ಬೀದರ್: ಭಾರತ ಮತ್ತು ಆಸ್ಟ್ರೇಲಿಯಾ ಕ್ರಿಕೆಟ್ ತಂಡಗಳ ನಡುವೆ ನಡೆಯುತ್ತಿದ್ದ ಚಾಂಪಿಯನ್ಸ್ ಟ್ರೋಫಿ–2025 ಪಂದ್ಯದ ವೇಳೆ ಸಾರ್ವಜನಿಕರಿಂದ ಹಣ ಪಡೆದುಕೊಂಡು ಕ್ರಿಕೆಟ್ ಆಟದ ಮೇಲೆ ಕಾನೂನು ಬಾಹಿರವಾಗಿ ಬೆಟ್ಟಿಂಗ್ ಕಟ್ಟಿಕೊಂಡು ಹಣ ಪಡೆಯುತ್ತಿದ್ದ ಅಡ್ಡೆ ಮೇಲೆ ಬೀದರ್ ಸೆನ್ ಪೊಲೀಸರು ದಾಳಿ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿ, ವಾಹನ ಹಾಗೂ ನಗದು ವಶಕ್ಕೆ ಪಡೆದುಕೊಂಡಿದ್ದಾರೆ.
ಬೀದರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಅವರ ನಿರ್ದೇಶನದಂತೆ ಬೀದರ್ ಸೆನ್ ಪೊಲೀಸ್ ಠಾಣೆಯ ಪೊಲೀಸ್ ಉಪಾಧೀಕ್ಷಕರಾದ ಎನ್.ಡಿ ಸನಾದಿ ಅವರ ನೇತೃತ್ವದಲ್ಲಿ ದಾಳಿ ನಡೆಸಲಾಯಿತು.
ಬೆಟ್ಟಿಂಗ್ ನಲ್ಲಿ ನಿರತರಾಗಿದ್ದ ಆರೋಪಿಗಳಿಂದ 17 ಸಾವಿರ ರೂ. ನಗದು, 2 ಮೊಬೈಲ್ ಹಾಗೂ 1 ಕಾರು ಸೇರಿದಂತೆ ಒಟ್ಟು 10,41,000 ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದು ಆರೋಪಿಗಳ ವಿರುದ್ಧ ಕಾನೂನು ರೀತಿಯ ಕ್ರಮ ಕೈಗೊಳ್ಳಲಾಯಿತು.
ಕಾರ್ಯಾಚರಣೆಯಲ್ಲಿ ಸಿಬ್ಬಂದಿಗಳಾದ ಸಿದ್ರಾಮೇಶ, ಪ್ರಶಾಂತ, ಸಂಜುಕುಮಾರ ಭಾಗವಹಿಸಿದ್ದರು. ಬೆಟ್ಟಿಂಗ್ ಜೂಜಾಟದ ಮೇಲೆ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು ಹಾಗೂ ಪೊಲೀಸ್ ಸಿಬ್ಬಂದಿಯ ಕಾರ್ಯಕ್ಕೆ ಬೀದರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಶ್ಲಾಘಿಸಿದ್ದಾರೆ.
ವರದಿ: ಅರವಿಂದ ಮಲ್ಲಿಗೆ, ಬೀದರ್
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4