ಬೆಳಗಾವಿ: ಸ್ಲಂ ಜನಾಂದೋಲನ ಕರ್ನಾಟಕ ಸಂಘಟನೆಯಿಂದ 13/12/2024ರಂದು ಬೆಳಗಾವಿಯ ಸುವರ್ಣ ಸೌಧದ ಮುಂದೆ ನಡೆದ ಸಾಮಾಜಿಕ ನ್ಯಾಯಕ್ಕಾಗಿ ಸ್ಲಂ ನಿವಾಸಿಗಳ ಹಕ್ಕೋತ್ತಾಯ ಪ್ರತಿಭಟನೆ ಸ್ಥಳಕ್ಕೆ ಆಗಮಿಸಿ ಸರ್ಕಾರದ ಪರವಾಗಿ ಮನವಿ ಸ್ವೀಕರಿಸಿ ಮಾತನಾಡಿದ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾದ ಪ್ರಸಾದ್ ಅಬ್ಬಯ್ಯ, ರಾಜ್ಯದಲ್ಲಿ ಸ್ಲಂ ನಿವಾಸಿಗಳ ಜನಸಂಖ್ಯೆಗೆ ಅನುಗುಣವಾಗಿ ಪ್ರಸ್ತುತ ಬಜೆಟ್‌ನಲ್ಲಿ ಹಣ ಮೀಸಲಿಡುವುದು ಸೇರಿದಂತೆ ಸ್ಲಂ ಕಾಯಿದೆಗೆ ವಿರುದ್ಧವಾಗಿರುವ ವಸತಿ ಇಲಾಖೆ ಸುತ್ತೋಲೆ ವಾಪಸಾತಿ ಹಾಗೂ ಲ್ಯಾಂಡ್ ಬ್ಯಾಂಕ್ ನೀತಿ ಕುರಿತಂತೆ ಪ್ರಸ್ತುತ ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಚರ್ಚೆ ಮಾಡಲು ಈಗಾಗಲೇ ಸಮಯ ನಿಗಧಿಯಾಗಿದ್ದು ಅದರಂತೆ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಸ್ಲಂ ಜನರಿಗೆ ಹಕ್ಕುಪತ್ರ ವಿತರಣೆ ನೋಂದಣಿ ಮತ್ತು ಇ.ಖಾತಾ ಪ್ರಕ್ರಿಯೆಯನ್ನು ಸರಳಗೊಳಿಸಿ ಖಾಸಗಿ ಸ್ಲಂಗಳ ಅಭಿವೃದ್ಧಿಗೂ ಮುಂದಾಗುವ ಜೊತೆಗೆ ಪ್ರಧಾನ್ ಮಂತ್ರಿ ಅವಾಸ್ ಯೋಜನೆ ಅಡಿಯಲ್ಲಿ ನಿರ್ಮಿಸುತ್ತಿರುವ ವಸತಿ ಯೋಜನೆಯನ್ನು ಪೂರ್ಣಗೊಳಲು ಹಣ ಮಂಜೂರಾತಿ ಸೇರಿದಂತೆ ಸ್ಲಂ ಜನರ ಪರವಾದ ಕಾನೂನು ಮತ್ತು ನೀತಿಗಳನ್ನು ನನ್ನ ಅವಧಿಯಲ್ಲಿ ಮುಖ್ಯಮಂತ್ರಿ ಮತ್ತು ವಸತಿ ಸಚಿವರ ಬೆಂಬಲದೊಂದಿಗೆ ಮಾಡುವ ಭರವಸೆ ನೀಡಿದರು. ನಾನೂ ದಲಿತನಾಗಿ ಸ್ಲಂ ಜನರ ಕಷ್ಟದ ಅನುಭವವನ್ನು ಹೊಂದಿದ್ದು ಈ ಕಷ್ಟಗಳನ್ನು ಪರಿಹರಿಸಲು ಪ್ರಮಾಣಿಕ ಪ್ರಯತ್ನ ಮಾಡಿ, ಮುಂದಿನ ದಿನಗಳಲ್ಲಿ ಸ್ಲಂ ಜನರ ರಾಜ್ಯಮಟ್ಟದ ಸಮಾವೇಶವನ್ನು ಮಾಡುವ ಮೂಲಕ ಸರ್ಕಾರಕ್ಕೆ ಮನವರಿಕೆ ಮಾಡಿಕೊಡಲಾಗುವುದು. ನಾನೂ ಸಹ ಸ್ಲಂ ಜನಾಂದೋಲನ ಕರ್ನಾಟಕ ಸಂಘಟನೆಯ ಹಕ್ಕೋತ್ತಾಯಗಳಿಗೆ ಪೂರಕವಾಗಿದ್ದೇನೆ ಎಂದರು.
ಸ್ಲಂ ನಿವಾಸಿಗಳಿಗೆ ಹಕ್ಕುಪತ್ರ ನೋಂದಣಿ, ಇ.ಖಾತಾ ಸರಳೀಕರಣಕ್ಕೆ ಮುದ್ರಾಂಕ ಇಲಾಖೆ ಒಪ್ಪಿಗೆ: ಸ್ಲಂ ಬೋರ್ಡ್ ಆಯುಕ್ತ
ವಸತಿ ಕಾರ್ಯದರ್ಶಿಗಳ ಪರವಾಗಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಆಯುಕ್ತರಾದ ಡಾ.ಅಶೋಕ್ ಡಿ.ಆರ್ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸಿ ಮಾತನಾಡಿದರು. ಈಗಾಗಲೇ ಸ್ಲಂ ನಿವಾಸಿಗಳಿಗೆ ಹಕ್ಕುಪತ್ರ ನೋಂದಣಿಗೆ ಇ-ಖಾತಾ ತೊಡಕಾಗಿರುವ ಬಗ್ಗೆ ಮುದ್ರಾಂಕ ಇಲಾಖೆಯ ಎಐಜಿ ಅವರೊಂದಿಗೆ ಸಭೆ ನಡೆಸಿ 94ಸಿಸಿ ಮಾದರಿಯಲ್ಲಿ ನೋಂದಣಿ ಮಾಡಿಕೊಡಲು ಒಪ್ಪಿಸಲಾಗಿದೆ. ಹಾಗೆ ಇದುವರೆಗೂ 1.86 ಲಕ್ಷ ಕುಟುಂಬಗಳಿಗೆ ಇದುವರೆಗೂ ಹಕ್ಕುಪತ್ರ ನೀಡಲಾಗಿದೆ ತೊರಿತವಾಗಿ ಪ್ರಧಾನ್ ಮಂತ್ರಿ ಅವಾಸ್ ಯೋಜನೆಯಲ್ಲಿ ಬಾಕಿ ಇರುವ ಮನೆಗಳನ್ನು ಪೂರ್ಣಗೊಳಿಸಿ ಹಸ್ತಾಂತರಿಸಲಾಗುವುದು ಖಾಸಗಿ ಮಾಲೀಕತ್ವದ ಘೋಷಣೆಗೆ ಯಾವುದೇ ರೀತಿಯ ತೊಡಕಿಲ್ಲ, ಈಗಾಗಲೇ ಹಣಕಾಸು ಇಲಾಖೆ ಸ್ಲಂಗಳ ಘೋಷಣೆ ಆಡಳಿತಾತ್ಮಕ ವಿಚಾರವೆಂದು ಸ್ಪಷ್ಟೀಕರಣ ನೀಡಿರುವುದರಿಂದ ಉತ್ತರ ಕರ್ನಾಟಕ ಭಾಗದ ಸ್ಲಂ ನಿವಾಸಿಗಳಿಗೆ ವಸತಿ ಇಲಾಖೆ ಸುತ್ತೋಲೆ ತೊಡಕಾಗಿದ್ದು, ಎಲ್ಲಾ ವಿಭಾಗಗಳಿಂದ ಬಾಕಿ ಇರುವ ಸರ್ಕಾರಿ ಮತ್ತು ಖಾಸಗಿ ಕೊಳಚೆ ಪ್ರದೇಶಗಳ ಘೋಷಣೆಗೆ ಕ್ರಮವಹಿಸಲು ಸ್ಪಷ್ಟ ಸೂಚನೆ ನೀಡಲಾಗುವುದೆಂದರು.
ನುಡಿದಂತೆ ಸಿದ್ದರಾಮಯ್ಯ ಸರ್ಕಾರ ನಡೆದುಕೊಳ್ಳಬೇಕು: ಎ.ನರಸಿಂಹಮೂರ್ತಿ
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಸ್ಲಂ ಜನಾಂದೋಲನ ಕರ್ನಾಟಕದ ರಾಜ್ಯ ಸಂಚಾಲಕರಾದ ಎ.ನರಸಿಂಹಮೂರ್ತಿ 2023ರ ವಿಧಾನ ಸಭೆ ಚುನಾವಣೆಯಲ್ಲಿ ಸ್ಲಂ ಜನರಿಗೆ ನೀಡಿರುವ ಪ್ರಾಳಿಕೆಯ ಭರವಸೆಯಂತೆ ಸಿದ್ದರಾಮಯ್ಯ ಸರ್ಕಾರ ನಡೆಯಬೇಕು. ನಗರಗಳಲ್ಲಿ ಅಸಮಾನತೆ ಮತ್ತು ಅಭಿವೃದ್ಧಿ ತಾರತಮ್ಯದಿಂದ ಕೊಳಚೆ ಪ್ರದೇಶದಲ್ಲಿರುವ ವಂಚಿತ ಸಮುದಾಯಗಳಿಗೆ ಸಾಮಾಜಿಕ ನ್ಯಾಯವನ್ನು ಖಾತ್ರಿ ಮಾಡುವುದು ಸರ್ಕಾರದ ಜವಾಬ್ದಾರಿಯಾಗಿದೆ ಕಾಂಗ್ರೆಸ್ ಪಕ್ಷದ ಭರವಸೆಯ ಮೇಲೆ ಸ್ಲಂ ನಿವಾಸಿಗಳು ಈ ಸರ್ಕಾರವನ್ನು ಆಯ್ಕೆ ಮಾಡಿದ್ದು ವಸತಿ ಹಕ್ಕು ಕಾಯಿದೆ, ನಗರ ಉದ್ಯೋಗ ಖಾತ್ರಿ ಕಾಯಿದೆ, ಹೊಸ ಸ್ಲಂ ಕಾಯಿದೆ ಸೇರಿದಂತೆ ನಿವೇಶನ ರಹಿತರಿಗೆ ವಿಶೇಷ ವರ್ಗಗಳಿಗೆ ವಸತಿ ಕಲ್ಪಿಸಲು ಲ್ಯಾಂಡ್ ಬ್ಯಾಂಕ್ ನೀತಿ ಜಾರಿಯನ್ನು ತುರ್ತಾಗಿ ಮಾಡಬೇಕು. ಸ್ಲಂ ಜನರಿಗೆ ಸ್ಪಂಧಿಸುವ ಮತ್ತು ಸರ್ಕಾರಕ್ಕೆ ಹೆಸರು ತರುವ ದಕ್ಷತೆಯ ವಸತಿ ಸಚಿವರನ್ನು ಹಾಗೂ ವಸತಿ ಕಾರ್ಯದರ್ಶಿಯನ್ನು ಸರ್ಕಾರ ನೇಮಕ ಮಾಡಬೇಕೆಂದು ಆಗ್ರಹಿಸಿ ಖಾಸಗಿ ಕೊಳಚೆ ಪ್ರದೇಶಗಳ ಘೋಷಣೆ ತಡೆಯಿಂದ ಉತ್ತರ ಕರ್ನಾಟಕದ ಕಲ್ಯಾಣ/ಕಿತ್ತೂರು ವಲಯಗಳ 150 ಸ್ಲಂಗಳ ಕಳೆದ 2 ವರ್ಷಗಳಿಂದ ಘೋಷಣೆಯಾಗದೆ ಅತಂತ್ರ ಸ್ಥಿತಿಯಲ್ಲಿವೆ, ಈ ಬಗ್ಗೆ ಕೊಳಚೆ ಪ್ರದೇಶಗಳ ಸಮಗ್ರ ಅಭಿವೃದ್ಧಿ ಕುರಿತಂತೆ ಚಳಿಗಾಲದ ಅಧಿವೇಶದಲ್ಲಿ ಚರ್ಚೆಯಾಗಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯ ನೇತೃತ್ವವನ್ನು ಸ್ಲಂ ಜನಾಂದೋಲನ ಕರ್ನಾಟಕ ರಾಜ್ಯ ಸಮಿತಿ ಪದಾಧಿಕಾರಿಗಳಾದ ಗದಗನ ಇಮ್ತಿಯಾಜ್ ಆರ್ ಮಾನ್ವಿ, ಹುಬ್ಬಳ್ಳಿಯ ಶೋಭ ಕಮತಾರ್, ಬೆಳಗಾವಿಯ ಫಕೀರಪ್ಪ ತಳವಾರ್, ಬೆಂಗಳೂರಿನ ಚಂದ್ರಮ್ಮ, ರಾಯಚೂರಿನ ಜನಾರ್ಧನ್ ಹಳ್ಳಿಬೆಂಚಿ, ದಾವಣಗೆರೆಯ ರೇಣುಕ ಎಲ್ಲಮ್ಮ, ತುಮಕೂರಿನ ಅರುಣ್, ಹೊಸಪೇಟೆಯ ವೆಂಕಮ್ಮ, ಬಳ್ಳಾರಿಯ ಶೇಖರ್ ಬಾಬು, ಬಿಜಾಪುರದ ಅಕ್ರಮ್ ಮಶಾಲ್ಕರ್, ಕಲ್ಬುರ್ಗಿಯ ರೇಣುಕ ಸರಡಗಿ, ಯಾದಗಿರಿಯ ಹಣಮಂತ ಸಹಪೂರ್ಕರ್, ಚಿತ್ರದುರ್ಗದ ಸುಧಾ, ಧಾರವಾಡದ ರಸೂಲ್ ನದಾಫ್ ವಹಿಸಿದ್ದರು. ಸಾವಿತ್ರಿ ಬಾಯಿಪುಲೆ ಮಹಿಳಾ ಸಂಘಟನೆಯ ಮಂಜೂಬಾಯಿ, ದಮನಿತ ಸಾಧನ ಮಹಿಳಾ ಸಂಘದ ಅನ್ನಪೂರ್ಣ ಹಾಗೂ ಸ್ಲಂ ಜನಾಂದೋಲನ ಕರ್ನಾಟಕದ ಸಾವಿರಾರು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx