ರಾಷ್ಟ್ರ ರಾಜಧಾನಿಯಲ್ಲಿ ಮತ್ತೊಂದು ಚಾಕು ದಾಳಿ ನಡೆದಿದ್ದು, ಇಬ್ಬರು ಶಾಲಾ ವಿದ್ಯಾರ್ಥಿಗಳು ಸೇರಿದಂತೆ ಮೂವರಿಗೆ ಚಾಕುವಿನಿಂದ ಇರಿದಿದ್ದಾರೆ. ದೆಹಲಿಯ ನರೇಲಾ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಗಂಭೀರವಾಗಿ ಗಾಯಗೊಂಡ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ನರೇಲಾ ಪ್ರದೇಶದ ರಾಮದೇವ್ ಚೌಕ್ ನಲ್ಲಿ ಈ ಘಟನೆ ನಡೆದಿದೆ. ವ್ಯಕ್ತಿಯೊಬ್ಬ ಚಾಕುವಿನಿಂದ ಇಬ್ಬರು ಹುಡುಗರ ಮೇಲೆ ದಾಳಿ ಮಾಡಿದ. ಮಕ್ಕಳನ್ನು ಉಳಿಸಲು ಪ್ರಯತ್ನಿಸುತ್ತಿರುವಾಗ ಮೂರನೆಯವನಿಗೆ ಇರಿದಿದ್ದಾನೆ. ಒಬ್ಬ ವಿದ್ಯಾರ್ಥಿಗೆ ಎಡ ಭುಜದ ಬಳಿ ಮತ್ತು ಮತ್ತೊಬ್ಬ ವಿದ್ಯಾರ್ಥಿಗೆ ಹಿಂಬದಿಯಿಂದ ಇರಿದಿದ್ದಾನೆ.
ಮಕ್ಕಳನ್ನು ರಕ್ಷಿಸಲು ಓಡಿ ಬಂದ ಯುವಕನ ತಲೆ, ಮುಖ, ಕೈಗೆ ಹಲವು ಬಾರಿ ಇರಿದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಮೂವರನ್ನು ಎಸ್ ಆರ್‌ಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಷ್ಟರಲ್ಲಿ ಆರೋಪಿಯನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಆರೋಪಿ ಮಾನಸಿಕ ಅಸ್ವಸ್ಥ ಎಂದು ಪೊಲೀಸರು ತಿಳಿಸಿದ್ದಾರೆ.


