ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಥವಾ ವಿಶ್ವ ಮಹಿಳೆಯರ ದಿನ ಪ್ರತಿ ವರ್ಷ ಮಾರ್ಚ್ 8 ರಂದು ವಿಶ್ವದೆಲ್ಲೆಡೆ ಆಚರಿಸಲಾಗುತ್ತದೆ. ಈ ದಿನದಂದು ಮಹಿಳೆಯರ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಸಾಧನೆಗಳನ್ನು ನೆನೆಯಲಾಗುತ್ತದೆ.
1910ರ ಆಗಸ್ಟ್ ನಲ್ಲಿ ಡೆನ್ಮಾರ್ಕ್ನ ಕೋಪೆನ್ ಹೇಗನ್ ನಲ್ಲಿ ಎರಡನೆಯ ಅಂತರರಾಷ್ಟ್ರೀಯ ಸೋಷಿಯಲಿಸ್ಟ್ ಮಹಿಳಾ ಸಮ್ಮೇಳನ ನಡೆಯಿತು. ಅಲ್ಲಿನ ಕಾರ್ಮಿಕರ ಪ್ರತಿನಿಧಿ ಸಭೆಯ ಸಭಾಂಗಣದಲ್ಲಿ 17 ದೇಶಗಳ ಪ್ರತಿನಿಧಿಗಳು ಸೇರಿದ್ದರು. ಅಮೆರಿಕೆಯ ಹಲವಾರು ಕಾರ್ಮಿಕ ಸಂಘಟನೆಗಳ ನಾಯಕಿಯರು ಬಂದಿದ್ದರು.
ಈ ಸಮ್ಮೇಳನಕ್ಕೆ ಅಂತರರಾಷ್ಟ್ರೀಯ ಮಹಿಳಾ ಸೆಕ್ರೆಟೇರಿಯೆಟ್ನ ಮುಖ್ಯಸ್ಥೆಯಾಗಿದ್ದ ಕ್ಲಾರಾ ಜೆಟ್ಕಿನ್ ಅಧ್ಯಕ್ಷೆಯಾಗಿದ್ದಳು. ಈ ಸಮ್ಮೇಳನದಲ್ಲಿ ಚರ್ಚಿತವಾದ ಎರಡು ವಿಷಯಗಳೆಂದರೆ ಸಾರ್ವತ್ರಿಕ ಮತದಾನದ ಹಕ್ಕು ಮತ್ತು ಮಹಿಳೆಯರ ಹೆರಿಗೆ ಭತ್ಯೆ ಮತ್ತು ಇತರ ಸೌಕರ್ಯಗಳು.
ಮಹಿಳಾ ಸಮಾನತೆಯ ವಿಚಾರದಲ್ಲಿ ವಿಶ್ವದಾದ್ಯಂತ ತಾರತಮ್ಯ ನಡೆಯುತ್ತಿದೆ. ಪುರುಷನಷ್ಟೇ ಸಾಮರ್ಥ್ಯವನ್ನು ಮಹಿಳೆಯರು ಹೊಂದಿದ್ದರೂ, ಅವರನ್ನು ಕೀಳಾಗಿ ಕಾಣುವ ದುಷ್ಟ ಸಂಸ್ಕೃತಿ ನಮ್ಮ ದೇಶದಲ್ಲಿ ಇತ್ತು ಮತ್ತು ಈಗಲೂ ಅದು ಸಂಪೂರ್ಣವಾಗಿ ಕೊನೆಗೊಂಡಿಲ್ಲ.
ಮನುಸ್ಮೃತಿಯ ದುಷ್ಟ ಆಚರಣೆಗಳಿಂದಾಗಿ ಮಹಿಳೆಯರು ಸಾವಿರಾರು ವರ್ಷಗಳಿಂದ ಇಂದಿಗೂ ಶೋಷಿತರಾಗಿಯೇ ಉಳಿದಿದ್ದಾರೆ. ಮಹಿಳೆಯನ್ನು ಕಟ್ಟಕಡೆಯ ಪ್ರಜೆಯಾಗಿ ಪರಿಗಣಿಸಲಾಗುತ್ತಿತ್ತು. ಆಕೆ ಕೇವಲ ಭೂಗದ ವಸ್ತು ಅಥವಾ ಪುರುಷರ ಸೇವೆಗೆಂದೇ ಇರುವ ನಿರ್ಜೀವ, ನಿರ್ಭಾವ ವಸ್ತು ಎಂದೇ ಮನುಸಂಸ್ಕೃತಿಯ ಪುರುಷ ಪ್ರಧಾನ ವ್ಯವಸ್ಥೆ ನಡೆಸಿಕೊಂಡಿತು.
ಇಂದಿಗೂ ಮಹಿಳೆ ತನ್ನ ಇಷ್ಟದಂತೆ ಸಮಾಜದಲ್ಲಿ ಬದುಕು ಸಾಗಿಸಲು ಸಾಧ್ಯವಾಗದ ಸ್ಥಿತಿಯಲ್ಲಿದ್ದಾಳೆ. ಮಹಿಳೆ ಯಾವ ಬಟ್ಟೆ ಧರಿಸಬೇಕು, ಎಲ್ಲಿ ಹೋಗಬೇಕು, ಯಾರ ಜೊತೆಗೆ ಮಾತನಾಡಬೇಕು, ಯಾರ ಜೊತೆಗೆ ಮದುವೆಯಾಗಬೇಕು, ಯಾವ ಶಿಕ್ಷಣ ಪಡೆಯಬೇಕು ಅನ್ನೋದನ್ನು ಪುರುಷ ಪ್ರಧಾನ ಸಮಾಜವೇ ನಿರ್ಧರಿಸುವ ಸ್ಥಿತಿ ಇಂದಿಗೂ ಮರೆಯಾಗಿಲ್ಲ.
ಇತ್ತೀಚೆಗೆ ಚಿತ್ರದುರ್ಗದ ಹಿರಿಯೂರಿನಲ್ಲಿ ಮುಟ್ಟಾದ ಮಹಿಳೆಯರು ಮನೆಯ ಹೊರಗಿನ ಕಾಡಿನಲ್ಲಿ ಮಲಗಿರುವ ಘಟನೆಯನ್ನು ಅಲ್ಲಿನ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಅವರು ಪತ್ತೆ ಹಚ್ಚಿದರು.
ಹಿಂದಿನ ಕಾಲದ ಅನಿಷ್ಠ ಸಂಸ್ಕೃತಿಗಳು ಇನ್ನೂ ಕೂಡ ಮಹಿಳೆಯನ್ನು ಕಾಡುತ್ತಲೇ ಇದೆ. ಕಾಡು ಪ್ರಾಣಿಗಳ ಉಪಟಳದ ಮಧ್ಯೆಯೂ ಒಂದು ಹೆಣ್ಣಿನ ಜೀವಕ್ಕಿಂತ ಪುರುಷರ ಮಡಿ ಮೈಲಿಗೆಗೆ ಅನ್ನೋ ಮೌಢ್ಯತೆ ಹೆಚ್ಚು ಬೆಲೆ ಅನ್ನೋ ದುರಂತ ಬಹುಶಃ ಯಾವ ದೇಶದಲ್ಲಿಯೂ ಇರಲಾರದು.
ಭಾರತ ಡಿಜಿಟಲ್ ಯುಗದಲ್ಲಿದ್ದರೂ, ಇಂದಿಗೂ ಮೌಢ್ಯಾಚರಣೆಗಳಿಂದ ಹೊರ ಬಂದಿಲ್ಲ, ಮಹಿಳೆಯನ್ನು ಒಂದೆಡೆ ದೇವತೆಗೆ, ಭೂಮಿತಾಯಿಗೆ ಹೋಲಿಸುತ್ತಾ ಮತ್ತೊಂದೆಡೆ ಅವಮಾನ, ಶೋಷಣೆ ಮಾಡಲಾಗುತ್ತಿದೆ. ಸಾವಿತ್ರಿ ಬಾಯಿಫುಲೆ ಅವರಂತ ಶಿಕ್ಷಕಿ ಮಹಿಳೆಯರಿಗೆ ಶಿಕ್ಷಣ ಕೊಡಲು ಮುಂದಾಗದೇ ಇದ್ದಿದ್ದರೆ, ಇಂದಿಗೂ ಮಹಿಳೆಯರ ಸ್ಥಿತಿ ಸಮಾಜದಲ್ಲಿ ಅದೇ ರೀತಿಯಲ್ಲಿರುತ್ತಿತ್ತು. ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರಂತಹ ವಿಶ್ವಜ್ಞಾನಿ ಸಂವಿಧಾನವನ್ನು ಬರೆಯದೇ ಇರುತ್ತಿದ್ದರೆ, ಮಹಿಳೆಯರ ಸ್ಥಿತಿಯನ್ನು ಇಂದು ಯೋಚಿಸಲು ಸಾಧ್ಯವಾಗುತ್ತಿರಲಿಲ್ಲ. ಮಹಿಳೆ ಏನೂ ಅಲ್ಲ ಅನ್ನುವ ಸಾಮಾಜಿಕ ವ್ಯವಸ್ಥೆಯಲ್ಲಿ ಮಹಿಳೆ ಕೂಡ ತನ್ನ ಹಕ್ಕನ್ನು ಪಡೆಯಲು ಸ್ವತಂತ್ರಳು ಎಂದು ಸಂವಿಧಾನದಲ್ಲಿ ಬರೆದ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಮಹಿಳಾ ಸಮಾಜ ಇಂದು ನೆನೆಯಬೇಕಿದೆ.
ಎಲ್ಲ ಮಹಿಳೆಯರಿಗೂ ಅಂತಾರಾಷ್ಟ್ರೀಯ ಮಹಿಳಾ ದಿನದ ಶುಭಾಶಯಗಳು
–ಕಾವ್ಯಾ ಸುರೇಶ್
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DsJTbZnfQe5FbEJqOlbyUL
ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA


