ತುರುವೇಕೆರೆ: ಮುಂಬರುವ 2028ರ ವಿಧಾನಸಭೆ ಚುನಾವಣೆಗೆ ನಾನೂ ಸಹ ತುರುವೇಕೆರೆ ಕ್ಷೇತ್ರದಿಂದ ಸ್ಪರ್ಧಾಕಾಂಕ್ಷಿಯಾಗಿದ್ದೇನೆ ಎಂದು ಜೆಡಿಎಸ್ ರಾಜ್ಯ ಯುವ ಘಟಕದ ಪ್ರಧಾನ ಕಾರ್ಯದರ್ಶಿ ದೊಡ್ಡಘಟ್ಟ ಚಂದ್ರೇಶ್ ಹೇಳಿಕೆ ನೀಡಿದ್ದು, ಈ ಮೂಲಕ ತುರುವೇಕೆರೆ ಕ್ಷೇತ್ರದಲ್ಲಿ ಹಾಲಿ ಶಾಸಕ ಎಂ.ಟಿ.ಕೃಷ್ಣಪ್ಪ ಅವರಿಗೆ ಪ್ರತಿಸ್ಪರ್ಧೆ ಸ್ವಪಕ್ಷದಲ್ಲೇ ಸೃಷ್ಟಿಯಾಗಿದೆ.
ತುರುವೇಕೆರೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಕರ್ತರನ್ನುದ್ದೇಶಿಸಿ ಮಾತನಾಡಿದ ಅವರು, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಹಾಗೂ ಕೇಂದ್ರ ರೈಲ್ವೆ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ ಅವರ ಕೃಪಾಶೀರ್ವಾದ ಹಾಗೂ ಅವರ ಮಾರ್ಗದರ್ಶನದೊಂದಿಗೆ ಈ ಕ್ಷೇತ್ರದಲ್ಲಿ ಜನಪರ ಸೇವಾಕಾರ್ಯಗಳನ್ನು ಮಾಡುವ ಮೂಲಕ ತಾಲ್ಲೂಕಿನ ಜನಮನ್ನಣೆಯನ್ನು ಗಳಿಸಿದ್ದೇನೆ. ಸುಮಾರು ದಶಕಗಳಿಂದ ತಾಲ್ಲೂಕಿನಲ್ಲಿ ಜನಸೇವೆ ಮಾಡುತ್ತಾ ಜೆಡಿಎಸ್ ಪಕ್ಷವನ್ನು ಸಂಘಟಿಸುತ್ತಾ ಬಂದಿದ್ದೇನೆ. ಇದೀಗ ತಾಲ್ಲೂಕಿನ ಜನರ ಅಪೇಕ್ಷೆಯಂತೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಲು ನಾನೂ ಸಹಾ ಆಕಾಂಕ್ಷಿಯಾಗಿದ್ದೇನೆ ಎಂದು ಅವರು ಘೋಷಿಸಿದ್ದಾರೆ.
ಎಂ.ಟಿ.ಕೃಷ್ಣಪ್ಪ ಹೇಳಿಕೆಗೆ ಬೇಸರ:
ನಮ್ಮ ಹಿರಿಯ ನಾಯಕರಾದ ಎಂ.ಟಿ.ಕೃಷ್ಣಪ್ಪನವರು ನಾಲ್ಕು ಬಾರಿ ಶಾಸಕರಾಗಿದ್ದು ನನ್ನ ಹೆಸರನ್ನು ಜೆಡಿಎಸ್ ಕಾರ್ಯಕರ್ತರ ಸಭೆಗಳಲ್ಲಿ ಪ್ರಸ್ತಾಪಿಸಿ ನಾನು ಜೆಡಿಎಸ್ ಕಾರ್ಯಕರ್ತರಲ್ಲಿ ಗೊಂದಲ ಮೂಡಿಸುತ್ತಿರುವುದಾಗಿ ಹೇಳಿಕೊಳ್ಳುತ್ತಿರುವುದು ನನ್ನ ಮನಸ್ಸಿಗೆ ಬೇಸರವಾಗುತ್ತಿದೆ. ನಾನು ನಿಷ್ಠಾವಂತನಾಗಿ ಜೆಡಿಎಸ್ ಪಕ್ಷದಲ್ಲಿ ಕೆಲಸ ಮಾಡುತ್ತಾ ನನ್ನ ಕೈಲಾದ ಸೇವೆಯನ್ನು ತಾಲ್ಲೂಕಿನ ಜನತೆಗೆ ನೀಡುತ್ತಿದ್ದೇನೆ. ಹೆಚ್.ಡಿ.ಕುಮಾರಣ್ಣನವರು ರಾಜ್ಯದ ಮುಖ್ಯಮಂತ್ರಿ ಆಗುವರೆಂಬ ಆಶಾಭಾವನೆಯಿಂದ ಕಳೆದ ಮೂರು ಚುನಾವಣೆಗಳಲ್ಲಿಯೂ ಎಂ.ಟಿ.ಕೃಷ್ಣಪ್ಪನವರ ಪರವಾಗಿ ಶಕ್ತಿಮೀರಿ ಪಕ್ಷ ಸಂಘಟನೆಯೊಂದಿಗೆ ಕೆಲಸ ಮಾಡಿದ್ದೇನೆ. ಆದರೂ ಶಾಸಕರು ನನ್ನ ಬಗ್ಗೆ ಇಲ್ಲಸಲ್ಲದ ಆರೋಪ ಮಾಡುತ್ತಿರುವುದು ಸರಿಯಲ್ಲ. ಅವರು ಹಲವು ಸಂದರ್ಭಗಳಲ್ಲಿ ನನ್ನ ಬಗ್ಗೆ ಕೆಲವು ಮಾತುಗಳನ್ನಾಡಿರುವುದು ನನಗೆ ನೋವುಂಟು ಮಾಡಿದೆ ಎಂದರು.
“ಅಭ್ಯರ್ಥಿ ಆಯ್ಕೆ ವಿಚಾರ ಪಕ್ಷದ ವರಿಷ್ಠರಿಗೆ ಬಿಟ್ಟಿದ್ದು. ಸಮೀಕ್ಷೆ ಆಧಾರದ ಮೇಲೆ ಟಿಕೆಟ್ ನಿರ್ಧಾರವಾಗುತ್ತದೆ. ವರಿಷ್ಠರ ಆದೇಶದಂತೆ ಜೆಡಿಎಸ್ ನಿಂದ ಯಾರನ್ನು ಆಯ್ಕೆ ಮಾಡಿದರೂ ನಾನು ನಮ್ಮ ಪಕ್ಷದ ಪರವಾಗಿ ಕೆಲಸ ಮಾಡಲು ಸಿದ್ದನಿದ್ದೇನೆ. ಮುಂಬರುವ ಚುನಾವಣೆಯಲ್ಲಿ ಜೆಡಿಎಸ್ ನಿಂದ ಎಂ.ಟಿ.ಕೃಷ್ಣಪ್ಪನವರಿಗೆ ಕುಮಾರಣ್ಣನವರು ಟಿಕೆಟ್ ನೀಡಿದಲ್ಲಿ ಖಂಡಿತ ಅವರ ಪರವಾಗಿ ನಿಸ್ಸಂಕೋಚವಾಗಿ ಕೆಲಸ ಮಾಡಲು ನಾನು ಸಿದ್ಧನಿದ್ದೇನೆ. ನನಗೂ ಸ್ಪರ್ಧೆಗೆ ಅವಕಾಶವಿದ್ದು ನಾನೂ ಸಹ ಜೆಡಿಎಸ್ ಪಕ್ಷದ ಅಭ್ಯರ್ಥಿ ಆಕಾಂಕ್ಷಿಯಾಗಿದ್ದೇನೆ”. ಮುಂದೆ ವರಿಷ್ಠರ ತೀರ್ಮಾನದಂತೆ ನಡೆಯುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡರು ಹಾಗೂ ವಿವಿಧ ಪದಾಧಿಕಾರಿಗಳಾದ ಡಾ.ನಂಜಪ್ಪ, ಶಿವಲಿಂಗೇಗೌಡ, ರವಿಕುಮಾರ್, ಶಿವಲಿಂಗೇಗೌಡ, ಜೈಗಿರಿಸುಂದರ್, ನಾಗರಾಜಪ್ಪ, ರವಿ, ರಾಜಣ್ಣ, ನವೀನ್, ರಾಜು, ಬೋರೇಗೌಡ, ಹರೀಶ್, ಮಹೇಶ್, ಯದುಕುಮಾರ್, ಪ್ರಕಾಶ್ ಸೇರಿದಂತೆ ಇತರರು ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


