ತುಮಕೂರು : ಜಿಲ್ಲೆಯ ಶಿರಾ ತಾಲ್ಲೂಕಿನ ಯಲಿಯೂರು ಗ್ರಾಮದ ವಾಸಿಯಾದ ರವೀಶ ವೈ.ಟಿ. ತಾಲ್ಲೂಕು ಮೀನುಗಾರರ ಸಹಕಾರ ಸಂಘ ನಿಯಮಿತ ಯಲಿಯೂರು ಈ ಸಂಘದ ಅಧ್ಯಕ್ಷರಾಗಿದ್ದು, ಮಧುಗಿರಿ ಉಪ ವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಾರ್ಯಾಲಯದ ನಿರ್ದೇಶನದಂತೆ ಈ ಹಿಂದೆ ಸಂಘದ ಬ್ಯಾಂಕಿನ ವ್ಯವಹಾರಗಳನ್ನು ತಡೆ ಹಿಡಿದಿದ್ದು, ಬ್ಯಾಂಕಿನ ವ್ಯವಹಾರ ತಡೆಹಿಡಿದಿರುವುದನ್ನು ತೆರವುಗೊಳಿಸುವಂತೆ ಬ್ಯಾಂಕಿಗೆ ಪತ್ರ ಬರೆಯಲು ಮಧುಗಿರಿ ಉಪ ವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ಸಣ್ಣಪ್ಪಯ್ಯ ಮತ್ತು ಪ್ರಥಮ ದರ್ಜೆ ಸಹಾಯಕ ರಾಘವೇಂದ್ರ ಪಿರ್ಯಾದಿ ರವೀಶ ವೈ ಟಿ ಇವರಿಂದ 20,000 ಸಾವಿರ ರೂ ಲಂಚದ ಹಣಕ್ಕೆ ಬೇಡಿಕೆ ಇಟ್ಟಿರುತ್ತಾರೆ.
ದೂರುದಾರನಾದ ರವೀಶ.ವೈ.ಟಿ. ಲಂಚದ ಹಣ ಕೊಡಲು ಇಷ್ಟವಿಲ್ಲದೇ ದಿನಾಂಕ : 21/07/2025 ರಂದು ತುಮಕೂರು ಲೋಕಾಯುಕ್ತ ಪೊಲೀಸ್ ಠಾಣೆಗೆ ದೂರು ನೀಡಿದ ಮೇರೆಗೆ ಪೊಲೀಸ್ ಇನ್ಸ್ ಪೆಕ್ಟರ್ ರಾಜು ಟಿ. ಮೊ.ನಂ:05/2025 ಕಲಂ–7(0) ಭ್ರಷ್ಟಾಚಾರ ಪ್ರತಿಬಂಧಕ ಅಧಿನಿಯಮ–1988 (ತಿದ್ದುಪಡಿ–2018) ರಂತೆ ಪ್ರಕರಣ ದಾಖಲಿಸಿಕೊಂಡು, ಟ್ರ್ಯಾಪ್ ಕಾರ್ಯಾಚರಣೆ ಕೈಗೊಂಡಿದ್ದರು.
ದಿನಾಂಕ : 21/07/2025 ರಂದು ಸಾಯಂಕಾಲ 05.03 ಗಂಟೆ ಸಮಯದಲ್ಲಿ ಪಿರ್ಯಾದಿ ರವೀಶ ವೈ.ಟಿ. ಪ್ರಥಮ ದರ್ಜೆ ಸಹಾಯಕ ರಾಘವೇಂದ್ರ 20,000 ರೂ ಲಂಚದ ಹಣವನ್ನು ಕೇಳಿ ಸ್ವೀಕರಿಸಿ, ಮಧುಗಿರಿ ಉಪ ವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ಸಣ್ಣಪ್ಪಯ್ಯಗೆ ನೀಡುವ ವೇಳೆಯಲ್ಲಿ ಲೋಕಾಯುಕ್ತ ಪೊಲೀಸರ ತಂಡ ಆರೋಪಿಗಳನ್ನು ಲಂಚದ ಹಣದ ಸಮೇತ ವಶಕ್ಕೆ ಪಡೆದು, ಮುಂದಿನ ತನಿಖೆ ಕೈಗೊಂಡಿದೆ.
ತುಮಕೂರು ಲೋಕಾಯುಕ್ತ ಪೊಲೀಸ್ ಅಧೀಕ್ಷಕರಾದ ಲಕ್ಷ್ಮೀನಾರಾಯಣ ಎ.ವಿ ರವರ ಮಾರ್ಗದರ್ಶನದಲ್ಲಿ ಪೊಲೀಸ್ ಉಪಾಧೀಕ್ಷಕರಾದ ಡಾ.ಸಂತೋಷ್ ಕೆ.ಎಂ.ರವರ ಉಸ್ತುವಾರಿಯಲ್ಲಿ ಪೊಲೀಸ್ ಇನ್ಸ್ ಪೆಕ್ಟರ್ ಗಳಾದ ರಾಜು ಟಿ., ಬಿ.ಮೊಹಮ್ಮದ್ ಸಲೀಂ, ಸುರೇಶ ಕೆ. ಮತ್ತು ಶಿವರುದ್ರಪ್ಪ ಮೇಟಿ ರವರು ಹಾಗೂ ಸಿಬ್ಬಂದಿಗಳಾದ ಯತೀಗೌಡ, ನಾಗರಾಜು ಪಿ., ಪ್ರಕಾಶ್, ಆಲಂಪಾಷ, ಗಿರೀಶ್ ಕುಮಾರ್ ಟಿ.ಎಸ್., ಯಶೋಧ, ನಳಿನಾಕ್ಷಿ, ರವೀಶ್ ಬಿ., ಭಾಸ್ಕರ್, ರಂಗಸ್ವಾಮಿ, ಮಹೇಶ್, ಬಸವರಾಜು ಮತ್ತು ಇತರರು ಟ್ರ್ಯಾಪ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ವರದಿ: ಮಂಜುಸ್ವಾಮಿ ಎಂ.ಎನ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC