ಬೆಂಗಳೂರು: ಪಕ್ಷ ವಿರೋಧಿ ಚಟುವಟಿಕೆ ನಡೆಸುತ್ತಿರುವವರನ್ನು ಉಚ್ಚಾಟನೆ ಮಾಡಬೇಕೆಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಆಪ್ತರು ಆಗ್ರಹಿಸಿದ್ದಾರೆ.
ಮಾಜಿ ಸಚಿವ ಕಟ್ಟಾ ಸುಬ್ರಹಣ್ಯನಾಯ್ಡು ನಿವಾಸದಲ್ಲಿ ಸಭೆ ನಡೆಸಿದ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ, ಮಾಜಿ ಶಾಸಕ ಸಂಪಂಗಿ, ಲಕ್ಷ್ಮೀನಾರಾಯಣ ಸೇರಿದಂತೆ ಮತ್ತಿತರರು ಪಕ್ಷ ವಿರೋಧಿ ಚಟುವಟಿಕೆ ನಡೆಸಿ ಕಾರ್ಯಕರ್ತರಲ್ಲಿ ಗೊಂದಲ ಉಂಟುಮಾಡುತ್ತಿರುವ ಭಿನ್ನಮತೀಯರನ್ನು ತಕ್ಷಣವೇ ಉಚ್ಚಾಟನೆ ಮಾಡಬೇಕೆಂದು ಒತ್ತಾಯ ಮಾಡಿದ್ದಾರೆ.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ರೇಣುಕಾಚಾರ್ಯ, ಬಸನಗೌಡ ಪಾಟೀಲ್ ಯತ್ನಾಳ್, ಕುಮಾರ್ ಬಂಗಾರಪ್ಪ, ಮಾಜಿ ಸಂಸದ ಜಿ.ಎಂ.ಸಿದ್ದೇಶ್ವರ್, ಶಾಸಕ ಡಿ.ಕೆ.ಹರೀಶ್ ಅವರನ್ನು ಮುಲಾಜಿಲ್ಲದೆ ಪಕ್ಷದಿಂದ ಕಿತ್ತುಹಾಕಬೇಕು. ಇಲ್ಲದಿದ್ದರೆ ಕಾರ್ಯಕರ್ತರಿಗೆ ತಪ್ಪು ಸಂದೇಶ ಹೋಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಿಸ್ಟರ್ ಯತ್ನಾಳ್, ಯಡಿಯೂರಪ್ಪ ಕುಟುಂಬದವರ ಬಗ್ಗೆ ಮಾತನಾಡುವ ನೀನು ಜೆಸಿಬಿ, ಬಸ್ಸು ಓಡಿಸಿಕೊಂಡಿದ್ದೆ. ಈಗ ಬಿಜಾಪುರದಲ್ಲಿ ಶಿಕ್ಷಣ ಸಂಸ್ಥೆಗಳು, ಕಲಬುರಗಿಯಲ್ಲಿ ಸಕ್ಕರೆ ಕಾರ್ಖಾನೆಯ ಮಾಲೀಕರಾಗಿದ್ದೀರ. ಇದಕ್ಕೆಲ್ಲಿಂದ ದುಡ್ಡು ಬಂತು?, ನಮಗೆ ನಿಮ್ಮ ಬಂಡವಾಳ ಗೊತ್ತಿಲ್ಲವೇ ಎಂದು ಪ್ರಶ್ನಿಸಿದರು.
ಈ ಹಿಂದೆ ಸಸ್ಪೆಂಡ್ ಆಗಿ ಯಡಿಯೂರಪ್ಪ ನವರ ಕಾಲು ಹಿಡಿದವರು? ಮಿಸ್ಟರ್ ಯತ್ನಾಳ್ ಇದು ಸರಿಯಲ್ಲ. ನಾಲಿಗೆ ಬಿಗಿ ಹಿಡಿದು ಮಾತಾಡು, ನಿಮಗೆ ಗೌರವ ಕೊಡ್ತೇವೆ ನಾವು. ಇವರು ಯಾರೂ ಮೂಲ ಬಿಜೆಪಿಯಲ್ಲ. ಬಿಜೆಪಿಗೆ ಮೂಲ ಇವರೆಲ್ಲ. ಸಿದ್ದೇಶ್ವರ್ ಸಂಸ್ಥೆ ನೀನು ಕಟ್ಟಿದ್ದಲ್ಲ. ಅಲ್ಲಿ ಬಂದು ಸಂಸ್ಥೆ ಕಬ್ಜ ಮಾಡಿದಿಯಲ್ಲ. ಅಲ್ಲಿ ನಿಮ ಮಗನ್ನ ಡೈರೆಕ್ಟರ್ ಮಾಡಿದ್ದೀಯಲ್ಲ ಇದು ಕುಟುಂಬ ರಾಜಕಾರಣ ಅಲ್ವಾ? ಎಂದು ಪ್ರಶ್ನೆ ಮಾಡಿದರು.
ಮಾತೆತ್ತಿದರೆ ನಾನೊಬ್ಬ ಹಿಂದೂ ಹುಲಿ ಎನ್ನುತ್ತೀರಿ. ಜೆಡಿಎಸ್ ಗೆ ಸೇರಿಕೊಂಡು ಟಿಪ್ಪೂ ಸುಲ್ತಾನ್ ಹುಟ್ಟುಹಬ್ಬದ ಆಚರಣೆ ಸಂದರ್ಭದಲ್ಲಿ ಬಿರಿಯಾನಿ, ಕಬಾಬ್ ತಿಂದಿದ್ದನ್ನು ಮರೆತುಬಿಟ್ಟಿದ್ದೀರ. ಆಗ ನಿಮ್ಮ ನಿಜವಾದ ಹಿಂದುತ್ವ ಎಲ್ಲಿ ಹೋಗಿತ್ತು. ಇಫ್ತಾರ್ ಕೂಟದಲ್ಲಿ ಭಾಗಿಯಾದಾಗ ಬಿಜೆಪಿ ಸಿದ್ಧಾಂತ ನೆನಪಿರಲಿಲ್ಲವೇ? ಹಿಂದೂ ಹುಲಿ ಜೆಡಿಎಸ್ ಗೆ ಹೋಗಿದ್ದು ಏಕೆ? ಮೊದಲು ಜನತೆಗೆ ಉತ್ತರ ಕೊಡಿ ಎಂದು ಹರಿಹಾಯ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx