ಕೋವಿಶೀಲ್ಡ್ ಲಸಿಕೆ ನೀಡಿದ ಬಳಿಕ ಮೃತಪಟ್ಟಿದ್ದಾರೆ ಎನ್ನಲಾದ ಯುವತಿಯ ಪೋಷಕರು, ಜಗತ್ತಿನ ಅತಿ ದೊಡ್ಡ ಲಸಿಕೆ ಉತ್ಪಾದಕ ಸಂಸ್ಥೆಯಾಗಿರುವ ಬ್ರಿಟಿಷ್ ಔಷಧ ತಯಾರಿಕಾ ದಿಗ್ಗಜ ಆಸ್ಟ್ರಾಜೆನಿಕಾ ವಿರುದ್ಧ ದಾವೆ ಹೂಡಲು ಉದ್ದೇಶಿಸಿದ್ದಾರೆ. ತನ್ನ ಕೋವಿಡ್ ಲಸಿಕೆಯು ರಕ್ತ ಹೆಪ್ಪುಗಟ್ಟುವಿಕೆ ಮತ್ತು ಪ್ಲೇಟ್ ಲೆಟ್ ಗಳ ಸಂಖ್ಯೆಯನ್ನು ಕಡಿಮೆ ಮಾಡುವ ಅಪರೂಪದ ಅಡ್ಡ ಪರಿಣಾಮಗಳನ್ನು ಉಂಟುಮಾಡಬಹುದು ಎಂದು ಬ್ರಿಟನ್ ನ್ಯಾಯಾಲಯದಲ್ಲಿ ಆಸ್ಟ್ರಾಜೆನಿಕಾ ಒಪ್ಪಿಕೊಂಡ ಬಳಿಕ ಅವರು ಈ ಚಿಂತನೆ ನಡೆಸಿದ್ದಾರೆ.
ಭಾರತದಲ್ಲಿ ಸೀರಮ್ ಇನ್ ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್‌ಐಐ) ಸಂಸ್ಥೆಯು ‘ಕೋವಿಶೀಲ್ಡ್’ ಹೆಸರಿನಲ್ಲಿ ಆಸ್ಟ್ರಾಜೆನಿಕಾ ಲಸಿಕೆಯನ್ನು ಉತ್ಪಾದಿಸುತ್ತಿದ್ದು, ವ್ಯಾಪಕವಾಗಿ ವಿತರಿಸಲಾಗಿತ್ತು. ಈ ವಿವಾದದ ಕುರಿತು ಎಸ್‌ಐಐ ಇನ್ನೂ ಹೇಳಿಕೆ ನೀಡಿಲ್ಲ. 2021ರಲ್ಲಿ ಕೋವಿಡ್ ಲಸಿಕೆ ಪಡೆದುಕೊಂಡ ಬಳಿಕ ವೇಣುಗೋಪಾಲನ್ ಗೋವಿಂದನ್ ಅವರು ತಮ್ಮ 20 ವರ್ಷದ ಮಗಳನ್ನು ಕಳೆದುಕೊಂಡಿದ್ದರು. ಅಡ್ಡಪರಿಣಾಮಗಳ ಕುರಿತು ಆಸ್ಟ್ರಾಜೆನಿಕಾ ಒಪ್ಪಿಕೊಂಡಿರುವುದು ತೀರಾ ತಡವಾಗಿದೆ ಮತ್ತು ಅನೇಕ ಮಂದಿ ಜೀವ ಕಳೆದುಕೊಂಡ ಬಳಿಕ ಈ ಹೇಳಿಕೆ ಬಂದಿದೆ ಎಂದು ಗೋವಿಂದನ್ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಕ್ತ ಹೆಪ್ಪುಗಟ್ಟುವಿಕೆಯಿಂದ ಸಾವಿನ ಪ್ರಕರಣಗಳು ವರದಿಯಾದ ನಂತರ 15 ಯುರೋಪಿಯನ್ ದೇಶಗಳು ಲಸಿಕೆ ಬಳಕೆಯನ್ನು ನಿಯಂತ್ರಿಸಿದ್ದವು. ಇದರಿಂದ ಎಚ್ಚೆತ್ತುಕೊಂಡು ಸೀರಮ್ ಇನ್‌ಸ್ಟಿಟ್ಯೂಟ್ ಲಸಿಕೆ ಪೂರೈಕೆಯನ್ನು ನಿಲ್ಲಿಸಬೇಕಿತ್ತು. ದುಃಖಿತ ಪೋಷಕರು ವಿವಿಧ ನ್ಯಾಯಾಲಯಗಳಲ್ಲಿ ನ್ಯಾಯಕ್ಕಾಗಿ ಹೋರಾಡುತ್ತಿದ್ದಾರೆ. ಆದರೆ ಅವರ ಅಹವಾಲನ್ನು ಯಾರೂ ಆಲಿಸುತ್ತಿಲ್ಲ ಎಂದು ಅವರು ಆನ್‌ಲೈನ್‌ನಲ್ಲಿ ಬರೆದುಕೊಂಡಿದ್ದಾರೆ. “ಸಮರ್ಪಕ ಪರಿಹಾರಗಳು ಸಿಗದೆ ಹೋದರೆ, ನ್ಯಾಯದ ಸಲುವಾಗಿ ಮತ್ತು ಸಾರ್ವಜನಿಕ ಆರೋಗ್ಯದ ಹೆಸರಿನಲ್ಲಿ ನಡೆಸಲಾದ ಈ ದೌರ್ಜನ್ಯದ ಪುನರಾವರ್ತನೆಯನ್ನು ತಡೆಯಲು ನಮ್ಮ ಮಕ್ಕಳ ಸಾವಿಗೆ ಕಾರಣವಾದ ಈ ಎಲ್ಲ ಅಪರಾಧಿಗಳ ವಿರುದ್ಧ ನಾವು ಹೊಸದಾಗಿ ಪ್ರಕರಣಗಳನ್ನು ದಾಖಲಿಸಲಿದ್ದೇವೆ.
ಎಂಟು ಮಂದಿ ಸಂತ್ರಸ್ತರ ಕುಟುಂಬಗಳು ಸಂಪರ್ಕ ಹೊಂದಿವೆ. ನಮ್ಮೆಲ್ಲರ ಸಾಮಾನ್ಯ ಭಾವನೆಗಳನ್ನು ನಾನು ವ್ಯಕ್ತಪಡಿಸುತ್ತಿದ್ದೇನೆ” ಎಂದು ಸಂತ್ರಸ್ತ ಕುಟುಂಬಗಳ ಪರವಾಗಿ ಗೋವಿಂದನ್ ಬರೆದಿದ್ದಾರೆ. “ಅವರ ಪಾಪಗಳಿಗಾಗಿ, ಜೀವ ಹಾನಿಗಳಿಗಾಗಿ ಸೀರಮ್ ಇನ್ ಸ್ಟಿಟ್ಯೂಟ್ ಮತ್ತು ಆದಾರ್ ಪೂನಾವಾಲಾ ಅವರು ಉತ್ತರ ನೀಡಬೇಕು” ಎಂದಿರುವ ಅವರು, ಲಸಿಕೆಗಳ ಬಳಕೆಗೆ ಅನುಮೋದನೆ ನೀಡಿದ ಸರ್ಕಾರಿ ಅಧಿಕಾರಿಗಳ ವಿರುದ್ಧವೂ ಆಕ್ರೋಶ ಹೊರಹಾಕಿದ್ದಾರೆ. ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ. 2021ರಲ್ಲಿ ಮಗಳು ರಿತೈಕಾಳನ್ನು(18) ಕಳೆದುಕೊಂಡ ರಚನಾ ಗಂಗು ಮತ್ತು ಗೋವಿಂದನ್ ಅವರು ತಮ್ಮ ಮಕ್ಕಳ ಸಾವಿನ ಕುರಿತು ತನಿಖೆ ನಡೆಸಲು, ವೈದ್ಯಕೀಯ ಮಂಡಳಿ ನೇಮಿಸುವಂತೆ ಮತ್ತು ಲಸಿಕೆಗಳ ಪರಿಣಾಮದ ಆರಂಭಿಕ ಪತ್ತೆಗೆ ಶಿಷ್ಟಾಚಾರ ರೂಪಿಸಲು ಮತ್ತು ಪರಿಹಾರ ಒದಗಿಸುವ ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA