ದಾವಣಗೆರೆ: ಕೇಂದ್ರ ಸರ್ಕಾರವು ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುವ ಮೂಲಕ ಜನರ ಮೇಲೆ ಹೇರಿರುವ ಆರ್ಥಿಕ ಹೊರೆಯನ್ನು ತಗ್ಗಿಸಲು ರಾಜ್ಯ ಸರ್ಕಾರ ಸಾಲ ಮಾಡಿದೆ. ಜನಕಲ್ಯಾಣ ಯೋಜನೆಗಳನ್ನು ನೀಡದಿದ್ದರೂ ಪ್ರಧಾನಿ ನರೇಂದ್ರ ಮೋದಿ ಅವರು ಸಾಲ ಮಾಡಿಲ್ಲವೇ? ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರಶ್ನಿಸಿದ್ದಾರೆ.
ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ನಿಯಂತ್ರಿಸುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ. ಈ ಬೆಲೆ ಏರಿಕೆಯ ಬಿಸಿಯಿಂದ ಜನರನ್ನು ರಕ್ಷಿಸಲು ರಾಜ್ಯ ಸರ್ಕಾರ ‘ಗ್ಯಾರಂಟಿ’ ಯೋಜನೆಗಳ ಮೂಲಕ ಜನರ ಕೈಗೆ ಹಣ ನೀಡುತ್ತಿದೆ. ಕೇಂದ್ರಕ್ಕೆ ಜನರ ಬಗ್ಗೆ ನಿಜವಾದ ಕಾಳಜಿ ಇದ್ದರೆ, ಜನರ ಬ್ಯಾಂಕ್ ಖಾತೆಗಳಿಗೆ ತಿಂಗಳಿಗೆ ₹10,000 ಆರ್ಥಿಕ ನೆರವು ನೀಡಲಿ ಎಂದು ಸವಾಲು ಹಾಕಿದರು.
ಬಿಜೆಪಿ ಕೇವಲ ಖಾಲಿ ಮಾತುಗಳ ಮೂಲಕ ಜನರನ್ನು ಮರಳು ಮಾಡುತ್ತಿದೆ. ಅಯೋಧ್ಯೆಯಿಂದ ತಂದ ಅಕ್ಷತೆಯ ಬಗ್ಗೆ ಪ್ರಸ್ತಾಪಿಸಿದ ಅವರು, ಅಕ್ಷತೆಯನ್ನು ಮನೆಮನೆಗೆ ತಲುಪಿಸಿದ ರೀತಿಯಲ್ಲೇ ಎಲ್ ಪಿಜಿ ಸಿಲಿಂಡರ್ ಗಳನ್ನು ಏಕೆ ಕಡಿಮೆ ದರದಲ್ಲಿ ಪೂರೈಸಬಾರದು ಎಂದು ಪ್ರಶ್ನಿಸಿದರು.
ರಾಜ್ಯ ಸರ್ಕಾರವು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ತಮ್ಮ ನೇತೃತ್ವದಲ್ಲಿ ಒಗ್ಗಟ್ಟಿನಿಂದ ಸಾಗುತ್ತಿದೆ. ಉಪಚುನಾವಣೆಯಲ್ಲಿ ಕೂಡ ಕಾಂಗ್ರೆಸ್ ಪಕ್ಷದ ಸಚಿವರು, ಶಾಸಕರು ಮತ್ತು ಕಾರ್ಯಕರ್ತರು ಒಟ್ಟಾಗಿ ಕೆಲಸ ಮಾಡುತ್ತಿದ್ದಾರೆ. ನಾವು ಜಾತಿ, ಧರ್ಮದ ಆಧಾರದ ಮೇಲೆ ರಾಜಕಾರಣ ಮಾಡದೆ, ನೀತಿಗಳ ಮೇಲೆ ರಾಜಕಾರಣ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.
ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳು ದಾವಣಗೆರೆಯಲ್ಲಿ ತಡರಾತ್ರಿಯವರೆಗೆ ಸರಣಿ ಸಭೆಗಳನ್ನು ನಡೆಸಿದ್ದಾರೆ. ಮುಸ್ಲಿಂ ಮುಖಂಡರ ಮನೆಗಳಿಗೆ ಭೇಟಿ ನೀಡಿ ಸಮುದಾಯದ ವಿಶ್ವಾಸ ಪಡೆಯುವ ಪ್ರಯತ್ನ ನಡೆಸಿದ್ದಾರೆ.
ರಾತ್ರಿ ಬಹಿರಂಗ ಸಭೆಯ ನಂತರ ಮಳೆ ಬಂದಿದ್ದು ಶುಭ ಸೂಚನೆ ಎಂದು ಬಣ್ಣಿಸಿದ ಡಿ.ಕೆ.ಶಿವಕುಮಾರ್, ಚುನಾವಣಾ ಪ್ರಚಾರ ಕಾರ್ಯಗಳು ಅತ್ಯಂತ ಚುರುಕಾಗಿ ನಡೆಯುತ್ತಿವೆ ಎಂದು ತಿಳಿಸಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


