ಬೆಳಗಾವಿ: ಕಾಂಗ್ರೆಸ್ ಮಾಡಿರುವ ಮುಸ್ಲಿಂ ತೃಷ್ಟಿಕರಣದಿಂದ ಸಮಾನ ನಾಗರಿಕ ಕಾನೂನು ಜಾರಿಗೆ ತರಲು ಸಾಧ್ಯವಾಗಲಿಲ್ಲ. ಇದನ್ನು ಜಾರಿಗೆ ತರುವಂತೆ 5 ಲಕ್ಷ ಸಹಿ ಸಂಗ್ರಹ ಅಭಿಯಾನ ನಡೆಸಲಾಗುತ್ತಿದೆ. ಇದನ್ನು ಕೇಂದ್ರ ಸರಕಾರಕ್ಕೆ ಕಳುಹಿಸಲಾಗುವುದು ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ ಮುತಾಲಿಕ ಹೇಳಿದರು.
ಮಂಗಳವಾರ ನಗರದ ಪ್ರವಾಸಿ ಮಂದಿರದಲ್ಲಿ ಕರೆಯಲಾದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.
ಸಮಾನ ನಾಗರಿಕ ಕಾನೂನು ಜಾರಿಗೆ ತರುವುದಕ್ಕೆ ಮುಸ್ಲಿಂ ಸಂಘಟನೆಗಳು ವಿರೋಧ ಮಾಡುತ್ತಿವೆ. ಕಾಂಗ್ರೆಸ್ ಈ ಹಿಂದೆ ಅಧಿಕಾರದಲ್ಲಿದ್ದಾಗ ಸಮಾನ ನಾಗರಿಕ ಕಾನೂನು ಜಾರಿಗೆ ತರುವ ಅವಕಾಶ ಇದ್ದರೂ ಅದು, ಮುಸ್ಲಿಂರ ರಕ್ಷಣೆಗಾಗಿ ಅದನ್ನು ಜಾರಿಗೆ ತರಲು ಸಾಧ್ಯವಾಗಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗೋವಾದಲ್ಲಿ ಸಮಾನ ಕಾನೂನು ಜಾರಿಯಲ್ಲಿದೆ. ಕಳೆದ 1961ರಿಂದ ಈ ಕಾಯ್ದೆ ಇದೆ. ಅಲ್ಲಿ ತಲಾಖ್, ಬಹು ಪತ್ನಿತ್ವ ನಡೆಯುವುದಿಲ್ಲ. ಎಲ್ಲ ಕಡೆ ಕಾನೂನು ಜಾರಿಯಾಗಬೇಕೆಂದು ಒತ್ತಾಯಿಸಿದರು.
ಕಾಂಗ್ರೆಸ್ ಸರಕಾರ ಮುಜರಾಯಿ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ದೇವಸ್ಥಾನದಲ್ಲಿ ಮೊಬೈಲ್ ನಿಷೇಧ ಮಾಡಿರುವುದು ಸ್ವಾಗತಾರ್ಹ. ಖಾಸಗಿ ದೇವಸ್ಥಾನಗಳ ಟ್ರಸ್ಟಿ ಹಾಗೂ ಕಮಿಟಿ ಯವರು ಮೊಬೈಲ್ ನಿಷೇಧ ಮಾಡಬೇಕು ಎಂದು ಮನವಿ ಮಾಡಿಕೊಂಡರು.
ಜು.5 ರಂದು ಚಿಕ್ಕೋಡಿ ಹಿರೇಕೋಡಿಯ ನಂದಿ ಆಶ್ರಮದ ಜೈನ್ ಮುನಿಯನ್ನು ಹತ್ಯೆ ಖಂಡನೀಯ. ಅದು ತಾಲಿಬಾನ್ ಮಾನಸಿಕತೆ ಇರುವವರಿಂದ ಮಾತ್ರ ಸಾಧ್ಯ. ತಕ್ಷಣದಲ್ಲಿಯೇ ಪೊಲೀಸರು ಆರೋಪಿಗಳನ್ನು ಹತ್ಯೆ ಮಾಡಿರುವವರನ್ನು ಬಂಧಿಸಿರುವುದು ಶ್ಲಾಘನೀಯ ಎಂದರು.
ಜೈನ್ ಮುನಿ ಹತ್ಯೆ ಪ್ರಕರಣವನ್ನು ಸಿಬಿಐಗೆ ಕೊಡುವ ಅವಶ್ಯಕತೆ ಇಲ್ಲ. ಆದರೆ ಡಿವೈಎಸ್ಪಿ ನೇತೃತ್ವದಲ್ಲಿ ತನಿಖೆ ನಡೆಸಲಾಗುತ್ತಿದೆ. ಇದನ್ನು ಉನ್ನತಮಟ್ಟದ ಅಧಿಕಾರಿಗಳಿಂದ ತನಿಖೆ ನಡೆಸಬೇಕೆಂದು ಒತ್ತಾಯಿಸಿದರು.
ಜೈನ್ ಮುನಿ ಹತ್ಯೆ ಮಾಡಿದ ಆರೋಪಿಗಳ ಪರವಾಗಿ ಇಬ್ಬರ ಪರವಾಗಿಯೂ ಯಾರೂ ವಕೀಲರು ವಕಾಲತ್ತು ವಹಿಸಬಾರದು. ಅಕಸ್ಮಾತ್ ಮಾಡಿದರೆ ಆ ವಕೀಲರ ವಿರುದ್ಧ ಹೋರಾಟ ಮಾಡಲಾಗುವುದು ಎಂದು ಬಾರ್ ಅಸೋಸಿಯೇಷನ್ ಗೆ ಮನವಿ ಸಲ್ಲಿಸಲಿದ್ದೇವೆ ಎಂದರು.
ಎ.ಕೆ.ಕೊಟ್ಟುರಶೆಟ್ಟಿ, ಆದಿತ್ಯ ಶಾಸ್ತ್ರೀ, ರಾಜು ಕೋಕಿತಕರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


