ಬಳ್ಳಾರಿ: ದೈಹಿಕ ಅಂಗವೈಕಲ್ಯಕ್ಕಿಂತ ಮಾನಸಿಕ ವೈಕಲ್ಯತೆ ದೊಡ್ಡದು. ವಿಶೇಷ ಚೇತನರನ್ನು ಕೀಳರಿಮೆಯಿಂದ ನೋಡದೆ, ಅವರಲ್ಲಿರುವ ವಿಶೇಷ ಸಾಮರ್ಥ್ಯವನ್ನು ಗುರುತಿಸಿ ಪ್ರೋತ್ಸಾಹಿಸಬೇಕು ಎಂದು ಸಂಡೂರು ಶಾಸಕರಾದ ಈ.ಅನ್ನಪೂರ್ಣ ಅವರು ಹೇಳಿದರು.
ಜಿಲ್ಲಾಡಳಿತ, ಕಾರ್ಮಿಕ ಇಲಾಖೆ ಹಾಗೂ ಕಾರ್ಖಾನೆಗಳು, ಬಾಯ್ಲರುಗಳು, ಕೈಗಾರಿಕಾ ಸುರಕ್ಷತೆ ಮತ್ತು ಆರೋಗ್ಯ ಇಲಾಖೆ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಜಿಲ್ಲೆಯ ವಿವಿಧ ಕೈಗಾರಿಕೆಗಳ ಸಾಮಾಜಿಕ ಹೊಣೆಗಾರಿಕೆ ನಿಧಿ (ಸಿಎಸ್‌ಆರ್) ಅಡಿ ನಗರದ ಡಾ.ರಾಜ್ ಕುಮಾರ್ ರಸ್ತೆಯ ಮುನಿಸಿಪಲ್ ಕಾಲೇಜು ಆವರಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಬಳ್ಳಾರಿ ಜಿಲ್ಲೆಯ ವಿಶೇಷ ಚೇತನರಿಗೆ ಮೋಟಾರ್ ಚಾಲಿತ ತ್ರಿಚಕ್ರ ವಾಹನಗಳ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ದೇವರು ಒಂದು ಅಂಗವನ್ನು ವಿಕಲತೆ ಮಾಡಿದಾಗ ಮತ್ತೊಂದು ವಿಶೇಷ ಸಾಮರ್ಥ್ಯವನ್ನು ನೀಡಿರುತ್ತಾನೆ, ಅದನ್ನು ಗುರುತಿಸಿ ಪ್ರೋತ್ಸಾಹಿಸುವುದು ನಮ್ಮೆಲ್ಲರ ಕರ್ತವ್ಯ. ಪೋಷಕರು ಮತ್ತು ಕುಟುಂಬದ ಸದಸ್ಯರು ವಿಶೇಷಚೇತನರನ್ನು ಮೂಲೆ ಗುಂಪು ಮಾಡದೆ ಅವರಲ್ಲಿ ಆತ್ಮವಿಶ್ವಾಸ ತುಂಬುವ ಕೆಲಸ ಮಾಡಬೇಕು. ಸರ್ಕಾರವು ಇವರ ಅಭಿವೃದ್ಧಿಗೆ ಸದಾ ಬೆಂಬಲ ನೀಡುತ್ತಿದೆ ಎಂದರು.
ಜಿಲ್ಲೆಯ ವಿವಿಧ ಕೈಗಾರಿಕೆಗಳ ಮಾಲೀಕರು ಮತ್ತು ಸಿಬ್ಬಂದಿ ವರ್ಗ ತಮ್ಮ ಸಾಮಾಜಿಕ ಹೊಣೆಗಾರಿಕೆಯ ಅಡಿ ಇಂತಹ ಉಪಯುಕ್ತ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದು ಶ್ಲಾಘನೀಯ. ಈ ಕಾರ್ಯಕ್ರಮವು ಕೇವಲ ಸಹಾಯಧನ ವಿತರಣೆಗೆ ಸೀಮಿತವಾಗದೆ, ವಿಶೇಷ ಚೇತನರ ಆತ್ಮವಿಶ್ವಾಸ ಹೆಚ್ಚಿಸುವ ಮತ್ತು ಸಮಾಜದ ಜವಾಬ್ದಾರಿಯನ್ನು ನೆನಪಿಸುವ ಕಾರ್ಯಕ್ರಮವಾಗಿದೆ ಎಂದರು.
ಜಿಲ್ಲೆಯಲ್ಲಿ ದೃಷ್ಟಿಹೀನರಿಗಾಗಿ ಬ್ರೈಲ್ ಲಿಪಿ ಕಲಿಸುವ ಶಿಬಿರಗಳನ್ನು ಆಯೋಜಿಸುವ ಅಗತ್ಯವಿದೆ. ಶ್ರವಣ ದೋಷವುಳ್ಳವರಿಗೆ ಅಗತ್ಯ ಉಪಕರಣಗಳನ್ನು ಒದಗಿಸುವ ಕಾರ್ಯಗಳು ನಿರಂತರವಾಗಿ ನಡೆಯಬೇಕು. ಮಕ್ಕಳಿಗೆ ಆರಂಭಿಕ ಹಂತದಲ್ಲೇ ಬ್ರೈಲ್ ಲಿಪಿಯ ತರಬೇತಿ ನೀಡುವುದರಿಂದ ಅವರ ಭವಿಷ್ಯಕ್ಕೆ ಅನುಕೂಲವಾಗಲಿದೆ ಎಂದು ಅಭಿಪ್ರಾಯಪಟ್ಟರು.
ಜಿಲ್ಲೆಯಲ್ಲಿ ಉದ್ಯೋಗ ಸೃಷ್ಟಿ ಮಾಡುವ ಮೂಲಕ ಗ್ರಾಮೀಣ ಭಾಗದ ನಿರುದ್ಯೋಗಿ ಯುವಕ-ಯುವತಿಯರ ಭವಿಷ್ಯ ಉಜ್ವಲವಾಗಲಿದೆ. ಜಿಲ್ಲೆಯನ್ನು ಹಸಿರುಕರಣ ಮಾಡುವಲ್ಲಿ ಹೆಚ್ಚು ಹೆಚ್ಚು ಗಿಡ ನೆಡಬೇಕಾಗಿದೆ. ತ್ರಿಚಕ್ರ ವಾಹನ ಬಳಸುವರು ರಸ್ತೆ ಸಂಚಾರ ನಿಯಮ ಪಾಲಿಸುವ ಮೂಲಕ ನಿಧಾನವಾಗಿ ಸಂಚರಿಸಬೇಕು ಎಂದು ಆಶಿಸಿದರು.
ಮಹಾನಗರ ಪಾಲಿಕೆಯ ಮಹಾಪೌರರಾದ ಪಿ.ಗಾದೆಪ್ಪ ಅವರು ಮಾತನಾಡಿ, ಪಾಲಿಕೆ ವ್ಯಾಪ್ತಿಯಲ್ಲಿನ ವಿಶೇಷ ಚೇತನರು ಸರ್ಕಾರದಿಂದಿರುವ ಸೌಲಭ್ಯಗಳು ವಂಚಿತರಾಗಿದ್ದಲ್ಲಿ ಕಚೇರಿಗೆ ಭೇಟಿ ನೀಡಿದರೆ ಅಗತ್ಯ ನೆರವು ನೀಡಲಾಗುವುದು ಎಂದು ತಿಳಿಸಿದರು.
ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ಅವರು ಮಾತನಾಡಿ, ವಿಕಲಚೇತನರಿಗೆ ಸೌಲಭ್ಯಗಳನ್ನು ನೀಡುವಾಗ ಅಧಿಕಾರಿಗಳು ವಿಶೇಷ ಆದ್ಯತೆ ನೀಡಬೇಕು. ಧನಾತ್ಮಕ ಕಾಳಜಿಯ ಮೂಲಕ ಅವರಿಗೆ ಹೆಚ್ಚಿನ ಸೌಲತ್ತುಗಳನ್ನು ನೀಡಿದಾಗ ಮಾತ್ರ ಅವರು ಸಮಾಜದಲ್ಲಿ ಸಮಾನವಾಗಿ ಬದುಕಲು ಸಾಧ್ಯ ಎಂದು ಹೇಳಿದರು.
ಕೈಗಾರಿಕಾ ಸಂಸ್ಥೆಗಳು ತಮ್ಮ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್) ನಿಧಿಯನ್ನು ವಿಕಲಚೇತನರ ಸಬಲೀಕರಣಕ್ಕಾಗಿ ಮತ್ತು ಅವರಿಗೆ ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಹೆಚ್ಚು ಬಳಸಬೇಕು ಎಂದು ತಿಳಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹಮ್ಮದ್ ಹಾರೀಸ್ ಸುಮೇರ್ ಅವರು ಮಾತನಾಡಿ, ಆತ್ಮವಿಶ್ವಾಸದ ಕೊರತೆಯೇ ಅತಿದೊಡ್ಡ ವಿಕಲಚೇತನವಾಗಿದೆ. ಆತ್ಮವಿಶ್ವಾಸವಿದ್ದರೆ ಎಂತಹ ಅಡೆತಡೆಗಳನ್ನೂ ಮೀರಿ ಗುರಿ ತಲುಪಬಹುದು. ವಿಕಲಚೇತನರಿಗೆ ಸಮಾಜದಲ್ಲಿ ಸಮಾನ ಅವಕಾಶ ಮತ್ತು ಸ್ವಾಭಿಮಾನದಿಂದ ಬದುಕಲು ಇಂತಹ ಸೌಲಭ್ಯಗಳು ದೊಡ್ಡ ಆಸರೆಯಾಗಲಿವೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್) ನಿಧಿ ಯೋಜನೆಯಡಿ ಸುಮಾರು 53 ವಿಕಲಚೇತನ ಫಲಾನುಭವಿಗಳಿಗೆ ತ್ರಿಚಕ್ರ ವಾಹನಗಳನ್ನು ವಿತರಿಸುವ ಗುರಿ ಹೊಂದಲಾಗಿದ್ದು, ಸಾಂಕೇತಿಕವಾಗಿ ಕೆಲವರಿಗೆ ಪ್ರಮಾಣಪತ್ರ ಹಾಗೂ ವಾಹನಗಳನ್ನು ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಸಂಡೂರು ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ನೂರುದ್ದೀನ್, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನವೀನ್ ಕುಮಾರ್, ದಾವಣಗೆರೆಯ ಬಳ್ಳಾರಿ ವಿಭಾಗದ ಸಹಾಯಕ ಕಾರ್ಮಿಕ ಆಯುಕ್ತ ಡಾ.ಅವಿನಾಶ ನಾಯ್ಕ, ಕಾರ್ಖಾನೆಗಳ ಹಿರಿಯ ಸಹಾಯಕ ನಿರ್ದೇಶಕ ವರುಣ. ಆರ್., ಬಳ್ಳಾರಿ ಉಪವಿಭಾಗದ ಕಾರ್ಮಿಕ ಅಧಿಕಾರಿ ಎಸ್.ಜಿ. ಖೈನೂರು, ಜಿಲ್ಲಾ ಬಾಲ ಕಾರ್ಮಿಕ ಯೋಜನೆಯ ಯೋಜನಾ ನಿರ್ದೇಶಕ ಎ.ಮೌನೇಶ್ ಸೇರಿದಂತೆ ವಿವಿಧ ಸಂಘ- ಸಂಸ್ಥೆಗಳ ಪದಾಧಿಕಾರಿಗಳು, ವಿಶೇಷ ಚೇತನರು, ಅವರ ಪಾಲಕರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


