ತಿಪಟೂರು: ದಲಿತ ಮುಖಂಡರು ಉಪ ವಿಭಾಗಧಿಕಾರಿ ಕಚೇರಿಗೆ ತೆರಳಿದ ಸಂದರ್ಭ ಉಪ ವಿಭಾಗಾಧಿಕಾರಿ ದಿಗ್ವಿಜಯ ಬೊಡ್ಕೆ ಅವರು ಜಾತಿ ನಿಂದನೆ ಮಾಡಿ, ಅವಮಾನಿಸಿದ್ದಾರೆ ಎಂದು ಆದಿಜಾಂಬವ ಮಹಾಸಭಾ ಆರೋಪಿಸಿದೆ.
ತಿಪಟೂರು ಕಚೇರಿಯಲ್ಲಿ ಹಲವು ಪ್ರಗತಿಪರ ಸಂಘಟನೆಗಳ ಜೊತೆಗೆ ಕರೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆಯ ಮುಖಂಡರು, ದಿನಾಂಕ: 04-12-2021ರಂದು ದಲಿತ ಮುಖಂಡರಾದ ನರಸಿಂಹಯ್ಯ, ರಂಗಸ್ವಾಮಿ ಕುಪ್ಪಾಳು, ಬಸವರಾಜು ಮತ್ತು ಮಧುಸೂದನ್ ಅವರು ಪೆದ್ದಿಹಳ್ಳಿ ರಂಗಮ್ಮ ನವರ ಖಾತೆ ಬದಲಾವಣೆ ಬಗ್ಗೆ ಮಾತನಾಡಲು ಉಪ ವಿಭಾಗಧಿಕಾರಿ ಕಚೇರಿಗೆ ತೆರಳಿದ್ದು, ಈ ವೇಳೆ ಬಹಳ ವಿನಂಮ್ರತೆಯಿಂದ ಕೈ ಮುಗಿದು ಕಚೇರಿಯ ಒಳಗೆ ಹೋಗಿದ್ದೇವು.
ಈ ವೇಳೆ ಉಪ ವಿಭಾಗಾಧಿಕಾರಿಗಳು ಕರೆದು ನೀವು ಯಾರು? ಏಕೆ ಬಂದಿದ್ದೀರಿ? ಎಂದು ಕೇಳಿದಾಗ ನಾವು ದಲಿತ ಮುಖಂಡರು, ನಿಮಗೆ ಗೊತ್ತಿಲ್ಲವೇ ಎಂದು ವಿಚಾರಿಸಿದಾಗ ಅವರು, ಬೆಲ್ ಮಾಡಿ ಜವಾನನನ್ನು ಕರೆದು, ಇವರನ್ನು ಯಾರು ಒಳಗೆ ಬಿಟ್ಟವರು ಎಂದು ಜಾತಿನಿಂದನೆ ಮಾಡಿದ್ದಲ್ಲದೇ ಅವಮಾನ ಮಾಡಿ ಏಕವಚನದಲ್ಲಿ ಬೈದು ಹೊರಗೆ ಕಳುಹಿಸಿದ್ದಾರೆ ಎಂದು ಅವರು ಆರೋಪಿಸಿದರು.
ದಲಿತರ ಬಗ್ಗೆ ಉಪ ವಿಭಾಗಾಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಆರೋಪಿಸಿರುವ ಸಂಘಟನೆಯ ಮುಖಂಡರು, ಇವರು ಅಧಿಕಾರ ವಹಿಸಿಕೊಂಡು ವರ್ಷ ಕಳೆದರೂ ಈವರೆಗೆ ಒಂದೇ ಒಂದು ದಲಿತ ಕುಂದುಕೊರತೆ ಸಭೆ ಕೂಡ ನಡೆಸಿಲ್ಲ ಎಂದು ದೂರಿದರು.
ಜಾತಿವಾದಿಯಾಗಿರುವ ಉಪವಿಭಾಗ ಅಧಿಕಾರಿ ದಿಗ್ವಿಜಯ ಬೋಡ್ಕೆ ಅವರ ಮೇಲೆ ತಕ್ಷಣವೇ ಕಾನೂನು ರೀತಿಯ ಕ್ರಮವನ್ನು ಸರ್ಕಾರ ಜರಗಿಸಬೇಕು. ಇಲ್ಲವಾದರೆ, ಡಿಸೆಂಬರ್ 16ರಂದು ಘಟನೆಯನ್ನು ಖಂಡಿಸಿ ಉಪ ವಿಭಾಗಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ದಲಿತ ಪರ ಸಂಘಟನೆಗಳು ಧರಣಿ ಸತ್ಯಾಗ್ರಹ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಪ್ರಗತಿಪರ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.
ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com
ವಾಟ್ಸಾಪ್ ಗ್ರೂಪ್ ಸೇರಿ:
https://chat.whatsapp.com/E7Brl0d8zXCJogP6c6GRcZ
ಜಾಹೀರಾತುಗಳಿಗಾಗಿ ಸಂಪರ್ಕಿಸಿ: 97417 17700