ಕಷ್ಟ ಬಂದಾಗ ನಿವಾರಣೆಯಾಗಲಿ ಎಂದು ದೇವರ ಮೊರೆ ಹೋಗುವುದು, ಹರಕೆ ಹೇಳುವುದು ಸಹಜ. ಆದರೆ ಕೆಲವೊಮ್ಮೆ ಅತಿಯಾದ ನಂಬಿಕೆ ಅನಾಹುತವನ್ನೇ ಸೃಷ್ಟಿಸುತ್ತದೆ. ಇಲ್ಲೊಬ್ಬ ಬಿಜೆಪಿ ಅಭಿಮಾನಿಯೋರ್ವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಕಾರಣ ತನ್ನ ಎಡಕೈ ಬೆರಳೊಂದನ್ನು ಕಾಳಿ ದೇವಿಗೆ ಅರ್ಪಿಸಿದ್ದಾನೆ..!
ಈ ಘಟನೆ ನಡೆದದ್ದು ಛತ್ತಿಸ್‌ಘಡದ ಬಲರಾಮ್‌ಪುರದಲ್ಲಿ. ಇಲ್ಲಿನ ಬಿಜೆಪಿ ಕಾರ್ಯಕರ್ತ ದುರ್ಗೇಶ್ ಪಾಂಡೆ (30 )ಎಂಬಾತ ಬೆರಳು ಕತ್ತರಿಸಿಕೊಂಡ ಯುವಕ. ಲೋಕಸಭಾ ಚುನಾವಣಾ ಫಲಿತಾಂಶ ಪ್ರಕಟವಾಗುತ್ತಿದ್ದುದನ್ನು ವೀಕ್ಷಿಸುತ್ತಿದ್ದ. ಆರಂಭದಲ್ಲಿ ಕಾಂಗ್ರೆಸ್ ನೇತೃತ್ವದ ಇಂಡಿಯಾ ಕೂಟ ಮುನ್ನಡೆ ಕಾಯ್ದುಕೊಂಡಿತ್ತು. ಇದರಿಂದ ತೀರಾ ಖಿನ್ನತೆಗೊಳಗಾದ ಯುವಕ ಸಮೀಪದಲ್ಲಿದ್ದ ಕಾಳಿ ದೇವಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವಿಯಲ್ಲಿ ಪ್ರಾರ್ಥಿಸಿಕೊಳ್ಳುತ್ತಾನೆ. ಈ ಬಾರಿ ಬಿಜೆಪಿ ಗೆಲುವು ಸಾಧಿಸಿದರೆ ತನ್ನ ಒಂದು ಬೆರಳನ್ನು ಕಾಳಿ ದೇವಿಗೆ ಅರ್ಪಿಸುತ್ತೇನೆ ಎಂದು ಹರಕೆ ಹೊತ್ತುಕೊಳ್ಳುತ್ತಾನೆ.
ಕ್ರಮೇಣ ಫಲಿತಾಂಶ ಪ್ರಕಟವಾಗಿ ಎನ್‌ಡಿಎ ಗೆಲುವು ಸಾಧಿಸುತ್ತದೆ. ಯುವಕನ ಈ ಖುಷಿಗೆ ಪಾರವೇ ಇರಲಿಲ್ಲ. ತಕ್ಷಣ ಕಾಳಿ ದೇವಿಯ ದೇವಸ್ಥಾನಕ್ಕೆ ತೆರಳಿ ಎಡಗೈ ಬೆರಳನ್ನು ಕೊಯ್ದು ತನ್ನ ಹರಕೆ ತೀರಿಸಿಕೊಳ್ಳುತ್ತಾನೆ. ಇತ್ತ ಬೆರಳನ್ನು ಕೊಯ್ದ ಜಾಗದಲ್ಲಿ ರಕ್ತ ಸುರಿಯುತ್ತಿದ್ದುದರಿಂದ ದುರ್ಗೇಶ್ ಅಸ್ವಸ್ಥಗೊಳ್ಳುತ್ತಾನೆ. ತಕ್ಷಣ ಅಲ್ಲಿದ್ದವರು ಆತನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ್ದಾರೆ. ಸದ್ಯ ಅಪಾಯದಿಂದ ಪಾರಾಗಿದ್ದಾನೆ. ಬಿಜೆಪಿ ಅಧಿಕಾರಕ್ಕೆ ಬಂದರೆ ನನ್ನ ಒಂದು ಬೆರಳನ್ನು ಅರ್ಪಿಸುವುದಾಗಿ ಪ್ರಾರ್ಥಿಸಿದ್ದೆ. ನನ್ನ ಪ್ರಾರ್ಥನೆ ಫಲಿಸಿದೆ. ಅದರಂತೆ ಕೊನೆ ಕ್ಷಣದಲ್ಲಿ ಬಿಜೆಪಿ ಬಹುಮತ ಪಡೆಯುತ್ತಿದ್ದಂತೆ ದೇವಸ್ಥಾನಕ್ಕೆ ಬಂದು ಬೆರಳನ್ನು ಅರ್ಪಿಸಿದೆ ಎಂದು ಯುವಕ ಹೇಳಿಕೊಂಡಿದ್ದಾನೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA