ತುಮಕೂರು: ಅವಶ್ಯಕತೆಗಳನ್ನು ಮೀರಿ ಸಾಲ ಮಾಡಿ ಸಮಸ್ಯೆಗಳಿಗೆ ಸಿಲುಕಬಾರದು ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಮೈಕ್ರೋ ಫೈನಾನ್ಸ್ ಕಂಪನಿಗಳ ಕಿರುಕುಳಕ್ಕೆ ಸಂಬಂಧಿಸಿದಂತೆ ಕೊರಟಗೆರೆ ತಾಲ್ಲೂಕು ಚನ್ನರಾಯನದುರ್ಗ ಹೋಬಳಿ ಕುರಂಕೋಟೆ ಗ್ರಾಮಕ್ಕೆ ಗುರುವಾರ ಭೇಟಿ ನೀಡಿ ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈಕ್ರೋ ಫೈನಾನ್ಸ್ ಗಳಿಗೆ ಅಸಲು ಹಣಕ್ಕಿಂತ ಬಡ್ಡಿಯನ್ನೇ ಹೆಚ್ಚಾಗಿ ಕಟ್ಟಬೇಕಾಗುತ್ತದೆ. ಅತಿ ಹೆಚ್ಚು ಬಡ್ಡಿ ವಸೂಲಿ ಮಾಡುವ ಮೈಕ್ರೋ ಫೈನಾನ್ಸ್ ಗಳಿಂದ ಸಾಲ ಪಡೆಯುವ ಮುನ್ನ ಜನರು ಆಲೋಚಿಸಬೇಕು ಎಂದು ತಿಳಿಸಿದರು.
ಸಾರ್ವಜನಿಕರು ತಮ್ಮ ಖರ್ಚು–ವೆಚ್ಚಗಳು ಇತಿ–ಮಿತಿಯೊಳಗಿರುವಂತೆ ಎಚ್ಚರವಹಿಸಬೇಕು. ಮೈಕ್ರೋ ಫೈನಾನ್ಸ್ ನಿಂದ ತಾವು ಸಾಲ ಪಡೆಯುವುದಲ್ಲದೆ ಸ್ನೇಹಿತರು, ಬಂಧುಗಳ ಹೆಸರಲ್ಲಿಯೂ ತೆಗೆದುಕೊಳ್ಳುತ್ತಿರುವುದು ಪರಿಶೀಲನೆ ವೇಳೆಯಲ್ಲಿ ಗಮನಕ್ಕೆ ಬಂದಿದೆ. ಸ್ನೇಹಿತರ ಸಾಲಕ್ಕೆ ಜಾಮೀನು ಹಾಕುವ ಮುನ್ನ ಯೋಚಿಸಬೇಕು. ಇದರಿಂದ ಸಾಲ ಪಡೆದವರು ಹಾಗೂ ಜಾಮೀನು ಹಾಕಿದವರೂ ಸಹ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ತಿಳಿ ಹೇಳಿದರು.
ಗ್ರಾಮೀಣ ಪ್ರದೇಶದಲ್ಲಿ ಸ್ವ– ಸಹಾಯ ಗುಂಪುಗಳ ಸದಸ್ಯರಿಗೆ ಸರ್ಕಾರದ ವಿವಿಧ ಯೋಜನೆಗಳಡಿ ಅತಿ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಪಡೆಯಲು ಅವಕಾಶವಿದ್ದು, ಮಹಿಳೆಯರು ಈ ಸೌಲಭ್ಯವನ್ನು ಪಡೆದು ಆರ್ಥಿಕವಾಗಿ ಸಬಲರಾಗಲು ಸಾಧ್ಯವಿದೆ. ಇದರಿಂದ ಸಾಲದ ಶೂಲಕ್ಕೆ ಸಿಲುಕುವುದು ತಪ್ಪುತ್ತದೆ ಎಂದು ತಿಳಿಸಿದರು.
ಆರ್ ಬಿಐ ಮಾರ್ಗಸೂಚಿಗಳನ್ನು ಉಲ್ಲಂಘಿಸುವ ಮೈಕ್ರೋ ಫೈನಾನ್ಸ್ ಕಂಪನಿಗಳ ವಿರುದ್ಧ ಸ್ವಯಂ ಪ್ರಕರಣ ದಾಖಲಿಸಲು ಕ್ರಮಕೈಗೊಳ್ಳಲಾಗುವುದು. ಬುಧವಾರ ಮೈಕ್ರೋ ಫೈನಾನ್ಸ್ ಕಂಪನಿಗಳೊಂದಿಗೆ ಸಭೆ ನಡೆಸಿ ಕಂಪನಿಯ ಲಾಭಕ್ಕಾಗಿ ಸಾಲ ಮರುಪಾವತಿ ಮಾಡಲು ಸಾಧ್ಯವಿರದ ಮುಗ್ಧರಿಗೆ ಸಾಲ ನೀಡಬಾರದು. ಜಿಲ್ಲೆಯಲ್ಲಿ ಸಾಲ ನೀಡಲು ಅನುಸರಿಸಬೇಕಾದ ನಿಯಮಗಳ ಬಗ್ಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ವಿವಿಧ ಮೈಕ್ರೋ ಫೈನಾನ್ಸ್ ಕಂಪನಿಗಳು ಜಿಲ್ಲೆಯಲ್ಲಿ 64 ಕೋಟಿ ರೂ.ಗಳ ಸಾಲವನ್ನು ನೀಡಿದೆ. ಮೈಕ್ರೋ ಫೈನಾನ್ಸ್ ಕಂಪನಿಗಳು ಹೆಚ್ಚು ಸಾಲ ನೀಡಿಕೆಯಲ್ಲಿ ಜಿಲ್ಲೆಯು 2ನೇ ಸ್ಥಾನದಲ್ಲಿದೆ. ಮುಂದಾಲೋಚನೆಯಿಲ್ಲದೆ ಯಾರೂ ಸಾಲ ಮಾಡಬಾರದು ಎಂದು ಮನವಿ ಮಾಡಿದರಲ್ಲದೆ, ಗ್ರಾಮ ಪಂಚಾಯತಿ ಮಟ್ಟದಲ್ಲಿ ಸ್ವ–ಸಹಾಯ ಗುಂಪಿನಿಂದ ಸಾಲ ಪಡೆದು ಆರ್ಥಿಕ ಅಭಿವೃದ್ಧಿ ಹೊಂದುವ ಬಗ್ಗೆ ಅರಿವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್ ಮಾತನಾಡಿ, ಮೈಕ್ರೋ ಫೈನಾನ್ಸ್ ಕಂಪನಿಗಳು ಸಾಲ ನೀಡುವಾಗ ಕಡ್ಡಾಯವಾಗಿ ಆರ್ ಬಿಐ ಮಾರ್ಗಸೂಚಿಯನ್ನು ಪಾಲಿಸಬೇಕು. ಒಬ್ಬ ವ್ಯಕ್ತಿ ಗರಿಷ್ಠ 3 ಲಕ್ಷದವರೆಗೆ 4 ಬಾರಿ ಮಾತ್ರ ಸಾಲ ಪಡೆಯಲು ಅವಕಾಶವಿದೆ. ಮೈಕ್ರೋ ಫೈನಾನ್ಸ್ ಕಂಪನಿಗಳಿಂದ ಹೆಚ್ಚಿನ ಬಡ್ಡಿ ದರದಲ್ಲಿ ಸಾಲ ಹಾಗೂ ಕೈಸಾಲ ಪಡೆಯುವಾಗ ಮುನ್ನೆಚ್ಚರಿಕೆವಹಿಸಬೇಕು. ಮರು ಪಾವತಿ ಮಾಡಲು ಶಕ್ತರಿರುವವರಿಗೆ ಮಾತ್ರ ಮೈಕ್ರೋ ಫೈನಾನ್ಸ್ ಕಂಪನಿಗಳು ಸಾಲ ನೀಡಬೇಕು. ನಿಯಮ ಮೀರಿ ಸಾಲಗಾರರಿಗೆ ಸಾಲ ನೀಡುವ ಫೈನಾನ್ಸ್ ಕಂಪನಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದೆಂದು ಎಚ್ಚರಿಕೆ ನೀಡಿದರು.
ಆರ್ ಬಿಐ ಮಾರ್ಗಸೂಚಿಗಳ ಪ್ರಕಾರ ನಿಗದಿತ ಅವಧಿಯೊಳಗೆ ಸಾಲದ ಕಂತುಗಳನ್ನು ತೀರಿಸಲಾಗದ ಸಾಲಗಾರರನ್ನು ಮೈಕ್ರೋ ಫೈನಾನ್ಸ್ ಕಂಪನಿಗಳ ಪ್ರತಿನಿಧಿಗಳು ಅವಾಚ್ಯ ಶಬ್ದಗಳಿಂದ ಬೈಯ್ಯುವಂತಿಲ್ಲ. ದೌರ್ಜನ್ಯ–ದಬ್ಬಾಳಿಕೆ ಮಾಡುವಂತಿಲ್ಲ. ಸಂಜೆ 6 ಗಂಟೆಯ ನಂತರ ಸಾಲಗಾರರ ಮನೆ ಬಳಿ ವಸೂಲಾತಿಗೆ ಬರುವಂತಿಲ್ಲ. ಇಂತಹ ಪ್ರಕರಣಗಳು ವರದಿಯಾದಲ್ಲಿ ಕಂಪನಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದೆಂದು ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಫೈವ್ ಸ್ಟಾರ್ ಮೈಕ್ರೋ ಫೈನಾನ್ಸ್ ಕಂಪನಿಯಿಂದ 2ಲಕ್ಷ ರೂ. ಸಾಲ ಪಡೆದ ಕುರಂಕೋಟೆ ಗ್ರಾಮದ ವಿನುತ ಕೋಂ ಮಾರುತಿ ಅವರ ಮನೆಗೆ ಭೇಟಿ ನೀಡಿ ಪರಿಶೀಲಿಸಿದ ಜಿಲ್ಲಾಧಿಕಾರಿಗಳು, ವಿನುತ ಅವರು ನಿಗದಿತ ಅವಧಿಯಲ್ಲಿ ಸಾಲದ ಕಂತು ಕಟ್ಟದೆ ಇದ್ದುದರಿಂದ ಫೈನಾನ್ಸ್ ಕಂಪನಿಯವರು ಅವರ ಮನೆಯ ಮೇಲೆ “ಈ ಸ್ವತ್ತು ಫೈವ್ ಸ್ಟಾರ್ ಮೈಕ್ರೋ ಫೈನಾನ್ಸ್ ಕಂಪನಿಗೆ ಅಡಮಾನವಾಗಿದೆ” ಎಂದು ಬರೆಸಿದ್ದು, ಹೀಗೆ ಬರೆಸಿರುವುದು ಕಾನೂನು ರೀತ್ಯಾ ತಪ್ಪು. ಕಾನೂನು ಉಲ್ಲಂಘಿಸಿರುವ ಕಂಪನಿಯ ವಿರುದ್ಧ ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆಗೆ ಸೂಚನೆ ನೀಡಿದರು. ಕೂಡಲೇ ಬರವಣಿಗೆಯನ್ನು ಅಳಿಸಿ ಬಣ್ಣ ಬಳಿಯಲು ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇದಕ್ಕೂ ಮುನ್ನ ಕೊರಟಗೆರೆ ತಾಲ್ಲೂಕು ಕೋಳಾಲ ಹೋಬಳಿ ಹನುಮಂತಪುರ ಗ್ರಾಮದಲ್ಲಿ ಸಾಲ ತೀರಿಸಲಾಗದೆ 30 ಮಾತ್ರೆ ನುಂಗಿ ಆತ್ಮಹತ್ಯೆಗೆ ಯತ್ನಿಸಿ ಅಸ್ವಸ್ಥರಾಗಿದ್ದ ಮಂಗಳಮ್ಮ ಅವರ ಮನೆಗೆ ಭೇಟಿ ನೀಡಿ ಅವರ ಮಗನಿಂದ ಮಾಹಿತಿ ಪಡೆದರು.
ಈ ಸಂದರ್ಭದಲ್ಲಿ ಮಧುಗಿರಿ ಉಪವಿಭಾಗಾಧಿಕಾರಿ ಗೋಟೂರು ಶಿವಪ್ಪ, ಕೊರಟಗೆರೆ ತಹಶೀಲ್ದಾರ್ ಮಂಜುನಾಥ್, ಸೇರಿದಂತೆ ಮತ್ತಿತರರು ಹಾಜರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4