ಹೆಚ್.ಡಿ.ಕೋಟೆ: ನಾವು ಯಾರು ಇಂತ ಜಾತಿಯಲ್ಲಿ ಹುಟ್ಟಬೇಕು ಎಂದು ಅರ್ಜಿ ಹಾಕುವುದಿಲ್ಲ, ಹುಟ್ಟು ಸಾವಿನ ನಡುವೆ ಜೀವನವನ್ನು ಸಾರ್ಥಕ ಮಾಡಿಕೊಳ್ಳಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಿಳಿಸಿದರು.
ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಮಂಗಳವಾರ ಆರ್.ಧ್ರುವನಾರಾಯಣ್ ಅವರ ಅಭಿಮಾನಿ ಬಳಗದ ವತಿಯಿಂದ ಹಮ್ಮಿಕೊಂಡಿದ್ದ ದಿ.ಆರ್.ಧ್ರುವನಾರಾಯಣ್ ಅವರ ನುಡಿ ನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಾವು ನಡೆದು ಬಂದ ದಾರಿಯ ಬಗ್ಗೆ ಅವಲೋಕನ ಮಾಡಿಕೊಂಡಾಗ ಸಾರ್ಥಕತೆಯ ತೃಪ್ತಿ ಸಿಗುತ್ತದೆ. ನಾವು ಸಮಾಜ ಮುಖಿಯಾಗಿ ಕೆಲಸ ಮಾಡಿದಾಗ ಮಾತ್ರ ನಮ್ಮ ಬದುಕು ಸಾರ್ಥಕ ಆಗಲು ಸಾಧ್ಯ. ದಿ.ಆರ್.ಧ್ರುವನಾರಾಯಣ್ ಅವರ ಅಕಾಲಿಕ ಸಾವಿನಿಂದ ದೊಡ್ಡ ಶಕ್ತಿ ಕಳೆದುಕೊಂಡಂತೆ ಆಗಿದೆ, ಅವರ ಶಕ್ತಿ ಇನ್ನೂ ಈ ನಾಡಿಗೆ ಬೇಕಿತ್ತು, ಧ್ರುವನಾರಾಯಣ್ ಅವರಿಗೆ ಧ್ರುವನಾರಾಯಣ್ ಸಾಟಿ, ಅವರ ಜಾಗ ತುಂಬಲಿಕ್ಕೆ ಬೇರೆ ಯಾರಿಂದಲೂ ಸಾಧ್ಯವಿಲ್ಲ. ಆರ್. ಧ್ರುನಾರಾಯಣ್ ಅವರಿಗೆ ಇದ್ದ ದೂರದೃಷ್ಟಿ, ಕಾಳಜಿ ಎಲ್ಲವನ್ನೂ ಅವರ ಮಗ ದರ್ಶನ್ ಅವರಲ್ಲಿ ಕಾಣಬಹುದಾಗಿದೆ, ಎಲ್ಲಾ ರೀತಿಯ ಶಕ್ತಿ ತುಂಬುವಂತ ಕೆಲಸವನ್ನು ನಾನು ಮಾಡುತ್ತೇನೆ ಎಂದರು.
ಆರ್.ಧ್ರುವನಾರಾಯಣ್ ಅವರು ಎಲ್ಲಾ ಜಾತಿ ಜನರನ್ನು ಒಟ್ಟಿಗೆ ತೆಗೆದುಕೊಂಡು ಹೋಗುತ್ತಿದ್ದರು, ಯಾರನ್ನು ಭೇದಭಾವ ಮಾಡುತ್ತಿರಲಿಲ್ಲ, ಅದರಲ್ಲೂ ಕೋಟೆ ಬಗ್ಗೆ ಅಪಾರವಾದ ಪ್ರೀತಿ, ಕಾಳಜಿ ಇತ್ತು. ತಾಲ್ಲೂಕಿನಲ್ಲಿ ನಡೆಯುತ್ತಿದ್ದ ಯಾವುದೇ ಕಾರ್ಯಕ್ರಮಕ್ಕೂ ಬರುತ್ತಿದ್ದರು. ಅನಿಲ್ ಚಿಕ್ಕಮಾದು ಅವರಿಗೆ ರಾಜಕೀಯವಾಗಿ ಶಕ್ತಿ ತುಂಬುವ ಕೆಲಸ ಮಾಡಿದ್ದರು. ಅನಿಲ್ ಚಿಕ್ಕಮಾದು ಶಾಸಕರಾಗಿ ಆಯ್ಕೆ ಆಗಲು ಧ್ರುವನಾರಾಯಣ್ ಕಾರಣ. ಧ್ರುವನಾರಾಯಣ್ ಅವರ ಜಾಗ ತುಂಬಲು ದರ್ಶನ್ ಅವರನ್ನು ಬೆಂಬಲಿಸಿದ್ದೇನೆ, ಜನ ನಾಯಕ ಆಗಲು ನನ್ನ ಸಹಕಾರ ಇದೆ ಎಂದು ಅವರು ಹೇಳಿದರು.
ಪಕ್ಷದ ಕಾರ್ಯಚಟುವಟಿಕೆಗಳಲ್ಲಿ ತುಂಬಾ ಓಡಾಡಿಕೊಂಡಿದ್ದರು, ಕಾಂಗ್ರೆಸ್ ಪಕ್ಷದ ಸಿದ್ಧಾಂತಗಳನ್ನು ತಿಳಿದುಕೊಂಡು ಜನರಿಗೆ ತಿಳಿಸುವಂತ ಕೆಲಸವನ್ನು ನಿರಂತರವಾಗಿ ಮಾಡುತ್ತಿದ್ದರು. ಪಕ್ಷದ ವಿವಿಧ ಹಂತಗಳಲ್ಲಿ ಕೆಲಸ ಮಾಡಿಕೊಂಡು ಬಂದು ಕಾಂಗ್ರೆಸ್ ಪಕ್ಷದ ಕಾರ್ಯಧ್ಯಕ್ಷರಾದ ನಂತರ ಇಡಿ ರಾಜ್ಯ ಸುತ್ತಿ ಪಕ್ಷ ಸಂಘಟನೆ ಮಾಡಿದರು ಎಂದು ಅವರು ಹೇಳಿದರು.
ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯಲ್ಲಿ ದಿ.ಎಚ್.ಎಸ್. ಮಹದೇವ ಪ್ರಸಾದ್ ಪಕ್ಷ ಕಟ್ಟುವಲ್ಲಿ ಮುಂಚೂಣಿ ನಾಯಕರಾಗಿದ್ದರು, ಇವರ ನಂತರ ಪಕ್ಷ ಗಟ್ಟಿಯಾಗಿ ಬೆಳೆಯ ಬೇಕಾದರೆ, ಹೆಚ್ಚು ಶಾಸಕ ಸ್ಥಾನ ಪಡೆಯಬೇಕಾದರೆ ಆರ್.ಧ್ರುವನಾರಾಯಣ್ ಅವರ ಪಾತ್ರ ಬಹಳ ಮುಖ್ಯ ಆಗಿತ್ತು ಎಂದು ಅವರು ಹೇಳಿದರು.
ತಮ್ಮ ಸ್ವಾರ್ಥವನ್ನು ಬಿಟ್ಟು ಜನರಿಗಾಗಿ ಸೇವೆ ಮಾಡಿದ ಅಪರೂಪದ ರಾಜಕಾರಣಿ ಧ್ರುವನಾರಾಯಣ್, ಅವರ ಶ್ರದ್ಧಾಂಜಲಿ ಸಭೆಯಲ್ಲಿ ಭಾಗವಹಿಸುತ್ತೇವೆ ಎಂದು ಅಂದುಕೊಂಡಿರಲಿಲ್ಲಾ, ಇಷ್ಟು ಬೇಗ ನಮ್ಮನ್ನು ಅಗಲುತ್ತಾರೆ ಎಂದು ಕೂಡ ಇರಲಿಲ್ಲ ಅವರ ಸಾವಿನ ದುಃಖವನ್ನು ಬರಿಸುವ ಶಕ್ತಿ ಅವರ ಕುಟುಂಬಕ್ಕೆ ಭಗವಂತ ಕರುಣಿಸಲಿ ಎಂದರು.
ನಾನು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಅನಿಲ್ ಶಾಸಕರಾಗಿದ್ದರೆ, ನಾನು ಸಾಕಷ್ಟು ಅನುದಾನ ನೀಡುತ್ತಿದ್ದೆ, ಮುಂದಿನ ಬಾರಿ ಅನಿಲ್ ಚಿಕ್ಕಮಾದು ಅವರಿಗೆ ಬೆಂಬಲ ನೀಡಿ ಆಶೀರ್ವಾದಿಸಿ, ನಾನು ಏನೆಲ್ಲಾ ಸಹಕಾರ ನೀಡಬೇಕು ಅದನ್ನು ನೀಡುತ್ತೇನೆ ಎಂದು ತಿಳಿಸಿದರು.
ಧ್ರುವನಾರಾಯಣ್ ಅವರ ಪುತ್ರ ದರ್ಶನ್ ಮಾತನಾಡಿ, ದೈಹಿಕವಾಗಿ ನಮ್ಮ ತಂದೆ ದೂರಾಗಿದ್ದಾರೆ, ಆದರೆ ಮಾನಸಿಕವಾಗಿ ನಮ್ಮ ಜೊತೆಯಲ್ಲಿ ಇದ್ದಾರೆ. ನಮ್ಮ ಕುಟುಂಬಕ್ಕೆ ರಾಜ್ಯದ ಜನತೆ ಬಂದು ಸಾಂತ್ವನ ಹೇಳಿದ್ದಾರೆ. ಅದೇ ರೀತಿ ಸಿದ್ದರಾಮಯ್ಯ ನವರು, ಡಿ.ಕೆ.ಶಿವಕುಮಾರ್, ಸತೀಶ್ ಜಾರಕಿಹೊಳಿ ಸೇರಿದಂತೆ ವಿವಿಧ ರಾಜಕೀಯ ಪಕ್ಷದ ನಾಯಕರು ನಮ್ಮ ಕುಟುಂಬಕ್ಕೆ ಸಾಂತ್ವನ ಹೇಳಿ ಧೈರ್ಯ ತುಂಬಿದ್ದಾರೆ ಎಂದರು.
ಮಾರ್ಗದರ್ಶಕರಾಗಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಅನಿಲ್ ಚಿಕ್ಕಮಾದು ಅವರು ನನ್ನನ್ನು ರಾಜಕೀಯವಾಗಿ ಕೈ ಹಿಡಿದು ಬೆಳಸಬೇಕು ಎಂದು ಕೋರಿದರು. ನಮ್ಮ ತಂದೆ ನಮಗೆ ರಾಜಕೀಯ ಹೇಳಿಕೊಟ್ಟಿಲ್ಲಾ, ಅವರು ಮಾಡುತ್ತಿದ್ದ ಜನ ಸೇವೆ ನೋಡಿಕೊಂಡು ನಮ್ಮ ಕುಟುಂಬ ಬಂದಿದೆ. ನಮ್ಮ ತಂದೆಯವರ ಮೇಲೆ ಇಟ್ಟಿರುವ ನಂಬಿಕೆ ವಿಶ್ವಾಸವನ್ನು ನಾನು ಉಳಿಸಿಕೊಂಡು ಹೋಗುತ್ತೇನೆ ಎಂದು ತಿಳಿಸಿದರು.
ಶಾಸಕ ಅನಿಲ್ ಚಿಕ್ಕಮಾದು ಮಾತನಾಡಿ, ದಿ.ಆರ್.ಧ್ರುವನಾರಾಯಣ್ ಅವರು ನನಗೆ ರಾಜಕೀಯವಾಗಿ ವಿಶೇಷವಾದ ಅನುಭವ ನೀಡಿದರು, ತಾಲ್ಲೂಕಿನಲ್ಲಿ ಏಕಲವ್ಯ, ಆದರ್ಶ, ಮುರಾರ್ಜಿ ವಸತಿ ಶಾಲೆ, ಕಾಂಕ್ರೀಟ್ ರಸ್ತೆ ಸೇರಿದಂತೆ ತಾಲ್ಲೂಕಿನ ಸರ್ವಾಂಗೀಣ ಅಭಿವೃದ್ಧಿ ಮಾಡಿದರು. ನಮ್ಮ ತಂದೆಯನ್ನು ಕಳೆದುಕೊಂಡ ಸಂದರ್ಭದಲ್ಲಿ ನನ್ನ ತಂದೆ ಸ್ಥಾನದಲ್ಲಿ ಸಿದ್ದರಾಮಯ್ಯ, ಅಣ್ಣನ ಸ್ಥಾನದಲ್ಲಿ ಧ್ರುವನಾರಾಯಣ್ ಅವರು ನಿಂತು ಸಹಕಾರ ನೀಡಿದರು ಎಂದು ಸ್ಮರಿಸಿದರು.
ದಿ.ಆರ್.ಧ್ರುವನಾರಾಯಣ್ ಅವರು ಹದಿನಾಲ್ಕು ವರ್ಷಗಳ ಕಾಲ ಸಂಸದರಾಗಿದ್ದ ಅವಧಿಯಲ್ಲಿ ಪ್ರತಿಯೊಂದು ಗ್ರಾಮಕ್ಕೂ ಭೇಟಿ ನೀಡಿದರು, ಎಲ್ಲಾ ವರ್ಗದ ನಾಯಕರಾಗಿ ಬೆಳೆದವರು. ಪಕ್ಷದ ಕಾರ್ಯಾಧ್ಯಕ್ಷ ಆದ ನಂತರ ರಾಜ್ಯಾದ್ಯಂತ ಪ್ರವಾಸ ಮಾಡಿ ಪಕ್ಷ ಸಂಘಟನೆ ಮಾಡಿದರು. ಅವರ ಹೆಸರು ಉಳಿಸುವಂತ ಕೆಲಸವನ್ನು ನಾವೆಲ್ಲರೂ ಮಾಡೋಣ ಎಂದು ತಿಳಿಸಿದರು.
ಮಾಜಿ ಮಂತ್ರಿ ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಮಾತನಾಡಿ, ಆರ್.ಧ್ರುವನಾರಾಯಣ್ ಅವರು ಇನ್ನೂ ದೀರ್ಘ ಕಾಲ ರಾಜಕೀಯ, ಸಮಾಜ ಸೇವೆ ಮಾಡಬೇಕಿತ್ತು, ಕೆಲವೇ ಕೆಲವು ರಾಜಕಾರಣಿಗಳಲ್ಲಿ ಧ್ರುವನಾರಾಯಣ್ ಅವರೂ ಒಬ್ಬರು, ಸಮಾಜದ ಬಗ್ಗೆ, ಶೋಷಿತರ ಬಗ್ಗೆ ಚಿಂತನೆ ಇಟ್ಟುಕೊಂಡಿದ್ದ ಪ್ರಬುದ್ದ ರಾಜಕಾರಣಿ, ಗ್ರಾಮ ಪಂಚಾಯತಿ ಸದಸ್ಯರ ರೀತಿ ಸಾಮಾನ್ಯರಲ್ಲಿ ಸಾಮಾನ್ಯರಾಗಿ ಕೆಲಸ ಮಾಡಿದರು. ಅಷ್ಟು ಸರಳವಾಗಿದ್ದರು, ಇಂದಿನ ರಾಜಕಾರಣ ತುಂಬಾ ಕಷ್ಟ, ಆದರೆ ಧ್ರುವನಾರಾಯಣ್ ಅವರು ರಾಜಕೀಯವನ್ನು ಸಮಾಜ ಸೇವೆ ಎಂದು ತಿಳಿದ ಕೆಲಸ ಮಾಡಿದವರು. ಪಕ್ಷ, ಸಮಾಜಮುಖಿಯಾಗಿ ಕೆಲಸ ಮಾಡಿದರು, ಅವರ ಸ್ಥಾನವನ್ನು ಅವರ ಮಗ ದರ್ಶನ್ ತುಂಬಲಿದ್ದಾರೆ, ಅವರ ಜೊತೆ ನಾವು ಇರುತ್ತೇವೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಡಾ.ತಿಮ್ಮಯ್ಯ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ವಿಜಯಕುಮಾರ್, ಜಿಲ್ಲಾ ಪಂಚಾಯತಿ ಮಾಜಿ ಸದಸ್ಯರಾದ ನಂದಿನಿ ಚಂದ್ರಶೇಖರ್, ಎಚ್.ಸಿ.ಮಂಜುನಾಥ್, ಹೆಚ್.ಸಿ.ನರಸಿಂಹಮೂರ್ತಿ, ಚಿಕ್ಕವೀರನಾಯಕ, ಪಿ.ರವಿ, ಭಾಗ್ಯಲಕ್ಷ್ಮಿ, ಡಿ.ಸುಂದರ ದಾಸ್, ಕಾವೇರಪ್ಪ, ಜಿ.ವಿ.ಸೀತಾರಾಮ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಏಜಾಜ್ ಪಾಷ, ಮನುಗನಹಳ್ಳಿ ಮಾದಪ್ಪ, ಪುರಸಭಾ ಸದಸ್ಯ , ಶಿವಪ್ಪ ಕೋಟೆ , ಎಚ್.ಕೆ ಪ್ರಕಾಶ್ ಇದ್ದರು.
ವರದಿ: ಮಲಾರ ಮಹದೇವಸ್ವಾಮಿ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


