ತುಮಕೂರು: ನಗರದ ಕೋಟೆ ಆಂಜನೇಯಸ್ವಾಮಿ ದೇವಾಲಯದಲ್ಲಿ ಹನುಮ ಜಯಂತಿ ಆಚರಣೆ ಅದ್ದೂರಿಯಾಗಿ ನೆರವೇರಿತು. ಇದೇ ವೇಳೆ ಡಾ.ಜಿ.ಪರಮೇಶ್ವರ ಅವರು ಕರ್ನಾಟಕದ ಮುಂದಿನ ಮುಖ್ಯಮಂತ್ರಿಯಾಗಲಿ ಎಂದು ದಲಿತ ಸಮುದಾಯದ ಭಕ್ತರು 101 ತೆಂಗಿನಕಾಯಿ ಹೊಡೆದು ಪೂಜೆ, ಅನ್ನ ಸಂತರ್ಪಣೆ, ಹಾಗೂ ಉರುಳು ಸೇವೆ ನೆರವೇರಿಸಿದರು.
ಹನುಮ ಜಯಂತಿಯ ಪ್ರಯುಕ್ತ ಬೆಳಿಗ್ಗೆ ಸುಮಾರು 7 ಗಂಟೆಯಿಂದಲೇ ಭಕ್ತರು ದೇವಾಲಯಕ್ಕೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು. ಇದೇ ವೇಳೆ ಪರಮೇಶ್ವರ್ ಅವರ ಅಭಿಮಾನಿಗಳು, ದಲಿತ ಮುಖಂಡರು ತಮ್ಮ ಮೆಚ್ಚಿನ ನಾಯಕನಿಗೆ ಮುಖ್ಯಮಂತ್ರಿ ಸ್ಥಾನ ಸಿಗಲಿ ಎಂದು ಹಾರೈಸಿದರು.
ಪೂಜೆ ನಂತರ ಸುಮಾರು 500ಕ್ಕೂ ಹೆಚ್ಚು ಭಕ್ತರಿಗೆ ಅನ್ನ ಸಂತರ್ಪಣೆ ಮಾಡಲಾಯಿತು. ದೇವಾಲಯದ ಮುಂಭಾಗದಲ್ಲಿ ವಿಶೇಷ ಕುಳಿತುಕೊಳ್ಳುವ ವ್ಯವಸ್ಥೆ ಮಾಡಲಾಗಿದ್ದು, ಭಕ್ತರು ಅನ್ನಪ್ರಸಾದ ಸ್ವೀಕರಿಸಿದರು. ವಿದ್ಯಾರ್ಥಿಗಳು, ಮಹಿಳೆಯರು, ಹಿರಿಯ ನಾಗರಿಕರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಡಾ.ಜಿ.ಪರಮೇಶ್ವರ್ ಅವರು ಸಿಎಂ ಆಗಲೆಂದು ಇದೇ ವೇಳೆ ದಲಿತ ಮುಖಂಡರು ಮತ್ತು ಯುವಕರು ಉರುಳು ಸೇವೆ ನಡೆಸಿದರು. ದೇವಾಲಯದ ಬಾಗಿಲಿನಿಂದ ಕೋಟೆ ವೃತ್ತದವರೆಗೆ ಸುಮಾರು 150 ಮೀಟರ್ ದೂರ ನೆಲದ ಮೇಲೆ ಉರುಳು ಸೇವೆ ನಡೆಸಲಾಯಿತು. ಈ ವೇಳೆ ದಲಿತ ಸಿಎಂ ಬೇಕೇ ಬೇಕು!, ಡಾ. ಜಿ. ಪರಮೇಶ್ವರರಿಗೆ ಮುಖ್ಯ ಮಂತ್ರಿ ಸ್ಥಾನ ನೀಡಿ, ಸಮಾನತೆ ನಮ್ಮ ಹಕ್ಕು ಎಂಬ ಘೋಷಣೆಗಳು ಮೊಳಗಿದವು. ಭಕ್ತರೂ ಸಹ ಈ ಘೋಷಣೆಗಳಿಗೆ ಬೆಂಬಲವಾಗಿ ಕೈ ತಟ್ಟಿ ಸಾಥ್ ನೀಡಿದರು.
ಕಾರ್ಯಕ್ರಮಕ್ಕೆ ಹೆಚ್ಚಿನ ಜನರ ಆಗಮನದ ಹಿನ್ನೆಲೆಯಲ್ಲಿ ಟ್ರಾಫಿಕ್ ಪೊಲೀಸ್ ಹಾಗೂ ಬಿಟ್ ಪೊಲೀಸ್ ಸಿಬ್ಬಂದಿಯನ್ನು ಸ್ಥಳದಲ್ಲೇ ನಿಯೋಜಿಸಲಾಗಿತ್ತು. ಯಾವುದೇ ಅಹಿತಕರ ಘಟನೆಗಳು ನಡೆಯದೇ ಶಾಂತಿಯುತವಾಗಿ ಕಾರ್ಯಕ್ರಮ ಪೂರ್ಣಗೊಂಡಿತು.
ದಲಿತರು ರಾಜಕೀಯವಾಗಿ ಬಲಶಾಲಿಯಾಗಿದ್ದರೂ, ಮುಖ್ಯಮಂತ್ರಿ ಸ್ಥಾನ ಇನ್ನೂ ನಮ್ಮ ಸಮುದಾಯಕ್ಕೆ ಸಿಕ್ಕಿಲ್ಲ, ನಮ್ಮ ಆಶಯದ ಪ್ರತೀಕರಾಗಿ, ನಮ್ಮ ನಾಯಕ ಡಾ.ಜಿ.ಪರಮೇಶ್ವರರು ಮುಖ್ಯಮಂತ್ರಿ ಆಗಲೆಂದು ನಾವು ದೇವರಲ್ಲಿ ಪ್ರಾರ್ಥಿಸಿದ್ದೇವೆ ಎಂದು ಇದೇ ವೇಲೆ ದಲಿತ ಮುಖಂಡರು ತಿಳಿಸಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


