ಹುಳಿಯಾರು: ಹುಳಿಯಾರಿನ ಪಶು ಆಸ್ಪತ್ರೆಯ ಮುಂಭಾಗ ನಡೆಯುತ್ತಿದ್ದ ವಾರದ ಸಂತೆಯನ್ನು ಎಪಿಎಂಸಿ ಆವರಣಕ್ಕೆ ಸ್ಥಳಾಂತರಿಸಲು ನಿರ್ಧರಿಸಲಾಗಿದ್ದು, ಅಲ್ಲಿನ ಗಿಡಗಂಟಿಗಳನ್ನು ತೆರವು ಮಾಡಿ ಕುಳಿತು ವ್ಯಾಪಾರ ಮಾಡಲು ಅನುಕೂಲ ಆಗುವಂತೆ ಮಣ್ಣು ಹಾಕಿಸಿ, ನೀರು ಮತ್ತು ಶೌಚಾಲಯ ಸುಸ್ಥಿತಿಯಲ್ಲಿಟ್ಟು ಜಾಗ ಹಂಚಿಕೆ ಮಾಡಲು ಪಟ್ಟಣ ಪಂಚಾಯ್ತಿಯ ತುರ್ತು ಸಭೆಯಲ್ಲಿ ಬುಧವಾರ ನಿರ್ಧರಿಸಲಾಯಿತು.
ಹೂವು ಹೊನ್ನು, ಹಣ್ಣಿನ ವ್ಯಾಪಾರಿಗಳಿಗೆ 5*5 ಅಳತೆಯ ಜಾಗ ನೀಡಿ ವಾರಕ್ಕೆ ರೂ.50 ಸುಂಕ, ತರಕಾರಿ ವ್ಯಾಪಾರಿಗಳಿಗೆ 10*10 ಅಳತೆಯ ಜಾಗ ನೀಡಿ ವಾರಕ್ಕೆ ರೂ.100 ಸುಂಕ, ದಿನಸಿ ಅಂಗಡಿಗಳಿಗೆ 10*15 ಅಳತೆ ಜಾಗ ನೀಡಿ ವಾರಕ್ಕೆ ರೂ.150 ಸುಂಕ ವಸೂಲಿ ಮಾಡಲು ತೀರ್ಮಾನಿಸಲಾಯಿತು.
ಹಾಲಿ ವಾರದ ಸಂತೆಯಲ್ಲಿ ವ್ಯಾಪಾರ ಮಾಡುವವರಿಗೆ ಮೊದಲ ಆದ್ಯತೆಯಂತೆ ವ್ಯಾಪಾರಕ್ಕೆ ಜಾಗ ನೀಡಿ ಜಾಗ ಉಳಿದರೆ ನಂತರ ಅರ್ಜಿ ಕರೆದು ಸ್ಥಳ ನೀಡುವಂತೆಯೂ ಎಲ್ಲರಿಗೂ ಲಕ್ಕಿಡಿಪ್ ಮೂಲಕ ಸ್ಥಳದ ಆಯ್ಕೆ ಮಾಡಲು ತೀರ್ಮಾನಿಸಲಾಯಿತು.
ಹಬ್ಬ ಸೇರಿದಂತೆ ವಿಶೇಷ ದಿನಗಳಲ್ಲಿ ಗುರುವಾರದ ವಾರದ ಸಂತೆಯ ಬದಲಿಗೆ ಇತರೆ ದಿನಗಳಲ್ಲೂ ವ್ಯಾಪಾರಕ್ಕೆ ಅವಕಾಶ ಕೊಡುವಂತೆಯೂ ಆ ದಿನಗ ಳಲ್ಲೂ ನಿಗದಿಪಡಿಸಿರುವ ಸುಂಕದಂತೆಯೇ ವಸೂಲಿ ಮಾಡಲಾಗುವುದು. ಮೊದಲಿಗೆ ನೀರು ಮತ್ತು ಶೌಚಾಲಯದ ವ್ಯವಸ್ಥೆ ಕಲ್ಪಿಸಿ ನಂತರದ ದಿನಗಳಲ್ಲಿ ನೆರಳಿನ ವ್ಯವಸ್ಥೆ ಕಲ್ಪಿಸುವ ಭರವಸೆ ನೀಡಲಾಯಿತು.
ಮುಂಜಾನೆ ಬರುವ ರೈತರಿಗೆ ಸುಂಕ ಇಲ್ಲ:
ವಾರದ ಸಂತೆಯ ದಿನ ಮುಂಜಾನೆಯೇ ಬಂದು ರೈತರು ತಾವು ಬೆಳೆದ ತರಕಾರಿ, ಸೊಪ್ಪು, ಹೂವು ಸೇರಿದಂತೆ ಇತರೆ ಉತ್ಪನ್ನಗಳನ್ನು ವ್ಯಾಪಾರಿಗಳಿಗೆ ಹೋಲ್ ಸೆಲ್ ದರದಲ್ಲಿ ಮಾರಾಟ ಮಾಡಿ ಹೋಗುವವರಿಗೆ ಯಾವುದೇ ಸುಂಕ ಇಲ್ಲ. ಬೆಳಗ್ಗೆಯಿಂದ ಸಂಜೆಯವರೆವಿಗೂ ರೀಟೆಲ್ ದರದಲ್ಲಿ ವ್ಯಾಪಾರ ಮಾಡುವವರೆಲ್ಲರಿಗೂ ವಾರದ ಸಂತೆ ಸುಂಕ ವಸೂಲಿ ಮಾಡಲಾಗುವುದು
ಸಭೆಯಲ್ಲಿ ಅಧ್ಯಕ್ಷೆ ರತ್ನಮ್ಮ, ಉಪಾಧ್ಯಕ್ಷೆ ಕಾವ್ಯರಾಣಿ, ಸದಸ್ಯರುಗಳಾದ ದಯಾನಂದ್, ಜಹೀರ್ ಸಾಬ್, ದಸ್ತುಗಿರಿಸಾಬ್, ರಾಜುಬಡಗಿ, ಪ್ರೀತಿ, ಮಂಜ ನಾಯ್ಕ, ಜುಬೇರ್, ನಾಮಿನಿ ಸದಸ್ಯ ವೆಂಕಟೇಶ್, ಸಿದ್ಧಿಕ್, ಮುಖ್ಯಾಧಿಕಾರಿ ಮಂಜುನಾಥ್, ಎಂಜಿನಿಯರ್ ಮಂಜುನಾಥ್ ಸೇರಿದಂತೆ ಅನೇಕರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC
 
		 
					
					 


