ಅಕ್ರಮ ಸಂಬಂಧ ಹೊಂದಿರುವ ಶಂಕೆಯಿಂದ ಪತಿಯೋರ್ವ ತನ್ನ ಎರಡನೇ ಪತ್ನಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಉತ್ತರ ಪ್ರದೇಶದ ಬಂದಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.
ಮಹಿಳೆಯ ಕತ್ತು ಹಿಸುಕಿ ನಂತರ ತಲೆ ಮತ್ತು ಬೆರಳುಗಳನ್ನು ಕತ್ತರಿಸಿ ದೇಹವನ್ನು ಎಸೆದಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
ಶುಕ್ರವಾರ ಉತ್ತರ ಪ್ರದೇಶದ ಬಂದಾ ಜಿಲ್ಲೆಯಲ್ಲಿ ಮಹಿಳೆಯ ತಲೆಯಿಲ್ಲದ ಮೃತದೇಹವನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಮೃತದೇಹದಿಂದ ನಾಲ್ಕು ಬೆರಳುಗಳು ಕಾಣೆಯಾಗಿದ್ದವು. ಪೊಲೀಸರು ನಡೆಸಿದ ಹುಡುಕಾಟದಲ್ಲಿ ಶವ ಬಿದ್ದ ಸ್ಥಳದಿಂದ ಸ್ವಲ್ಪ ದೂರದಲ್ಲಿ ಮಹಿಳೆಯ ತಲೆ ಪತ್ತೆಯಾಗಿದೆ.
ಪೊಲೀಸ್ ತನಿಖೆಯಲ್ಲಿ ಮಧ್ಯಪ್ರದೇಶದ ಛತ್ತರ್ ಪುರ ಜಿಲ್ಲೆಯ ನಿವಾಸಿ ರಾಮ್ ಕುಮಾರ್ ಅಹಿರ್ವಾರ್ ಅವರ ಪತ್ನಿ ಮಾಯಾದೇವಿ ಅವರ ಮೃತದೇಹ ಎಂದು ಗುರುತಿಸಲಾಯಿತು. ತನಿಖೆಯ ವೇಳೆ ಮಹಿಳೆಯ ಪತಿ ಹಾಗೂ ಕುಟುಂಬಸ್ಥರು ಮಹಿಳೆಯನ್ನು ಬರ್ಬರವಾಗಿ ಹತ್ಯೆ ನಡೆಸಿರುವುದು ಬಯಲಾಗಿದೆ.
ಪತಿ ರಾಮ್ ಕುಮಾರ್, ಮಕ್ಕಳಾದ ಸೂರಜ್ ಪ್ರಕಾಶ್, ಬ್ರಿಜೇಶ್ ಮತ್ತು ಸೋದರಳಿಯ ಉದಯಭಾನ್ ಅವರನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ಪತಿ ಮತ್ತು ಮಕ್ಕಳನ್ನು ವಿಚಾರಣೆಗೊಳಪಡಿಸಿದಾಗ ಕೊಲೆಯ ರಹಸ್ಯ ಬಯಲಾಗಿದೆ. ಮಹಿಳೆಯನ್ನು ಕೊಂದಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ ಎಂದು ಎಸ್ಪಿ ಅಂಕುರ್ ಅಗರ್ವಾಲ್ ತಿಳಿಸಿದ್ದಾರೆ.


