ಕೊರಟಗೆರೆ : ತಹಶೀಲ್ದಾರ್ ಕೆ.ಮಂಜುನಾಥ್ ರವರ ಅಧ್ಯಕ್ಷತೆಯಲ್ಲಿ ತಾಲ್ಲೂಕು ಕಚೇರಿಯ ಸಭಾಂಗಣದಲ್ಲಿ ಅಂಬೇಡ್ಕರ್ ಜಯಂತಿ ಪೂರ್ವಭಾವಿ ಸಭೆ ನಡೆಯಿತು.
ಎಸ್.ಸಿ. ಮೀಸಲಾತಿ ವಿಧಾನಸಭಾ ಕ್ಷೇತ್ರದ ಕೊರಟಗೆರೆ ತಾಲ್ಲೂಕು ಕಚೇರಿ ಆವರಣದಲ್ಲಿ ನಡೆದ ಅಂಬೇಡ್ಕರ್ ಜಯಂತಿ ಪೂರ್ವಭಾವಿ ಸಭೆಯಲ್ಲಿ ಹಲವು ಪ್ರಮುಖ ಬೇಡಿಕೆಗಳು ಮುಂದಿರಿಸಲಾಯಿತು. ಸಭೆಯಲ್ಲಿ ಮಾತನಾಡಿದ ದಲಿತ ನಾಯಕ ಹಾಗೂ ಸಾಮಾಜಿಕ ಹೋರಾಟಗಾರ ಜಟ್ಟಿ ಅಗ್ರಹಾರ ನಾಗರಾಜು, ತಾಲ್ಲೂಕು ಕಚೇರಿ ಆವರಣದಲ್ಲಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪುತ್ತಳಿಯನ್ನು ಸ್ಥಾಪಿಸಲು ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಅಂಬೇಡ್ಕರ್ ಅವರ ತತ್ವಗಳು ಸಮಾಜದ ಸಮಾನತೆಗಾಗಿ ಮಹತ್ವದ್ದಾಗಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಅವರ ಸ್ಮಾರಕಗಳು ಹೆಚ್ಚಬೇಕು ಎಂದು ಹೇಳಿದರು.
ಇದೇ ವೇಳೆ ದಲಿತ ಒಳ ಮೀಸಲಾತಿ ಹೋರಾಟಗಾರ ದಾಡಿ ವೆಂಕಟೇಶ್ ಮಾತನಾಡಿ, ಒಳಮೀಸಲಾತಿ ಶೀಘ್ರ ಜಾರಿಗೆ ಬರಬೇಕು. ಅದುವರೆಗೆ ಹೋರಾಟವನ್ನು ನಿಲ್ಲಿಸುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು. ದಲಿತ ಸಮುದಾಯಕ್ಕೆ ನ್ಯಾಯ ಸಿಗುವವರೆಗೆ ಹೋರಾಟ ಮುಂದುವರಿಯುತ್ತದೆ ಎಂದು ಎಚ್ಚರಿಕೆ ನೀಡಿದರು. ಹಾಗೂ ಬಾಬು ಜಗಜೀವನ್ ರಾಮ್ ರವರ ಭವನಕ್ಕೆಂದು ತಾಲ್ಲೂಕಿನಲ್ಲಿ ಮೂರು ಬಾರಿ ಶಾಸಕರಿಂದ ಗುದ್ದಲಿ ಪೂಜೆ ಮಾಡಿಸಿದರು ಆದರೆ ಇಲ್ಲಿಯವರೆಗೂ ಒಂದು ಗುದ್ದಲಿ ಮಣ್ಣು ಹಾಕಿಲ್ಲ ಮಾಹಿತಿ ಕೊಡಿ ಎಂದು ಗುಡುಗಿದರು.
ಸಭೆಯಲ್ಲಿ ಹಲವಾರು ದಲಿತ ಮುಖಂಡರು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ಭಾಗವಹಿಸಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ಭೀಮ್ ಆರ್ಮಿ ಜಿಲ್ಲಾದ್ಯಕ್ಷ ಗೋಪಾಲ ಕೃಷ್ಣ, ದಾಸರಹಳ್ಳಿ ಶಿವರಾಂ, ಮಂಜುನಾಥ್, ತೋವಿನಕೆರೆ ಸಿದ್ದಪ್ಪ, ಸಿದ್ದರಬೆಟ್ಟ ಸಿದ್ದರಾಜು, ಹುಲಿಕುಂಟೆ ನರಸಿಂಹಮೂರ್ತಿ, ರಾಮಾಜಿನಯ್ಯ, ಹೊಳವನಹಳ್ಳಿ ಗಂಗಣ್ಣ, ಮಾಜಿ ಪ.ಪಂ ಸದಸ್ಯ ನಂದೀಶ್, ತಾ.ಪಂ ಕಾರ್ಯನಿರ್ವಹಕ ಅಧಿಕಾರಿ ಅಪೂರ್ವ, ಸಮಾಜ ಕಲ್ಯಾಣ ಅಧಿಕಾರಿ ಯಮುನಾ, ಪಶು ಇಲಾಖೆ ಡಾ.ನಾಗಭೂಷಣ್, ಹಿಂದುಳಿದ ವರ್ಗಗಳ ಅಧಿಕಾರಿ ಅನಂತರಾಜು, ಶಿಶು ಅಭಿವೃದ್ಧಿ ಅಧಿಕಾರಿ ಗಂಗಾಧರ್ ಸೇರಿದಂತೆ ಹಲವಾರು ದಲಿತಪರ ಹೋರಾಟಗಾರರು ಉಪಸ್ಥಿತರಿದ್ದರು.
ವರದಿ: ಮಂಜುಸ್ವಾಮಿ ಎಂ.ಎನ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


