗಳಿಗೆ ಸೇರಿದ ಪ್ರಕರಣಗಳಾಗಿವೆ ಎಂದು ಮಾಹಿತಿ ನೀಡಿದರು.
ಆರ್ ಸಿಹೆಚ್ ಅಧಿಕಾರಿ ಡಾ.ಸಿ.ಆರ್. ಮೋಹನ್ ಅವರು ತಾಯಿ ಮರಣ ಮತ್ತು ಶಿಶು ಮರಣ ಪ್ರಕರಣಗಳ ಬಗ್ಗೆ ಮಾಹಿತಿ ನೀಡುತ್ತಾ, ಕಳೆದ 2024ರ ಎಪ್ರಿಲ್ ಮಾಹೆಯಿಂದ ಮಾರ್ಚ್ 2025ರವರೆಗೆ ಜಿಲ್ಲೆಯಲ್ಲಿ ಜನಿಸಿದ 28505 ಜೀವಂತ ಮಕ್ಕಳ ಪೈಕಿ 292 ಮಕ್ಕಳು ಹಾಗೂ 19 ತಾಯಿ ಮರಣ ಪ್ರಕರಣಗಳು ವರದಿಯಾಗಿವೆ. ಚಿಕ್ಕನಾಯಕನಹಳ್ಳಿ ತಾಲ್ಲೂಕಿನಲ್ಲಿ 14, ಗುಬ್ಬಿ–16, ಕೊರಟಗೆರೆ–13, ಕುಣಿಗಲ್–8, ಮಧುಗಿರಿ–10, ಪಾವಗಡ– 14, ಶಿರಾ ಮತ್ತು ತಿಪಟೂರು ತಲಾ 19, ತುಮಕೂರು– 170, ತುರುವೇಕೆರೆ–9 ಸೇರಿದಂತೆ ಒಟ್ಟು 292 ಮಕ್ಕಳು ಹಾಗೂ ಚಿಕ್ಕನಾಯಕನಹಳ್ಳಿ, ಶಿರಾ, ತಿಪಟೂರು ತಾಲ್ಲೂಕಿನಲ್ಲಿ ತಲಾ 2, ಮಧುಗಿರಿ, ಪಾವಗಡ ತಾಲ್ಲೂಕಿನಲ್ಲಿ ತಲಾ 1, ತುಮಕೂರು ತಾಲ್ಲೂಕಿನಲ್ಲಿ 11 ಸೇರಿದಂತೆ 19 ತಾಯಿ ಮರಣ ಪ್ರಕರಣಗಳು ವರದಿಯಾಗಿವೆ. ಹಿಂದಿನ ವರ್ಷಗಳ ಅಂಕಿ–ಅಂಶಗಳನ್ನು ಹೋಲಿಸಿದಾಗ ಪ್ರಸಕ್ತ ವರ್ಷದಲ್ಲಿ ತಾಯಿ ಮತ್ತು ಶಿಶುವಿನ ಮರಣ ಪ್ರಮಾಣ ತಗ್ಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಹವಾಮಾನ ಬದಲಾವಣೆ ಮತ್ತು ಮಾನವ ಆರೋಗ್ಯದ ರಾಷ್ಟ್ರೀಯ ಕಾರ್ಯಕ್ರಮ ಕುರಿತ ಪೋಸ್ಟರ್ ಬಿಡುಗಡೆ ಮಾಡಲಾಯಿತು.
ಪೋಸ್ಟರ್ ಬಿಡುಗಡೆ ನಂತರ ಸಭೆಗೆ ಮಾಹಿತಿ ನೀಡಿದ ಮಲೇರಿಯಾ ಅಧಿಕಾರಿ ಡಾ.ಕೆ.ಎಸ್.ರಂಗನಾಥ್ ಅವರು ಬಿಸಿಲಿನ ಶಾಖದಿಂದ ಮಕ್ಕಳಲ್ಲಿ ಕಾಣಿಸಿಕೊಳ್ಳುವ ಆರೋಗ್ಯ ಸಮಸ್ಯೆ, ಸೂರ್ಯಾಘಾತದ ನಿರ್ವಹಣೆ, ಸೂರ್ಯಾಘಾತಕ್ಕೆ ಪ್ರಥಮ ಚಿಕಿತ್ಸಾ ಕ್ರಮಗಳ ಬಗ್ಗೆ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಶಾಲಾ ಮಕ್ಕಳಿಗೆ ಪ್ರಾರ್ಥನಾ ಸಮಯದಲ್ಲಿ ಅರಿವು ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.
ಸಭೆಯಲ್ಲಿ ಡಾ.ಪ್ರಭಾ, ಆರೋಗ್ಯ ಇಲಾಖೆಯ ವಿವಿಧ ಅಧಿಕಾರಿ/ಸಿಬ್ಬಂದಿ, ಲೋಕೋಪಯೋಗಿ ಇಲಾಖೆ, ಶಿಕ್ಷಣ ಇಲಾಖೆ, ವಾರ್ತಾ ಇಲಾಖೆ, ವಿವಿಧ ವೈದ್ಯಕೀಯ ಕಾಲೇಜಿನ ಮುಖ್ಯಸ್ಥರು ಸೇರಿದಂತೆ ಮತ್ತಿತರರು ಹಾಜರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW
————————————