ತುಮಕೂರು: ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ಬಾಕಿಯಿದ್ದ ಪ್ರಕರಣಗಳ ಪೈಕಿ 9,942 ಪ್ರಕರಣ ಹಾಗೂ 95,006 ವ್ಯಾಜ್ಯಪೂರ್ವ ಪ್ರಕರಣಗಳು ಸೇರಿದಂತೆ 1,04,948 ಪ್ರಕರಣಗಳನ್ನು ವಿಲೇವಾರಿ ಮಾಡಲಾಗಿದೆ ಎಂದು ಗೌರವಾನ್ವಿತ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಬಿ.ಜಯಂತ್ ಕುಮಾರ್ ಹೇಳಿದರು.
ರಾಷ್ಟ್ರೀಯ ಜನತಾ ನ್ಯಾಯಾಲಯ ಕಾರ್ಯಕ್ರಮ ಕುರಿತು ನಗರದ ಜಿಲ್ಲಾ ನ್ಯಾಯಾಲಯ ಸಂಕೀರ್ಣದಲ್ಲಿ ಗುರುವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾಹಿತಿ ಹಂಚಿಕೊಂಡು ಮಾತನಾಡಿದ ಅವರು, ಸಮಾಜದ ದುರ್ಬಲ ವರ್ಗಗಳಿಗೆ ಉಚಿತ ಮತ್ತು ಸಕ್ಷಮ ಕಾನೂನು ಸೇವೆಗಳನ್ನು ಒದಗಿಸುವ ಸಲುವಾಗಿ ಮಾರ್ಚ್ 8ರಂದು ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ರಾಷ್ಟ್ರೀಯ ಜನತಾ ನ್ಯಾಯಾಲಯ(ಲೋಕ್ ಅದಾಲತ್)ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಜನರು ಈ ಅದಾಲತ್ತಿನ ಸದುಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ ನಡೆಸಲಾಗುವ ಲೋಕ್ ಆದಾಲತ್ ಅಥವಾ ಜನತಾ ನ್ಯಾಯಾಲಯದಲ್ಲಿ ಜನರು ತಮ್ಮ ಪ್ರಕರಣಗಳನ್ನು ಕಡಿಮೆ ವೆಚ್ಚದಲ್ಲಿ ಶೀಘ್ರವಾಗಿ ಇತ್ಯರ್ಥ ಪಡಿಸಿಕೊಳ್ಳಬಹುದಾಗಿದೆ. ಜನ ಸಾಮಾನ್ಯರಿಗೆ ರಾಜಿ ಸಂಧಾನದ ಮೂಲಕ ವ್ಯಾಜ್ಯಗಳನ್ನು ಇತ್ಯರ್ಥಪಡಿಸಲು ಈ ಜನತಾ ನ್ಯಾಯಾಲಯವನ್ನು ಸ್ಥಾಪಿಸಲಾಗಿದೆ ಎಂದು ತಿಳಿಸಿದರು.
ಜನತಾ ನ್ಯಾಯಾಲಯದಲ್ಲಿ ಚೆಕ್ ಅಮಾನ್ಯ, ಬ್ಯಾಂಕ್ ವಸೂಲಾತಿ, ಕಾರ್ಮಿಕ ವಿವಾದ, ವಿದ್ಯುತ್ ಹಾಗೂ ನೀರಿನ ಶುಲ್ಕ ಪ್ರಕರಣ ಸೇರಿದಂತೆ ವ್ಯಾಜ್ಯಪೂರ್ವ ಪ್ರಕರಣಗಳು ಹಾಗೂ ರಾಜಿಯಾಗಬಲ್ಲ ಅಪರಾಧಿಕ ಪ್ರಕರಣ, ಬ್ಯಾಂಕ್ ವಸೂಲಾತಿ, ಕಾರ್ಮಿಕ ವಿವಾದ, ಭೂಸ್ವಾಧೀನ, ಸಾಲ ವಸೂಲಾತಿ ನ್ಯಾಯಾಧೀಕರಣ, ಮೋಟಾರು ಅಪಘಾತ ಪರಿಹಾರ ನ್ಯಾಯಾಧೀಕರಣ ಸೇರಿದಂತೆ ನ್ಯಾಯಾಲಯದಲ್ಲಿ ಬಾಕಿಯಿರುವ ಪ್ರಕರಣಗಳನ್ನು ಶೀಘ್ರವಾಗಿ ಇತ್ಯರ್ಥಪಡಿಸಲಾಗುವುದು ಎಂದು ತಿಳಿಸಿದರು.
ಜನತಾ ನ್ಯಾಯಾಲಯಗಳಲ್ಲಿ ಕಕ್ಷಿದಾರರು ನೇರವಾಗಿ ಅಥವಾ ವಕೀಲರ ಮೂಲಕ ಭಾಗವಹಿಸಬಹುದು. ನ್ಯಾಯಾಲಯದಲ್ಲಿ ದಾಖಲಾಗದೆ ಇರುವ(ವ್ಯಾಜ್ಯಪೂರ್ವ) ಪ್ರಕರಣಗಳನ್ನೂ ಸಹ ರಾಜಿ ಸಂಧಾನದ ಮೂಲಕ ಬಗೆಹರಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಉಭಯ ಪಕ್ಷಕಾರರು ರಾಜಿ ಮಾಡಿಕೊಳ್ಳಲು ಮಾರ್ಗದರ್ಶನ ನೀಡಲಾಗುವುದು. ಸಂಧಾನಕಾರರು ಸೂಚಿಸುವ ಪರಿಹಾರ ಕಕ್ಷಿದಾರರಿಗೆ ಒಪ್ಪಿಗೆಯಾದಲ್ಲಿ ಮಾತ್ರ ರಾಜಿ ಮಾಡಿಕೊಳ್ಳಬಹುದಾಗಿದೆ. ಕಡಿಮೆ ಖರ್ಚಿನಲ್ಲಿ ಶೀಘ್ರ ತೀರ್ಮಾನಕ್ಕಾಗಿ ಜನತಾ ನ್ಯಾಯಾಲಯವು ವಿಶೇಷ ಅವಕಾಶವಾಗಿದೆ ಎಂದರು.
ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನೂರುನ್ನೀಸ ಮಾತನಾಡಿ, ಲೋಕ್ ಅದಾಲತ್ ನಲ್ಲಿ ಆಗುವ ತೀರ್ಮಾನವೇ ಅಂತಿಮ. ಪ್ರಕರಣ ಇತ್ಯರ್ಥವಾದ ಬಳಿಕ ಮೇಲ್ಮನವಿಗೆ ಅವಕಾಶ ಇರುವುದಿಲ್ಲ. ಸಾರ್ವಜನಿಕರು ತಮ್ಮ ವ್ಯಾಜ್ಯಪೂರ್ವ ಹಾಗೂ ನ್ಯಾಯಾಲಯದಲ್ಲಿ ಬಾಕಿಯಿರುವ ಪ್ರಕರಣಗಳನ್ನು ಮಾರ್ಚ್ 8ರಂದು ನಡೆಯಲಿರುವ ರಾಷ್ಟ್ರೀಯ ಲೋಕ್ ಅದಾಲತ್ ನಲ್ಲಿ ಇತ್ಯರ್ಥಪಡಿಸಿಕೊಳ್ಳಬಹುದಾಗಿದೆ ಎಂದು ತಿಳಿಸಿದರು.
ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ ಜಿಲ್ಲಾ ನ್ಯಾಯಾಲಯ ಸಂಕೀರ್ಣಕ್ಕೆ ಕಕ್ಷಿದಾರರು, ವಕೀಲರು, ಎದುರು ಪಕ್ಷಕಾರರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಿರುವುದರಿಂದ ಪಾರ್ಕಿಂಗ್ ಸಮಸ್ಯೆ ಎದುರಾಗಿದೆ. ಜಿಲ್ಲಾ ನ್ಯಾಯಾಲಯದ ಹೊಸ ಕಟ್ಟಡ ನಿರ್ಮಾಣಕ್ಕೆ ಸುಮಾರು 25 ಎಕರೆ ಜಾಗದ ಅವಶ್ಯಕತೆಯಿದ್ದು, ಜಾಗ ಮಂಜೂರು ಮಾಡುವ ಬಗ್ಗೆ ಸರ್ಕಾರ ಗಮನಹರಿಸಬೇಕು ಎಂದು ಮನವಿ ಮಾಡಿದರು.
ಲೋಕ್ ಅದಾಲತ್‍ನಲ್ಲಿ ರಾಜಿ ಸಂಧಾನದ ಮೂಲಕ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಲಿಚ್ಛಿಸುವವರು ಹೆಚ್ಚಿನ ಮಾಹಿತಿಗಾಗಿ ಇ–ಮೇಲ್ ವಿಳಾಸ: dlsatumkur1@gmail.com ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯವರ ಕಛೇರಿ ದೂರವಾಣಿ ಸಂಖ್ಯೆ:0816-2255133 ಮತ್ತು ಮೊ.ಸಂ.9141193959ಯನ್ನು ಸಂಪರ್ಕಿಸಬಹುದು ಎಂದು ಅವರು ತಿಳಿಸಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4