ನಗರದ ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣದ ಹತ್ತಿರವಿರುವ ಎನ್‌ಜಿಇಎಫ್‌ಗೆ ಸೇರಿದ ಜಾಗದಲ್ಲಿ 30 ಕೋಟಿ ರೂ. ಗಳಿಗೂ ಅಧಿಕ ವೆಚ್ಚದಲ್ಲಿ ವಿಶ್ವ ದರ್ಜೆಯ ಅರಣ್ಯ ಉದ್ಯಾನ (ಟೀ ಪಾರ್ಕ್) ಅಭಿವೃದ್ಧಿಪಡಿಸಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ. ಬಿ. ಪಾಟೀಲ್ ತಿಳಿಸಿದ್ದಾರೆ.
ಈ ಸಂಬಂಧ ಮಂಗಳವಾರ ಇಲ್ಲಿ ಏರ್ಪಡಿಸಲಾಗಿದ್ದ ಪ್ರಾತ್ಯಕ್ಷಿಕೆಯನ್ನು ವೀಕ್ಷಿಸಿ, ಪ್ರಾಥಮಿಕ ಸುತ್ತಿನ ಸಭೆ ನಡೆಸಿ ಮಾತನಾಡಿದ ಅವರು, ಎನ್‌ಜಿಇಎಫ್‌ಗೆ ಸೇರಿದ 105 ಎಕರೆ ಜಾಗವನ್ನು ಹಾಗೆಯೇ ಉಳಿಸಿಕೊಂಡು, ಅರಣ್ಯ ಉದ್ಯಾನ ಅಭಿವೃದ್ಧಿಪಡಿಸುವ ಮೂಲಕ ಮನೋಹರವಾದ ಪ್ರವಾಸಿ ತಾಣವನ್ನಾಗಿ ಮಾಡಲಾಗುತ್ತದೆ. ಈ ಬಗ್ಗೆ ಮುಖ್ಯಮಂತ್ರಿ ಜತೆ ಚರ್ಚಿಸಿ ಶೀಘ್ರವಾಗಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು.
ಎನ್‌ಜಿಇಎಫ್‌ಗೆ ಸೇರಿದ ಜಾಗದ ಪೈಕಿ 70 ಎಕರೆಯಲ್ಲಿ ದಟ್ಟ ಹಸಿರಿದ್ದು, ನಾನಾ ಪ್ರಭೇದಗಳ ಸಾವಿರಾರು ವೃಕ್ಷಗಳಿವೆ. ಜತೆಗೆ ಐದು ಕೈಗಾರಿಕಾ ಶೆಡ್‌ಗಳಿವೆ. ಇವುಗಳನ್ನು ಹಾಗೆಯೇ ಉಳಿಸಿಕೊಂಡು ಹಂತ-1ಎಯಲ್ಲಿ 11 ಕೋಟಿ ರೂ. ಮತ್ತು ಹಂತ-1ಬಿನಲ್ಲಿ 15 ಕೋಟಿ ರೂ. ವೆಚ್ಚ ಮಾಡಿ ವೃಕೋದ್ಯಾನ ಅಭಿವೃದ್ಧಿ ಪಡಿಸಲಾಗುವುದು. ಇಲ್ಲಿ ವೈ-ಫೈ ಸೌಲಭ್ಯದೊಂದಿಗೆ ರೆಡಿಮೇಡ್ ವಕ್‌ರ್ಸ್ಪೀಸ್’ ಕೂಡ ಇರಲಿದೆ. ಬಳಿಕ ಹಂತ-2ರ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಎಂ. ಬಿ. ಪಾಟೀಲ್ ಹೇಳಿದರು.
ಹಂತ-1ಎ ಯಲ್ಲಿ ಸ್ಕಲ್ಟರ್ ಕೋರ್ಟ್, 1. 4 ಕಿ. ಮೀ ಉದ್ದದ ವಾಕ್ಯವೇ, ಫುಡ್‌ಕೋರ್ಟ್, ಎಲಿವೇಟೆಡ್ ವಾಕ್‌ವೇ ಮುಂತಾದ ಸೌಲಭ್ಯಗಳು ಬರಲಿವೆ. ಹಂತ-1ಬಿ ಯಲ್ಲಿ ಮಕ್ಕಳ ಆಟದ ತಾಣ, ಹೊರಾಂಗಣ ಜಿಮ್, ಸಾಕುಪ್ರಾಣಿಗಳ ಓಡಾಟಕ್ಕೆ ಅನುಕೂಲ, ಕಾರಂಜಿ, ವಾಚ್ ಟವರ್ ನಿರ್ಮಿಸಲಾಗುವುದು. ಹಂತ-2ರಲ್ಲಿ ಇನ್ನೋವೇಶನ್ ಹಬ್, ಕಲ್ಬರಲ್ ಹಬ್, ನರ್ಸರಿ, ಸ್ಪೋಟ್ಸ್ ಹಬ್, ಮಲ್ಟಿಪರ್ಪಸ್ ಥಿಯೇಟರಳು ಇರಲಿವೆ ಎಂದು ಎಂ. ಬಿ ಪಾಟೀಲ್ ವಿವರಿಸಿದರು.
ಉದ್ದೇಶಿತ ವೃಕೋದ್ಯಾನದಲ್ಲಿ ನಾಡಿನ ಸಂಸ್ಕೃತಿಯ ಪ್ರತಿಬಿಂಬ ಇರುವಂತೆ ನೋಡಿಕೊಳ್ಳಲಾಗುವುದು. ಇದರ ಜತೆಗೆ ಎನ್‌ಜಿಇಎಫ್‌ನ ಬೆಳವಣಿಗೆ, ಅದರ ಯಶಸ್ಸು ಇತ್ಯಾದಿಗಳನ್ನು ಬಿಂಬಿಸಲಾಗುವುದು. ಒಟ್ಟಿನಲ್ಲಿ ಬೆಂಗಳೂರಿನ ಹಸಿರನ್ನು ಉಳಿಸಿಕೊಂಡು, ಅಭಿವೃದ್ಧಿಯನ್ನು ಸಾಧಿಸಬೇಕು ಎನ್ನುವುದು ನಮ್ಮ ಒತ್ತಾಸೆಯಾಗಿದೆ ಎಂದು ಎಂ. ಬಿ. ಪಾಟೀಲ್
ತಿಳಿಸಿದರು.
ಸಭೆಯಲ್ಲಿ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಆಯುಕ್ತ ಗುಂಜನ್ ಕೃಷ್ಣ, ಎನ್‌ಜಿಇಎಫ್ ಕಾರ್ಯನಿರ್ವಾಹಕ ನಿರ್ದೇಶಕಿ ಅರುಣಿ ಮತ್ತಿತರರು ಉಪಸ್ಥಿತರಿದ್ದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


