ಮಂಗಳೂರು: ಜೀವನದಲ್ಲಿ ಎದುರಾದ ಅತಿದೊಡ್ಡ ದುರಂತವನ್ನೇ ಮೆಟ್ಟಿ ನಿಂತು, ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಮೂಡುಬಿದಿರೆ ಆಳ್ವಾಸ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ದಿಶಾ 600ಕ್ಕೆ 600 ಅಂಕಗಳನ್ನು ಪಡೆಯುವ ಮೂಲಕ ರಾಜ್ಯಕ್ಕೆ ಟಾಪರ್ ಆಗಿ ಹೊರಹೊಮ್ಮಿದ್ದಾರೆ.
ವಾಣಿಜ್ಯ ವಿಭಾಗದ ವಿದ್ಯಾರ್ಥಿನಿಯಾಗಿರುವ ದಿಶಾ ಅವರಿಗೆ ಪರೀಕ್ಷಾ ಸಮಯದಲ್ಲೇ ವಿಧಿಯ ಆಟ ಕ್ರೂರವಾಗಿತ್ತು. ಮೂರು ಪರೀಕ್ಷೆಗಳು ಮುಗಿದ ಬೆನ್ನಲ್ಲೇ ಅವರ ತಾಯಿ ಆಕಸ್ಮಿಕವಾಗಿ ಬಿದ್ದು ತಲೆಗೆ ಪೆಟ್ಟಾಗಿ ಮೃತಪಟ್ಟಿದ್ದರು. ಇಡೀ ಕುಟುಂಬ ಶೋಕಸಾಗರದಲ್ಲಿ ಮುಳುಗಿದ್ದಾಗ, ದಿಶಾ ಅವರ ಮುಂದೆ ಕಣ್ಣೀರು ಮತ್ತು ಭವಿಷ್ಯದ ಪರೀಕ್ಷೆ ಎರಡೂ ಇತ್ತು.
ತಾಯಿಯ ಸಾವಿನ ದುಃಖ ಕಣ್ಣ ಮುಂದೆ ಇದ್ದರೂ, ಧೃತಿಗೆಡದ ದಿಶಾ ಅವರು ತಾಯಿಯ ಆಸೆಯನ್ನು ಪೂರೈಸಲೇಬೇಕೆಂದು ಪಣ ತೊಟ್ಟರು. “ನಾನು ನನ್ನ ಅಮ್ಮನನ್ನು ಕಳೆದುಕೊಂಡೆ, ಆದರೆ ನನ್ನ ಗುರಿಯನ್ನು ಕಳೆದುಕೊಳ್ಳಬಾರದು” ಎಂಬ ದೃಢ ನಿಶ್ಚಯದೊಂದಿಗೆ ಉಳಿದ ಮೂರು ಪರೀಕ್ಷೆಗಳನ್ನು ಬರೆದರು. ಅವರ ಈ ಅದ್ಭುತ ಸಾಧನೆಗೆ ಇಂದು ಇಡೀ ರಾಜ್ಯವೇ ಮೆಚ್ಚುಗೆ ವ್ಯಕ್ತಪಡಿಸುತ್ತಿದೆ.
“ನನ್ನ ತಾಯಿ ಇಂದು ಬದುಕಿದ್ದಿದ್ದರೆ ತುಂಬಾ ಸಂತೋಷಪಡುತ್ತಿದ್ದರು. ಅವರ ಆಸೆಯೇ ನಾನು ಚೆನ್ನಾಗಿ ಓದಬೇಕು ಎನ್ನುವುದಾಗಿತ್ತು. ಅಮ್ಮನನ್ನು ಮನಸ್ಸಿನಲ್ಲಿಟ್ಟುಕೊಂಡು ಕಷ್ಟಪಟ್ಟು ಓದಿದ್ದಕ್ಕೆ ಈ ಫಲಿತಾಂಶ ಸಿಕ್ಕಿದೆ. ಈ ಸಾಧನೆಯಲ್ಲಿ ನನ್ನ ಕಾಲೇಜಿನ ಉಪನ್ಯಾಸಕರ ಬೆಂಬಲವೂ ದೊಡ್ಡದಿದೆ,” ಎಂದು ದಿಶಾ ಭಾವುಕರಾಗಿ ನುಡಿದಿದ್ದಾರೆ.
ದುಃಖವನ್ನು ಮೆಟ್ಟಿ ನಿಂತು ಸಾಧನೆಯ ಶಿಖರಕ್ಕೇರಿದ ಈ ಹೆಣ್ಣುಮಗಳ ಸಾಧನೆ ಎಲ್ಲರಿಗೂ ಸ್ಫೂರ್ತಿಯಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


