ರಾಜಸ್ಥಾನದ ನಾಗೌರ್ನಲ್ಲಿ ಚುನಾವಣಾ ಪ್ರಚಾರ ಕೈಗೊಂಡಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಪ್ರಯಾಣಿಸುತ್ತಿದ್ದ ರಥಕ್ಕೆ ವಿದ್ಯುತ್ ತಂತಿ ತಗುಲಿದ್ದು, ಸ್ವಲ್ಪದರಲ್ಲೇ ಅಪಾಯದಿಂದ ಪಾರಾಗಿದ್ದಾರೆ.
ರಾಜಸ್ಥಾನದ ನಾಗೌರ್ ನಲ್ಲಿ ಅಮಿತ್ ಶಾ ಅವರು ಪ್ರಯಾಣಿಸುತ್ತಿದ್ದ ರಥವೊಂದು ವಿದ್ಯುತ್ ತಂತಿಗೆ ತಗುಲಿತು. ಚುನಾವಣಾ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಲು ಅಮಿತ್ ಶಾ ಅವರು ಬಿದಿಯಾದ್ ಗ್ರಾಮದಿಂದ ಪರ್ಬತ್ ಸರ್‌ಗೆ ತೆರಳುತ್ತಿದ್ದಾಗ ಈ ಘಟನೆ ಸಂಭವಿಸಿದೆ.
ಪರ್ಬತ್ ಸರ್ ನಲ್ಲಿ ಎರಡೂ ಬದಿಗಳಲ್ಲಿ ಅಂಗಡಿಗಳು ಮತ್ತು ಮನೆಗಳಿರುವ ಲೇನ್ ಮೂಲಕ ಹಾದು ಹೋಗುವಾಗ, ವಿಶೇಷವಾಗಿ ವಿನ್ಯಾಸಗೊಳಿಸಲಾದ ಅವರ ವಾಹನದ (ರಥ) ಮೇಲಿನ ಭಾಗವು ವಿದ್ಯುತ್ ಲೈನ್ ಗೆ ಸ್ಪರ್ಶಿಸಲ್ಪಟ್ಟಿತು. ಕೂಡಲೇ ಸ್ಪಾರ್ಕ್ ಉಂಟಾಗಿ ಕಿಡಿ ಹುಟ್ಟಿಕೊಂಡಿತು.
ಷಾ ಅವರ ‘ರಥ’ದ ಹಿಂದೆ ಇದ್ದ ಇತರ ವಾಹನಗಳನ್ನು ತಕ್ಷಣವೇ ನಿಲ್ಲಿಸಿ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಯಿತು. ತಕ್ಷಣ ಎಚ್ಚೆತ್ತುಕೊಂಡ ಭದ್ರತಾ ಸಿಬ್ಬಂದಿ ವಾಹನ ನಿಲ್ಲಿಸಿ ಸಂಭವಿಸಲಿದ್ದ ಅನಾಹುತವನ್ನು ತಪ್ಪಿಸಿದ್ದಾರೆ. ಘಟನೆಯ ನಂತರ ಕೇಂದ್ರ ಗೃಹ ಸಚಿವರು ರೋಡ್ ಶೋವನ್ನು ರದ್ದುಗೊಳಿಸಿದ್ದು, ಅಲ್ಲಿಂದ ಕಾರಿನಲ್ಲಿ ತೆರಳಿದರು. ಘಟನೆಯ ಕುರಿತು ತನಿಖೆ ನಡೆಸಲಾಗುವುದು ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಹೇಳಿದ್ದಾರೆ.


