ತುಮಕೂರು: ಬೆಳಧರ ಸರ್ಕಾರಿ ಶಾಲೆಗೆ ಕಾಂಪೌಂಡ್ ನಿರ್ಮಾಣಕ್ಕೆ ಹಣವಿಲ್ಲವೆಂದು ಕೈತೊಳೆದುಕೊಂಡಿರುವ ತುಮಕೂರು ಜಿಲ್ಲಾಡಳಿತಕ್ಕೆ ಸಾರ್ವಜನಿಕರಿಂದ ಭಿಕ್ಷೆ ಬೇಡಿ ಹಣ ಸಂಗ್ರಹಿಸಿ ಕೊಡುವ ಬಗ್ಗೆ ವಿವಿಧ ಸಂಘಟನೆಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ತುಮಕೂರು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದೆ.
ತುಮಕೂರು ಜಿಲ್ಲೆ ತುಮಕೂರು ತಾಲ್ಲೂಕು, ಬೆಳಧರ ಶಾಲೆಯು ಸ್ವತಂತ್ರ ಪೂರ್ವದಲ್ಲಿಯೇ ಪ್ರಾರಂಭವಾದ ಶಾಲೆಯಾಗಿದ್ದು, ಸುಮಾರು 10–15 ಹಳ್ಳಿಗಳ ಕೃಷಿಕರ, ಬಡ ಅಲ್ಪಸಂಖ್ಯಾತ ಮಕ್ಕಳು, ಪರಿಶಿಷ್ಟಜಾತಿ ಪಂಗಡದ ಅತೀ ಹೆಚ್ಚು ಮಕ್ಕಳು ವ್ಯಾಸಂಗ ಮಾಡುತ್ತಿರುವ ಶಾಲೆಯಾಗಿದ್ದು ಕೋರಾ ಹೋಬಳಿಯಲ್ಲಿಯೇ ಅತಿಹೆಚ್ಚು ಮಕ್ಕಳನ್ನು ಹೊಂದಿರುವ ಕನ್ನಡ ಶಾಲೆಯೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಈ ಹಿಂದೆ ಸ್ವತಂತ್ರ ಪೂರ್ವದಲ್ಲಿ ಪ್ರಾರಂಭವಾದ ಶಾಲೆಗೆ ಆಟದ ಮೈದಾನ ಇಲ್ಲವೆಂದು ಮನಗಂಡ ಅಂದಿನ ಸರ್ಕಾರ ಶಾಲೆಗೆ ಲಗತ್ತಾಗಿದ್ದ 2 ಎಕರೆ ಜಮೀನನ್ನು ಸ್ವಾಧೀನಪಡಿಸಿಕೊಂಡು ಶಾಲಾ ಆಟದ ಮೈದಾನಕ್ಕೆಂದು 1959ರಲ್ಲಿಯೇ ಗ್ರಾಮಠಾಣಾಗೆ ಲಗತ್ತು ಮಾಡಿ ಶಾಲೆಯ ಸ್ವಾಧೀನಕ್ಕೆ ಅಂದರೆ ಮಕ್ಕಳ ಶೈಕ್ಷಣಿಕೆ ಚಟುವಟಿಕೆಗಳು ಮತ್ತು ಮಕ್ಕಳ ಪಠ್ಯೇತರ ಚಟುವಟಿಕೆಗಳಿಗೆ ಅನುಕೂಲ ಆಗುವಂತೆ ಶಾಲಾ ಸುಪರ್ಧಿಗೆ ಕೊಟ್ಟಿತ್ತು.
ಆದರೆ, ಇಲಾಖೆಯ ಅಧಿಕಾರಿಗಳ ಬೇಜವಾಬ್ದಾರಿತನದಿಂದ ಅಂದಿನಿಂದ ಕಳೆದ ಸಾಲಿನವರೆವಿಗೂ ಶಾಲಾ ಆಸ್ತಿ ಶಾಲೆಯ ಹೆಸರಿಗೆ ಖಾತೆಯಾಗದೇ ಇತ್ತು. ನಂತರ ಇದೇ ಅವಕಾಶಕ್ಕಾಗಿ ಕಾಯುತ್ತಿದ್ದ ಕೆಲ ಖಾಸಗಿ ವ್ಯಕ್ತಿಗಳು ಸದರಿ ಶಾಲೆಯ ಆಟದ ಮೈದಾನವನ್ನು ಕಬಳಿಸುವ ಉದ್ದೇಶದಿಂದ ಸದರಿ ಆಟದ ಮೈದಾನಕ್ಕೆ ಲಗತ್ತಾಗಿರುವಂತೆ ಕಾನೂನಿಗೆ ವಿರುದ್ಧವಾಗಿ ಒಂದು ಕಲ್ಯಾಣ ಮಂಟಪವನ್ನು ನಿರ್ಮಿಸಿ ಸದರಿ 2 ಎಕರೆ ಶಾಲೆಯ ಆಟದ ಮೈದಾನವನ್ನೇ ಕಲ್ಯಾಣ ಮಂಟಪದ ಪಾರ್ಕಿಂಗ್ ಜಾಗವಾಗಿ ಮಾಡಿಕೊಂಡು ಶಾಲೆಯ ಆಟದ ಮೈದಾನದಲ್ಲಿ ಮಕ್ಕಳಿಗೆ ಆಟವಾಡಲು ಸಹ ಬಿಡದೆ ತೊಂದರೆ ಕೊಡುತ್ತಿರುತ್ತಾರೆ. ಹಾಗು ಇದರ ಪರಿಣಾಮ ಅಲ್ಲಿನ ಪಾರ್ಕಿಂಗ್ ನಲ್ಲಿನ ವಾಹನಗಳ ಅಡ್ಡಾದಿಡ್ಡಿ ಚಾಲನೆಯಿಂದ ಅನೇಕ ಬಾರಿ ಅಪಘಾತಕ್ಕೊಳಗಾಗುವುದರಿಂದ ಶಾಲಾ ಮಕ್ಕಳು ತಪ್ಪಿಸಿಕೊಂಡಿರುತ್ತಾರೆ. ಸದರಿ ಕಲ್ಯಾಣ ಮಂಟಪಕ್ಕೆ ಯಾವುದೇ ಪರವಾನಗಿ ಇಲ್ಲದೇ ಇದ್ದರೂ ಸಹ ಅಧಿಕಾರಿಗಳು ಸದರಿ ಕಲ್ಯಾಣ ಮಂಟಪ ನಡೆಸಲು ಕಲ್ಯಾಣ ಮಂಟಪದವರಿಗೆ ಬೆಂಬಲ ಕೊಡುತ್ತಿರುತ್ತಾರೆ.
ಇತ್ತೀಚೆಗೆ ಕಳೆದ ಸಾಲಿನಲ್ಲಿ ಸದರಿ ಶಾಲೆಗೆ ನೂತವಾಗಿ ಎಸ್.ಡಿ.ಎಂ.ಸಿ ಸದಸ್ಯರಾಗಿ ರಫೀಕ್ ಪಾಷ ರವರು ಆಯ್ಕೆಯಾದ ನಂತರ ಮಕ್ಕಳ ತೊಂದರೆ ಮನಗಂಡು ಶಿಕ್ಷಣ ಇಲಾಖೆಗೆ, ಬೆಳಧರ ಪಂಚಾಯಿತಿಗೆ ಅರ್ಜಿಕೊಟ್ಟು ಮಕ್ಕಳಿಗಾಗುತ್ತಿರುವ ತೊಂದರೆಯನ್ನು ತಪ್ಪಿಸಬೇಕೆಂದು ಮನವಿ ಮಾಡಿಕೊಂಡಿದ್ದರು. ಆದರೆ ಸದರಿ ಆಸ್ತಿ ಅವರದ್ದೇ ಎಂದು ಬೆಳಧರ ಗ್ರಾಮಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾರಿಕೆ ಉತ್ತರ ನೀಡಿದ್ದು, ಇದರಿಂದ ಬೇಸರಗೊಂಡ ಎಸ್.ಡಿ.ಎಂ.ಸಿ. ಅಧ್ಯಕ್ಷರು ಶಾಲಾ ಮಕ್ಕಳಿಗೆ ನ್ಯಾಯ ಒದಗಿಸಿಕೊಡಬೇಕೆಂದು ಸದರಿ ಸ್ಥಳದ ದಾಖಲೆಗಳನ್ನು ಕಂದಾಯ ಇಲಾಖೆಯಿಂದ ಸ್ವಂತ ಹಣದಲ್ಲೆ ತೆಗೆಸಿದಾಗ ಸದರಿ ಆಟದ ಮೈದಾನ ಶಾಲಾ ಮಕ್ಕಳ ಆಟದ ಮೈದಾನಕ್ಕೆಂದು ಸರ್ಕಾರವೇ ಸ್ವಾಧೀನ ಪಡಿಸಿಕೊಂಡು ಶಾಲೆಗೆ ಕೊಟ್ಟ ಆಸ್ತಿ ಎಂದು ಅವರ ಗಮನಕ್ಕೆ ಬಂದಿರುತ್ತದೆ.
ನಂತರ ಶಾಲೆ ಹೆಸರಿಗೆ ಖಾತೆ ಮಾಡಿಕೊಡಲು ಗ್ರಾಮಪಂಚಾಯತ್ ಬೆಳಧರ ಹಾಗೂ ಅಂದಿನ ಕ್ಷೇತ್ರ ಶಿಕ್ಷಣಾದಿಕಾರಿಗಳ ಮೇಲೆ ಒತ್ತಡ ಹೇರಿದರೂ ಸಹ ಯಾರೂ ತಲೆಕೆಡಿಸಿಕೊಳ್ಳದೇ ಇದ್ದುದರ ಪರಿಣಾಮ ಎಸ್.ಡಿ.ಎಂ.ಸಿ ಅಧ್ಯಕ್ಷರು ಕಾಳಜಿ ಪೌಂಡೇಷನ್ (ರಿ)., ಇವರ ಬೆಂಬಲ ಪಡೆದು ಶಾಲೆ ಆಸ್ತಿಯನ್ನು ಸದರಿ ಫೌಂಡೇಷನ್ ನ ಕಾನೂನು ಸಲಹೆಗಾರರ ಮೂಲಕ ಜಿಲ್ಲಾಧಿಕಾರಿಗಳಿಗೆ ಶಾಲೆ ಆಸ್ತಿಯನ್ನು ಖಾತೆ ಮಾಡಿಕೊಡಲು ಮನವರಿಕೆ ಮಾಡಿಕೊಟ್ಟಿದುದರ ಪರಿಣಾಮ 2023ರಲ್ಲಿ ಶಾಲೆ ಹೆಸರಿಗೆ ಸದರಿ ಆಟದ ಮೈದಾನದ ಖಾತೆ ದಾಖಲಾಗಿರುತ್ತದೆ.
ಶಾಲೆ ಆಟದ ಮೈದಾನ ಶಾಲೆ ಹೆಸರಿಗೆ ಖಾತೆಯಾದ ನಂತರ ಸ್ಥಳೀಯ ಶಾಸಕರ ನಿಧಿಯಿಂದ 5 ಲಕ್ಷ ರೂಗಳನ್ನು ಶಾಲೆಗೆ ಕಾಂಪೌಂಡ್ ನಿರ್ಮಿಸಲು ಬಿಡುಗಡೆ ಮಾಡಿದ್ದರು, ನಂತರ ಕಂದಾಯ ಇಲಾಖೆಯ ಅಧಿಕಾರಿಗಳು ಸಹ ಸುಮಾರು 5-6 ಬಾರಿ ತಹಸೀಲ್ದಾರ್ ತುಮಕೂರು ರವರ ಸಮಕ್ಷಮ ಸರ್ವೆ ಮಾಡಿಸಿ ನಂತರ ಶಾಲೆಗೆ ಹದ್ದುಬಸ್ತು ಮಾಡಿ ಕಾಂಪೌಂಡ್ ಕಾಮಗಾರಿ ಮಾಡಲು ಅನುವು ಮಾಡಿಕೊಟ್ಟಿದ್ದರು, ಆದರೆ ಅಂದಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಬೇಜವಾಬ್ದಾರಿತನದಿಂದ ಕಾಂಪೌಂಡ್ ಕಾಮಗಾರಿ ನೆನೆಗುದಿಗೆ ಬಿದ್ದು ಮುಂದೆ ಸಾಗಿತ್ತು ನಂತರ ಕಾಳಜಿ ಪೌಂಡೇಷನ್, ನೈಜಹೋರಾಟಗಾರರ ವೇದಿಕೆ ಬೆಂಗಳೂರು, ರಣಧೀರರ ವೇದಿಕೆ, ಭೀಮ್ ಆರ್ಮಿ, ಕರುನಾಡು ಸಂರಕ್ಷಣಾ ವೇದಿಕೆ ಹಾಗೂ ಇನ್ನಿತರ ಸಂಘಟನೆಗಳು ಮೌನ ಮೆರವಣಿಗೆ ಮೂಲಕ ಜಿಲ್ಲಾ ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿಗಳಿಗೆ ಮನವಿಯನ್ನು ಸಹ ಸಲ್ಲಿಸಿದ್ದರು,
ನಂತರ ಕಾಂಫೌಂಡ್ ಕಾಮಗಾರಿ ಪ್ರಾರಂಭ ಮಾಡಿದ್ದರು ಆದರೆ ಅಂದು ಸಂಜೆಯೇ ಖಾಸಗಿ ವ್ಯಕ್ತಿಗಳು ಶಾಲೆಯ ಕಾಂಪೌಂಡ್ ಕಾಮಗಾರಿ ಪ್ರಾರಂಭ ಮಾಡಿದ್ದ ಕಲ್ಲು ಮತ್ತು ಮುಳ್ಳುತಂತಿಗಳನ್ನು ಕಿತ್ತು ಹಾಕಿದ್ದರು ನಂತರ ಕ್ಷೇತ್ರ ಶಿಕ್ಷಣಾಧಿಕಾರಿಗಳು ದೂರನ್ನು ಸಹ ಕೊಟ್ಟಿದ್ದು ತನಿಖೆ ಮುಗಿದಿದ್ದು ಇದೀಗ ಕಲ್ಲು ಮತ್ತು ಮುಳ್ಳು ತಂತಿಗಳನ್ನು ಕಿತ್ತು ಹಾಕಿದ್ದವರ ವಿರುದ್ಧ ನ್ಯಾಯಾಲಯದಲ್ಲಿ ಕ್ರಿಮಿನಲ್ ವಿಚಾರಣೆ ನಡೆಯುತ್ತಿದೆ.
ನಂತರ, ಅಧಿಕಾರಿಗಳ ಬೇಜವಾಬ್ದಾರಿತನದಿಂದ ಕಾಂಪೌಂಡ್ ಕಾಮಗಾರಿ ನೆನೆಗುದಿಗೆ ಬಿದ್ದು ಶಾಸಕರ ಅನುದಾನ ವಾಪಸ್ ಸರ್ಕಾರಕ್ಕೆ ಹೋಗಿರುತ್ತದೆ. ನಂತರದ ದಿನಗಳಲ್ಲಿ ಕಲ್ಯಾಣ ಮಂಟಪದಲ್ಲಿ ವಾಹನಗಳ ಅಡಚಣೆ ನಡುವೆ, ಶಾಲೆ ಆಟದ ಮೈದಾನದಲ್ಲಿ ವೇಗವಾಗಿ ಓಡಾಡುವ ವಾಹನಗಳಿಂದ ತಪ್ಪಿಸಿಕೊಂಡು ಜೀವ ಭಯದಲ್ಲಿಯೇ ಸದರಿ ಶಾಲೆಯಲ್ಲಿ ಮಕ್ಕಳು ಅಭ್ಯಾಸ ಮಾಡುತ್ತಿದ್ದರು, ಕಳೆದ ವಾರ್ಷಿಕ ಪರೀಕ್ಷೆಯನ್ನು ಮಕ್ಕಳು ಕಲ್ಯಾಣ ಮಂಟಪದ ಮಂಗಳ ವಾದ್ಯದ ಸದ್ದು ಗದ್ದಲದೊಡನೆ ಪರೀಕ್ಷೆ ಬರೆಯುತ್ತಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದುದನ್ನು ಗಮನಿಸಿ ಹೆಚ್.ಎಂ.ವೆಂಕಟೇಶ್ ನೈಜಹೋರಾಟಗಾರರ ವೇದಿಕೆ ಬೆಂಗಳೂರು ಇವರು ಲೋಕಾಯುಕ್ತರಿಗೆ ದೂರನ್ನು ಕೊಟ್ಟಿದ್ದರು, ನಂತರ ಉಪಲೋಕಾಯುಕ್ತರು ತಹಸೀಲ್ದಾರ್, ತುಮಕೂರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಬೆಳಧರ, ಹಾಗೂ ಕೊರಾ ಪೊಲೀಸ್ ಉಪ ನಿರೀಕ್ಷಕರಿಗೆ ನೋಟೀಸ್ ಜಾರಿ ಮಾಡಿ ಕರೆಸಿಕೊಂಡು 2 ತಿಂಗಳೊಳಗಾಗಿ ಕಾಂಪೌಂಡ್ ಕಾಮಗಾರಿ ಮುಗಿಸಿ ಮಕ್ಕಳಿಗೆ ಉತ್ತಮ ಕಲಿಕೆಯ ವಾತಾವರಣವನ್ನು ನಿರ್ಮಾಣ ಮಾಡಿಕೊಡಬೇಕೆಂದು ಮೌಖಿಕ ಆದೇಶ ನೀಡಿದ್ದರು, ಮುಂದುವರೆದು ಕೊರ ಪೊಲೀಸ್ ಉಪನಿರೀಕ್ಷಕರಿಗೆ ಯಾವುದೇ ಖಾಸಗಿ ವಾಹನ ಶಾಲಾ ಆಟದ ಮೈದಾನಕ್ಕೆ ಪ್ರವೇಶ ಮಾಡದಂತೆ ಮಕ್ಕಳಿಗೆ ರಕ್ಷಣೆ ಒದಗಿಸಿಕೊಡಬೇಕೆಂದು ಆದೇಶ ಮಾಡಿದ್ದರು.
ಆದರೆ, ಜಿಲ್ಲಾಡಳಿತವಾಗಲಿ ತಾಲ್ಲೂಕು ಆಡಳಿತವಾಗಲೀ ಉಪಲೋಕಾಯುಕ್ತರ ಮೌಖಿಕ ಆದೇಶದಂತೆ ಕಾಂಪೌಂಡ್ ಕಾಮಗಾರಿ ಮಾಡದೇ ಜಿಲ್ಲಾಡಳಿತದಲ್ಲಿ ಹಣವಿಲ್ಲ ಎಂದು ಹಾಗೂ ಹಣ ಬಿಡುಗಡೆಗಾಗಿ ಆಯುಕ್ತರ ಕಛೇರಿಗೆ ಮನವಿ ಸಲ್ಲಿಸಿದ್ದೇವೆಂದು ಪತ್ರ ಬರೆದು ಕೈ ತೊಳೆದುಕೊಂಡಿದ್ದಾರೆ.
ಆದರೆ, ಇದರುವರೆವಿಗೂ ಮಕ್ಕಳ ಆಟದ ಮೈದಾನಕ್ಕೆ ಕಾಂಪೌಂಡ್ ಕಾಮಗಾರಿ ಮಾಡದೇ ಇರುವುದರಿಂದ ಎಸ್.ಡಿ.ಎಂಸಿ ಆಡಳಿತ ಮಂಡಳಿಯವರು ಸಭೆ ಕರೆದು ವಿವಿಧ ಸಂಘಟನೆಗಳಿಗೆ ಮನವಿ ಮಾಡಿ ಭಿಕ್ಷೆ ಬೇಡಿ ಸರ್ಕಾರಕ್ಕೆ ಹಣ ಸಂಗ್ರಹಿಸಿಕೊಟ್ಟು ಕಾಂಪೌಂಡ್ ಕಾಮಗಾರಿ ಮಾಡಿ ಮಕ್ಕಳಿಗೆ ಉತ್ತಮವಾದ ಕಲಿಕೆಯ ವಾತಾವರಣವನ್ನು ನಿರ್ಮಾಣ ಮಾಡಲು ಸಭೆಯಲ್ಲಿ ತೀರ್ಮಾನ ಮಾಡಿದ್ದು, ಅದರಂತೆ ವಿವಿಧ ಸಂಘಟನೆಗಳೊಡನೆ ಬೆಂಬಲ ಕೋರಿ ಈ ಮನವಿ ಪತ್ರವನ್ನು ತಮಗೆ ಸಲ್ಲಿಸುತ್ತಿದ್ದು, ಜನವರಿ 10 ನೇ ತಾರೀಖಿನೊಳಗೆ ಕಾಂಪೌಂಡ್ ಕಾಮಗಾರಿಗೆ ಅನುದಾನ ತಂದು ಚಾಲನೆ ನೀಡಬೇಕೆಂದು ಜಿಲ್ಲಾಡಳಿತವನ್ನು ಒತ್ತಾಯಿಸುತ್ತಿದ್ದು, ಒಂದು ವೇಳೆ ಸದರಿ ಬೆಳಧರ ಶಾಲೆಗೆ ಕಾಂಪೌಂಡ್ ಕಾಮಗಾರಿ ಪ್ರಾರಂಭಿಸದೇ ಇದ್ದಲ್ಲಿ ವಿವಿಧ ಸಂಘಟನೆಗಳ ಸಹಕಾರದೊಂದಿಗೆ ಎಸ್.ಡಿ.ಎಂ.ಸಿ ಆಡಳಿತ ಮಂಡಳಿ ನಗರದಾದ್ಯಂತ ಕಾಂಪೌಂಡ್ ಕಾಮಗಾರಿಗೆ ಭಿಕ್ಷೆ ಬೇಡುವ ಮೂಲಕ ಅಲ್ಲಿ ಬಂದಂತಹ ಹಣವನ್ನು ಜಿಲ್ಲಾಡಳಿತಕ್ಕೆ ನೀಡುವುದರ ಮೂಲಕ ಕಾಂಪೌಂಡ್ ಕಾಮಗಾರಿಗೆ ಹಣ ಒದಗಿಸಿಕೊಡಲು ತೀರ್ಮಾನಿಸಿದ್ದು, ನಾವು ನಿಗದಿ ಪಡಿಸಿದ ದಿನಾಂಕದಂದು ನಮಗೆ ಹಾಗೂ ನಮಗೆ ಬೆಂಬಲ ಕೊಟ್ಟ ಸಂಘಟನೆಗಳಿಗೆ ರಕ್ಷಣೆ ಒದಗಿಸಿಕೊಡುವ ಮೂಲಕ ಕಾಂಪೌಂಡ್ ಕಾಮಗಾರಿಗೆ ಭಿಕ್ಷಾಟನಾ ಕಾರ್ಯಕ್ರಮಕ್ಕೆ ಅನುವು ಮಾಡಿಕೊಡಬೇಕೆಂದು ಎಸ್.ಡಿ.ಎಂ.ಸಿ ಆಡಳಿತ ಮಂಡಳಿ, ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಬೆಳಧರ ವಿನಂತಿಸಿಕೊಂಡಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx