ತುಮಕೂರು: ಜಿಲ್ಲಾಡಳಿತದ ವತಿಯಿಂದ “ರನ್ನ ವೈಭವ ರಥಯಾತ್ರೆ”ಯನ್ನು ಗೌರವಾಯುತವಾಗಿ ಜಿಲ್ಲೆಗೆ ಬರಮಾಡಿಕೊಳ್ಳಲಾಯಿತು.
ಅಪರ ಜಿಲ್ಲಾಧಿಕಾರಿ ಡಾ.ಎನ್.ತಿಪ್ಪೇಸ್ವಾಮಿ, ಗೃಹ ಸಚಿವರ ವಿಶೇಷ ಕರ್ತವ್ಯಾಧಿಕಾರಿ ಡಾ.ನಾಗಣ್ಣ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸಿದ್ಧಲಿಂಗಪ್ಪ, ತಹಶೀಲ್ದಾರ್ ರಾಜೇಶ್ವರಿ ಸೇರಿದಂತ ಕನ್ನಡಾಭಿಮಾನಿಗಳು ಪುಷ್ಪಾರ್ಚನೆ ಮಾಡುವ ಮೂಲಕ ರನ್ನ ರಥಯಾತ್ರೆಯನ್ನು ಬರಮಾಡಿಕೊಂಡರು.
ನಂತರ ಮಾತನಾಡಿದ ಅಪರ ಜಿಲ್ಲಾಧಿಕಾರಿಗಳು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ವಿವಿಧ ಸಚಿವರು ಹಾಗೂ ಅಧಿಕಾರಿಗಳು ಬೆಂಗಳೂರಿನಲ್ಲಿ ‘ರನ್ನ ವೈಭವ ರಥ ಯಾತ್ರೆ’ಗೆ ಇಂದು ಚಾಲನೆ ನೀಡಿ ಬೀಳ್ಕೊಟ್ಟಿದ್ದು, ರಥಯಾತ್ರೆಯು ಮೊದಲ ಜಿಲ್ಲೆಯಾಗಿ ತುಮಕೂರಿಗೆ ಪ್ರವೇಶಿಸಿದೆ. ಈ ಯಾತ್ರೆಯು ಚಿತ್ರದುರ್ಗ, ಹೊಸಪೇಟೆ ಮೂಲಕ ಬಾಗಲಕೋಟೆ ಜಿಲ್ಲೆಯನ್ನು ತಲುಪಲಿದೆ ಎಂದು ತಿಳಿಸಿದರು.
ಬಾಗಲಕೋಟೆ ಜಿಲ್ಲೆಯ ಮುಧೋಳದಲ್ಲಿ ನಡೆಯಲಿರುವ ರನ್ನ ವೈಭವ–2025 ಪ್ರಯುಕ್ತ ಈ ರಥಯಾತ್ರಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಕಡು ಬಡತನದ ಬಳೆಗಾರ ವೃತ್ತಿಯ ಕುಟುಂಬದಿಂದ ಬಂದ ರನ್ನನು ಸಾಹಸ ಭೀಮ ವಿಜಯಂ(ಗದಾಯುದ್ಧ), ಪರಶುರಾಮಚರಿತ, ಚಕ್ರೇಶ್ವರ ತೀರ್ಥ ಎಂಬ ಮಹಾನ್ ಕಾವ್ಯಗಳನ್ನು ರಚಿಸಿ ಕನ್ನಡ ಸಾಹಿತ್ಯ ಲೋಕಕ್ಕೆ ತನ್ನದೇ ಆದ ಕೊಡುಗೆ ನೀಡಿದ್ದು, ಕವಿಚಕ್ರವರ್ತಿ, ಕವಿರತ್ನ, ಕವಿರಾಜಶೇಖರ, ಉಭಯಕವಿ ಎಂಬ ಬಿರುದು ನಾಮಾವಳಿಗಳಿಗೆ ಪಾತ್ರನಾಗಿದ್ದನು ಎಂದು ಬಣ್ಣನೆಯ ಮಾತುಗಳನ್ನಾಡಿದರು.
ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸುರೇಶ್ ಕುಮಾರ್, ಬಾಗಲಕೋಟೆ ಜಿಲ್ಲೆಯ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಬಿ.ವೈ. ಸುರಕೋಡ, ಬಾದಾಮಿ ವಲಯದ ಅರಣ್ಯಾಧಿಕಾರಿ ಎಸ್.ಬಿ. ಪೂಜಾರ, ಬೀಳಗಿ ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಸಿ.ಎಸ್. ಗಡದೇವರಮಠ ಸೇರಿದಂತೆ ಮತ್ತಿತರರು ಹಾಜರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4