ತುಮಕೂರು: ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ‘ಜನತಾ ದರ್ಶನ’ ಕಾರ್ಯಕ್ರಮದಲ್ಲಿ ಕರ್ನಾಟಕ ರಾಷ್ಟ್ರ ಸಮಿತಿ (KRS) ಪಕ್ಷದ ಕಾರ್ಯಕರ್ತರು ನಡೆದುಕೊಂಡ ರೀತಿಗೆ ಜಿಲ್ಲಾ ಕಾಂಗ್ರೆಸ್ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಕ್ಷುಲ್ಲಕ ವಿಚಾರಗಳಿಗಾಗಿ ಗಲಾಟೆ ಮಾಡುತ್ತಿರುವ ಕೆಆರ್ ಎಸ್ ಮುಖಂಡರ ವರ್ತನೆ ಖಂಡನೀಯ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಜಿ. ಚಂದ್ರಶೇಖರಗೌಡ ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ್ ಅವರ ಸಮ್ಮುಖದಲ್ಲೇ ಕೆಆರ್ ಎಸ್ ಪದಾಧಿಕಾರಿಗಳು ಗಲಾಟೆ ನಡೆಸಿ ಅಹಿತಕರ ವಾತಾವರಣ ಸೃಷ್ಟಿಸಿದ್ದಾರೆ. ಸಚಿವರು ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸುತ್ತಿದ್ದರೂ, ವಿಡಿಯೋ ಮಾಡುವ ಉದ್ದೇಶದಿಂದ ಕೆಆರ್ ಎಸ್ ಕಾರ್ಯಕರ್ತರು ಗೊಂದಲ ಉಂಟುಮಾಡಿದ್ದಾರೆ ಎಂದು ಚಂದ್ರಶೇಖರಗೌಡ ಆರೋಪಿಸಿದರು.
ಕೆಆರ್ ಎಸ್ ಪಕ್ಷದವರು ಇದೇ ರೀತಿ ವರ್ತನೆಯನ್ನು ಮುಂದುವರಿಸಿದರೆ, ಭವಿಷ್ಯದಲ್ಲಿ ಜಿಲ್ಲೆಯ ಯಾವುದೇ ಭಾಗದಲ್ಲಿ ಅವರಿಗೆ ಮುಕ್ತವಾಗಿ ಓಡಾಡಲು ಅವಕಾಶ ನೀಡುವುದಿಲ್ಲ ಎಂದು ಅವರು ಎಚ್ಚರಿಸಿದರು.
ಬಂಧನಕ್ಕೊಳಗಾದ ಕೆಆರ್‌ಎಸ್ ಮುಖಂಡ ಮೈಸೂರಿನವರಾಗಿದ್ದು, ಅವರಿಗೂ ತುಮಕೂರು ಜಿಲ್ಲೆಗೂ ಯಾವುದೇ ಸಂಬಂಧವಿಲ್ಲ. ಕೇವಲ ಗೊಂದಲ ಸೃಷ್ಟಿಸುವ ಉದ್ದೇಶದಿಂದಲೇ ಇಲ್ಲಿಗೆ ಬಂದು ಇಂತಹ ಕೃತ್ಯ ಎಸಗಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಇಕ್ಬಾಲ್ ಅಹಮದ್ ಕಿಡಿಕಾರಿದರು.
ಕೆಪಿಸಿಸಿ ಉಪಾಧ್ಯಕ್ಷ ಮುರಳೀಧರ್ ಹಾಲಪ್ಪ ಮಾತನಾಡಿ, ಮುಖ್ಯಮಂತ್ರಿಗಳು ಅಥವಾ ಸಚಿವರು ಜಿಲ್ಲೆಗೆ ಭೇಟಿ ನೀಡಿದಾಗಲೆಲ್ಲ ಕೆಆರ್ ಎಸ್ ಮುಖಂಡರು ಇಂತಹ ಚಟುವಟಿಕೆಗಳಲ್ಲಿ ತೊಡಗುತ್ತಿದ್ದಾರೆ. ಸಾರ್ವಜನಿಕ ಕಾರ್ಯಕ್ರಮಕ್ಕೆ ಅಡ್ಡಿಪಡಿಸಿದವರ ವಿರುದ್ಧ ಕಾನೂನು ರೀತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.
ಈ ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಆರ್. ರಾಮಕೃಷ್ಣ, ಗೋವಿಂದರಾಜು, ರೇವಣ್ಣ ಸಿದ್ದಯ್ಯ, ಸುವರ್ಣಮ್ಮ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


