ಸರಗೂರು: ಶಿಥಿಲಗೊಂಡಿರುವ ಪಟ್ಟಣ ಪಂಚಾಯಿತಿ ಹಳೆಯ ಕಟ್ಟಡವನ್ನು ಶೀಘ್ರ‍್ರದಲ್ಲೇ ಕೆಡವಿ ನೂತನ ಕಟ್ಟಡ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಶಾಸಕರು, ಅರಣ್ಯ ವಸತಿ ಮತ್ತು ವಿಹಾರಧಾಮಗಳ ಸಂಸ್ಥೆ ಅಧ್ಯಕ್ಷ ಅನಿಲ್ ಚಿಕ್ಕಮಾದು ತಿಳಿಸಿದರು.
ಪಟ್ಟಣ ಪಂಚಾಯಿತಿ ಕಚೇರಿಯಲ್ಲಿ ಸೋಮವಾರ ನೂತನ ಅಧ್ಯಕ್ಷೆ ಚೈತ್ರಾಸ್ವಾಮಿ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಪಟ್ಟಣದ ಹೃದಯ ಭಾಗದಲ್ಲಿರುವ ಪಟ್ಟಣ ಪಂಚಾಯಿತಿ ಹಳೆಯ ಕಟ್ಟಡವನ್ನು ಕೆಡವಿ ನೂತನ ಕಟ್ಟಡವನ್ನು ನಿರ್ಮಿಸಬೇಕು. ಇದಕ್ಕಾಗಿ ೫೦ ಲಕ್ಷ ರೂ. ಅನುದಾನ ಇದ್ದು, ಹೆಚ್ಚುವರಿ ಅನುದಾನಕ್ಕಾಗಿ ಸರಕಾರದೊಂದಿಗೆ ಚರ್ಚಿಸಿ ಬಿಡುಗಡೆ ಮಾಡಿಸಿಕೊಡಲಾಗುವುದು ಎಂದು ಹೇಳಿದರು.
ಇದಕ್ಕೆ ಪ್ರತಿಕ್ರಿಯಸಿದ ಮುಖ್ಯಾಧಿಕಾರಿ ಎಸ್.ಕೆ.ಸಂತೋಷ್‌ಕುಮಾರ್, ಪಟ್ಟಣ ಪಂಚಾಯಿತಿ ಕಚೇರಿ ಸ್ಥಳಾಂತರಕ್ಕೆ ಕಟ್ಟಡ ಸಮಸ್ಯೆಯಿದ್ದು, ಕಟ್ಟಡ ಗುರುತಿಸಿದ ಕೂಡಲೇ ಸ್ಥಳಾಂತರಗೊಂಡು ಪಂಚಾಯಿತಿ ಕಚೇರಿ ಕೆಡವಿ ನೂತನ ಕಟ್ಟಡ ನಿರ್ಮಾಣ ಮುಂದಾಗಲಾಗುವುದು. ಹೆಚ್ಚುವರಿಯಾಗಿ ಸರಕಾರಕ್ಕೆ ೫ ಕೋಟಿ ರೂ.ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.
ಜಂಗಲ್ ತೆರವು ೭ ದಿನ ಗಡುವು: ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾಡುಪ್ರಾಣಿಗಳ ಹಾವಳಿ ಜೋರಾಗಿದ್ದು, ಸಾರ್ವಜನಿಕರ ಸಂಚಾರಕ್ಕೆ ಅಡೆಗಡೆಯಾಗಿದೆ. ಖಾಲಿ ನಿವೇಶನಗಳಲ್ಲಿ ಆಳೆತ್ತರ ಗಿಡ–ಗಂಟಿಗಳು ಬೆಳೆದು ಪ್ರಾಣಿಗಳ ಆವಾಸ ಸ್ಥಾನವಾಗಿದೆ. ಇದಲ್ಲದೆ ಪಟ್ಟಣಕ್ಕೆ ಹೊಂದಿಕೊಂಡಂತಿರುವ ಜಮೀನುಗಳಲ್ಲಿಯೂ ಮರಗಿಡಗಳ ಹೇರಳವಾಗಿ ಬೆಳೆದು ನಿಂತಿವೆ ಎಂದು ಸದಸ್ಯ ಚಲುವಕೃಷ್ಣ ಸಭೆಯ ಗಮನ ಸೆಳೆದರು.
ಶಾಸಕ ಅನಿಲ್ ಚಿಕ್ಕಮಾದು ಪ್ರತಿಕ್ರಿಯಿಸಿ, ಪಟ್ಟಣದ ಸ್ವಚ್ಛತೆಗೆ ಹೆಚ್ಚಿನ ಅದ್ಯತೆ ನೀಡಬೇಕು. ಗಿಡ–ಗಂಟಿಗಳನ್ನು ತೆರವುಗೊಳಿಸಲು ಅಧಿಕಾರಿಗಳು ಮುಂದಾಗಬೇಕು. ಕಂದಾಯ ಭೂಮಿಗಳಲ್ಲಿಯೂ ಬೆಳೆದಿರುವ ಜಂಗಲ್ ತೆರವಿಗೆ ತಹಶೀಲ್ದಾರ್ ಅವರು ಸೂಚನೆ ನೀಡಬೇಕು. ವಾರದೊಳಗೆ ಜಂಗಲ್ ತೆರವುಗೊಳಿಸಬೇಕು ಎಂದು ಗಡುವು ನೀಡಿದರು.
ಟ್ರಾಫಿಕ್ ಸರಿಪಡಿಸಿ: ಪಟ್ಟಣದಲ್ಲಿ ಟ್ರಾಫಿಕ್ ಸಮಸ್ಯೆ ಇದ್ದು, ಸಮಸ್ಯೆ ಬಗೆಹರಿಸಲು ಕ್ರಮವಹಿಸಬೇಕು. ಅಲ್ಲಲ್ಲಿ ವಾಹನ ನಿಲುಗಡೆ ನಿಷೇಧಿಸಲಾಗಿದೆ ಎಂಬ ನಾಮಫಲಕ ಅಳವಡಿಸಲು ಕ್ರಮವಹಿಸಬೇಕು. ವಾಹನಗಳು ಸೂಕ್ತ ಸ್ಥಳ ನಿಲ್ಲಿಸುವಂತೆ ಪೊಲೀಸರು ಸೂಚನೆ ನಿಡಬೇಕು ಎಂದು ತಾಕೀತು ನೀಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಪಿಎಸ್ ಐ ಆರ್.ಕಿರಣ್, ಆಟೋ ಚಾಲಕರು ಶಿಸ್ತಿನಿಂದ ಟ್ರಾಫಿಕ್ ನಿಯಮ ಪಾಲಿಸುತ್ತಿದ್ದಾರೆ. ನಾಲ್ಕು ಚಕ್ರದ ಗೂಡ್ಸ್ ವಾಹನಗಳು, ಕಾರು, ಜೀಪ್ ಗಳಿಗೆ ವಾಹನ ನಿಲುಗಡೆಗೆ ಪ್ರತ್ಯೇಕವಾದ ಜಾಗಬೇಕು ಎಂದು ಸಲಹೆ ನೀಡಿದರು. ಆಗ ಮುಖ್ಯಾಧಿಕಾರಿ ಸಂತೋಷ್ ಕುಮಾರ್, ಸದಸ್ಯರಾದ ಶ್ರೀನಿವಾಸ್ ಮಾತನಾಡಿ, ಬಸ್ ನಿಲ್ದಾಣದ ಹಿಂಭಾಗದಲ್ಲಿ ಬಾಬು ಜಗಜೀವನ್ ರಾಮ್ ಸಮುದಾಯ ಭವನದ ಪಕ್ಕದಲ್ಲಿ ಸಾರ್ವಜನಿಕ ಜಾಗವಿದ್ದು, ಅಲ್ಲಿ ವಾಹನಗಳ ನಿಲುಗಡೆಗೆ ಅವಕಾಶ ಮಾಡಿಕೊಟ್ಟರೆ ಅನುಕೂಲವಾಗಲಿದೆ ಎಂದರು. ಇದಕ್ಕೆ ಶಾಸಕರು ಶೀಘ್ರದಲ್ಲೆ ವಾಹನಗಳ ನಿಲುಗಡೆಗೆ ಅವಕಾಶ ಮಾಡಿಕೊಡಬೇಕು. ಇದರಿಂದ ಯಾರಿಗೂ ತೊಂದರೆಯಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಸೂಚನೆ ನೀಡಿದರು.
ಯುಜಿಡಿ ಸಮಸ್ಯೆ: ಬಸ್ ನಿಲ್ದಾಣದಲ್ಲಿ ಶೌಚಕ್ಕೆ ತುಂಬಾ ಸಮಸ್ಯೆಯಾಗಿದ್ದು, ಯುಜಿಡಿ ನೀರು ಹೊರ ಬಂದು ಕೆಟ್ಟ ವಾಸನೆ ಬರುತ್ತಿದ್ದು, ಶೀಘ್ರದಲ್ಲೇ ಬಗೆಹರಿಸಬೇಕು ಎಂದ ಶಾಸಕರು ಸಾರಿಗೆ ಇಲಾಖೆಯ ಡಿಸಿ ಅವರಿಗೆ ಕರೆ ಮಾಡಿ, ಹಿಂಗು ಗುಂಡಿ ತೆಗೆಯಿಸಿ, ಸ್ವಚ್ಛತೆಗೆ ಆದ್ಯತೆ ನೀಡಬೇಕು. ವಾರದೊಳಗೆ ಸಮಸ್ಯೆ ಬಗೆಹರಿಸದಿದ್ದರೆ ಸಮಸ್ಯೆ ಉಲ್ಬಣಗೊಳ್ಳಲಿದೆ ಎಂದು ಎಚ್ಚರಿಕೆ ನೀಡಿದರು.
ಆಶ್ರಯ ಬಡಾವಣೆಗೆ ಮೂಲ ಸೌಕರ್ಯ ಕಲ್ಪಿಸಬೇಕು. ಮನೆಗಳನ್ನು ಮಂಜೂರು ಮಾಡಿಸಿಕೊಡಬೇಕು. ಕುಡಿಯುವ ನೀರಿಗೆ ಅವಶ್ಯಕತೆ ಇರುವೆಡೆ ಬೋರ್‌ವೆಲ್‌ನ ಕೊಳವೆ ಬಾವಿ ಕೊರೆಯಿಸಿ. ೧೧ನೇ ವಾರ್ಡ್ ನಲ್ಲಿರುವ ಗ್ರಾಮ ಠಾಣಾ ಜಾಗದಲ್ಲಿ ೨ ಎಕರೆ ಆಶ್ರಯ ಬಡಾವಣೆ, ಇನ್ನುಳಿದ ಜಾಗವನ್ನು ವಿವಿಧ ಸಮಾಜದವರ ಸಮುದಾಯ ಭವನ ನಿರ್ಮಾಣಕ್ಕೆ ಮೀಸಲಿಡಿ ಎಂದು ಹೇಳಿದರು.
ಮುಖ್ಯಾಧಿಕಾರಿ ಎಸ್.ಕೆ.ಸಂತೋಷ್ ಕುಮಾರ್ ಸಭಾ ವರದಿ ಓದಿದರು. ತಹಶೀಲ್ದಾರ್ ಮೋಹನಕುಮಾರಿ, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಚೈತ್ರಾಸ್ವಾಮಿ, ಸದಸ್ಯರಾದ ಶ್ರೀನಿವಾಸ್, ಚಲುವಕೃಷ್ಣ, ಹೇಮಾವತಿ ರಮೇಶ್, ಸಣ್ಣತಾಯಮ್ಮ, ಚಂದ್ರಕಲಾರಾಜಣ್ಣ, ಪಿಎಸ್ ಐ ಆರ್.ಕಿರಣ್, ಸಾರಿಗೆ ಇಲಾಖೆಯ ಮಹದೇವಣ್ಣ, ಅರಣ್ಯ ಇಲಾಖೆ ಡಿಆರ್ ಎಫ್ ಓ ಪ್ರದೀಪ್, ಸಿಬ್ಬಂದಿಗಳಾದ ರಾಮು, ಪಳನಿ, ಶಿವಪ್ರಸಾದ್, ಅನಿತಾಕುಮಾರಿ, ಅರ್ಜುನ, ಸ್ವಾಮಿ, ನಾಗೇಶ್, ಗಿರೀಶ್, ಶಾಸಕರ ಆಪ್ತ ಸಹಾಯಕ ಸುದರ್ಶನ್, ಸಿದ್ದರಾಜು ಸೇರಿದಂತೆ ಇನ್ನಿತರರು ಹಾಜರಿದ್ದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


