ತುಮಕೂರು: ಜಿಲ್ಲೆಯಲ್ಲಿ 2024ರ ಏಪ್ರಿಲ್ ನಿಂದ ನವೆಂಬರ್ ವರೆಗೆ 16 ತಾಯಿ ಮರಣ ಹಾಗೂ 196 ಶಿಶು ಮರಣ ಸಂಭವಿಸಿದ್ದು, ತಾಯಿ ಮತ್ತು ಶಿಶು ಮರಣದ ಪ್ರಮಾಣವನ್ನು ಶೂನ್ಯಕ್ಕಿಳಿಸಲು ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಬೆಳಿಗ್ಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಅವರು, ಅಂಕಿ ಅಂಶಗಳ ಪ್ರಕಾರ ಜಿಲ್ಲೆಯಲ್ಲಿ 2024ರ ಏಪ್ರಿಲ್‌ನಿಂದ ನವೆಂಬರ್ ವರೆಗೆ 19,583 ಹೆರಿಗೆ ಪ್ರಕರಣಗಳು ವರದಿಯಾಗಿದ್ದು, ಈ ಪೈಕಿ 16 ತಾಯಿ ಮರಣ ಹಾಗೂ 196 ಶಿಶು ಮರಣ ಸಂಭವಿಸಿವೆ. ತಾಯಿ ಮತ್ತು ಶಿಶು ಮರಣಗಳ ಪ್ರಮಾಣವನ್ನು ಶೂನ್ಯಕ್ಕೆ ತರುವಲ್ಲಿ ಅಧಿಕಾರಿಗಳು ಶ್ರಮಿಸಬೇಕು ಎಂದರಲ್ಲದೆ, ಖಾಸಗಿ/ ಸರ್ಕಾರಿ ಆಸ್ಪತ್ರೆಗಳಲ್ಲಿ ಉದಾಸೀನ ಮಾಡದೆ ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡಬೇಕು. ತಾಯಿ ಮತ್ತು ಶಿಶು ಮರಣ ಸಂಭವಿಸಿದ ನಂತರ ಮರಣ ಪ್ರಮಾಣದ ಬಗ್ಗೆ ಚರ್ಚಿಸುವ ಬದಲು ಮರಣ ಪ್ರಮಾಣವನ್ನು ಶೂನ್ಯಕ್ಕೆ ತರುವಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಲಹೆಗಳನ್ನು ನೀಡಬೇಕೆಂದು ಅಧಿಕಾರಿಗಳಿಗೆ ನಿರ್ದೇಶಿಸಿದರು.
ಜಿಲ್ಲೆಯಲ್ಲಿ ಸಹಜ ಹೆರಿಗೆಗೆ ಆದ್ಯತೆ ನೀಡಬೇಕು. ಸಹಜ ಹೆರಿಗೆ ಸಾಧ್ಯವಾಗದಿದ್ದ ಸಂದರ್ಭದಲ್ಲಿ ಮಾತ್ರ ಸಿ–ಸೆಕ್ಷನ್(ಸಿಜೇರಿಯನ್) ಹೆರಿಗೆ ಮಾಡಬೇಕು. ಹೆರಿಗೆ ಮಾಡುವ ವೈದ್ಯರು ಹಾಗೂ ಹೆರಿಗೆಗೆ ಸಹಕರಿಸುವ ಶುಶ್ರೂಷಕರಿಗೆ ನೈಪುಣ್ಯತಾ ತರಬೇತಿ ನೀಡಬೇಕು ಎಂದು ಸೂಚನೆ ನೀಡಿದರು.
ವೈದ್ಯ ವೃತ್ತಿಯನ್ನೇ ಆಯ್ಕೆ ಮಾಡಿಕೊಂಡು ಸೇವೆ ಸಲ್ಲಿಸುತ್ತಿರುವ ವೈದ್ಯರು ಮಾನವೀಯತೆಯಿಂದ ರೋಗಿಗಳಿಗೆ ಚಿಕಿತ್ಸೆ ನೀಡಬೇಕು. ಇನ್ನಾವುದೇ ಕ್ಷೇತ್ರದಲ್ಲಿ ಇಂತಹ ಅಮೂಲ್ಯ ಸೇವೆಗೆ ಅವಕಾಶವಿರುವುದಿಲ್ಲ. ವೈದ್ಯರು ರೋಗಿಗಳ ಸೇವೆಗಾಗಿಯೇ ಸಮಯವನ್ನು ಮುಡುಪಾಗಿಡಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಚಂದ್ರಶೇಖರ್ ಮಾತನಾಡಿ, ಮರಣ ಹೊಂದಿದ 16 ತಾಯಂದಿರ ಪೈಕಿ ಮನೆಯಲ್ಲಿ 1, ಖಾಸಗಿ ಆಸ್ಪತ್ರೆಯಲ್ಲಿ 8, ಸರ್ಕಾರಿ ಆಸ್ಪತ್ರೆಯಲ್ಲಿ 3 ಹಾಗೂ ಮಾರ್ಗ ಮಧ್ಯೆ 4 ಪ್ರಕರಣಗಳು ವರದಿಯಾಗಿವೆ. ಅದೇ ರೀತಿ ಆಸ್ಪತ್ರೆಯಲ್ಲಿ 127 ಹಾಗೂ ಮನೆಯಲ್ಲಿ 69 ಸೇರಿ ಒಟ್ಟು 196 ಶಿಶುಗಳ ಮರಣ ಸಂಭವಿಸಿರುವ ಬಗ್ಗೆ ವರದಿಯಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಅಸ್ಗರ್ ಬೇಗ್ ಸಭೆಗೆ ಮಾಹಿತಿ ನೀಡುತ್ತಾ, ಕಳೆದ ಏಪ್ರಿಲ್ ಮಾಹೆಯಿಂದ ನವೆಂಬರ್‌ವರೆಗೆ ಹೃದಯ ಸಂಬಂಧಿತ, ಅಧಿಕ ರಕ್ತದೊತ್ತಡ, ಅಧಿಕ ರಕ್ತಸ್ರಾವ, ಉಸಿರಾಟದ ತೊಂದರೆ, ಅವಧಿ ಪೂರ್ವ ಹೆರಿಗೆ, ಡಯೇರಿಯಾ, ಆಸ್ಫಿಕ್ಸಿಯಾ, ಕಡಿಮೆ ತೂಕದ ಜನನ, ನಿಮೋನಿಯಾ, ಸೆಪ್ಸಿಸ್ ಸೇರಿದಂತೆ ಮತ್ತಿತರ ರೋಗಗಳಿಂದ ತಾಯಿ ಮತ್ತು ಶಿಶು ಮರಣಗಳು ಸಂಭವಿಸಿವೆ. ತಾಯಿ ಮತ್ತು ಶಿಶು ಮರಣ ಪ್ರಮಾಣವನ್ನು ತಗ್ಗಿಸುವಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಸಭೆಯಲ್ಲಿ ವಿವಿಧ ವೈದ್ಯಕೀಯ ಮಹಾವಿದ್ಯಾಲಯದ ವೈದ್ಯಾಧಿಕಾರಿಗಳು ಹಾಗೂ ಸ್ತ್ರೀರೋಗ ತಜ್ಞರು, ಆರ್ ಸಿಹೆಚ್ ಅಧಿಕಾರಿ ಡಾ.ಸಿ.ಆರ್. ಮೋಹನ್, ಕುಟುಂಬ ಕಲ್ಯಾಣಾಧಿಕಾರಿ ಡಾ.ರೇಖಾ, ಡಾ.ಮೋಹನ್ ದಾಸ್, ಡಾ.ಕೇಶವ್ ರಾಜ್, ವಿವಿಧ ತಾಲ್ಲೂಕುಗಳ ತಾಲ್ಲೂಕು ಆರೋಗ್ಯಾಧಿಕಾರಿಗಳು ಸೇರಿದಂತೆ ಮತ್ತಿತರರು ಹಾಜರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx