ಬೆಂಗಳೂರು: ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ತೃತೀಯ ಭಾಷೆಗೆ (ಹಿಂದಿ) ಗ್ರೇಡಿಂಗ್ ನೀಡುವ ರಾಜ್ಯ ಸರ್ಕಾರದ ನಿರ್ಧಾರವನ್ನು ಮರುಪರಿಶೀಲಿಸುವಂತೆ ಸೂಚಿಸಿ ಪತ್ರ ಬರೆದಿರುವ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ‘X’ ನಲ್ಲಿ ಸರಣಿ ಪೋಸ್ಟ್ ಮಾಡಿರುವ ಅವರು, ರಾಜ್ಯಪಾಲರ ನಡೆ ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾಗಿದೆ ಎಂದು ಕಿಡಿಕಾರಿದ್ದಾರೆ.
“ಕನ್ನಡಿಗರು ಔದಾರ್ಯವಂತರು. ನಮ್ಮ ನೆಲದ ತೆರಿಗೆ ದುಡ್ಡಿನಲ್ಲಿ ನಿಮಗೆ ಐಶಾರಾಮಿ ಸೌಲಭ್ಯ ನೀಡಿದ್ದೇವೆ. ತಿಂದ ಮನೆಗೆ ಕನ್ನ ಹಾಕುವುದು ಸರಿಯಲ್ಲ. ನಿಮ್ಮ ಅಧಿಕಪ್ರಸಂಗ ಮುಂದುವರಿದರೆ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ ಎಂದು ಹೇಳಬೇಕಾಗುತ್ತದೆ” ಎಂದು ಖಾರವಾಗಿ ನುಡಿದಿದ್ದಾರೆ.
ಸರ್ಕಾರ ಬಹುಮತದೊಂದಿಗೆ ಆಡಳಿತ ನಡೆಸುತ್ತಿರುವಾಗ, ದೈನಂದಿನ ನಿರ್ಧಾರಗಳಲ್ಲಿ ಮೂಗು ತೂರಿಸಲು ರಾಜ್ಯಪಾಲರಿಗೆ ಯಾವುದೇ ಸಾಂವಿಧಾನಿಕ ಹಕ್ಕಿಲ್ಲ. ನೀವು ಜನರಿಂದ ಆಯ್ಕೆಯಾದ ಪ್ರತಿನಿಧಿಯಲ್ಲ ಎಂಬುದನ್ನು ನೆನಪಿಡಿ ಎಂದು ಅವರು ಹೇಳಿದ್ದಾರೆ.
ರಾಜ್ಯಪಾಲರು ಹಿಂದಿ ಸಾಮ್ರಾಜ್ಯಶಾಹಿ ಲಾಬಿಯ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಒಂದು ವೇಳೆ ನಿಮಗೆ ತೃತೀಯ ಭಾಷೆಯ ಮೇಲೆ ಅಷ್ಟೊಂದು ಪ್ರೇಮವಿದ್ದರೆ, ಉತ್ತರ ಭಾರತದ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಅಲ್ಲಿನ ಮಕ್ಕಳಿಗೆ ಕನ್ನಡವನ್ನು ಮೂರನೇ ಭಾಷೆಯಾಗಿ ಕಲಿಸಲು ಹೇಳಿ ಎಂದು ಸವಾಲು ಹಾಕಿದ್ದಾರೆ.
ಶಿಕ್ಷಣ ತಜ್ಞರ ಸಲಹೆಯ ಮೇರೆಗೆ ಸರ್ಕಾರ ಗ್ರೇಡಿಂಗ್ ವ್ಯವಸ್ಥೆ ತಂದಿದೆ. ಇದು ದಶಕಗಳ ಶಾಪ ವಿಮೋಚನೆಯಾಗಿದೆ. ಇದನ್ನು ತಡೆಯಲು ಪ್ರಯತ್ನಿಸಿದರೆ ಕರ್ನಾಟಕದಲ್ಲಿ ದೊಡ್ಡ ಮಟ್ಟದ ಕ್ರಾಂತಿ ಅಥವಾ ಹೋರಾಟ ಆರಂಭವಾಗಲಿದೆ ಎಂದು ನಾರಾಯಣಗೌಡ ಎಚ್ಚರಿಸಿದ್ದಾರೆ.
ರಾಜ್ಯಪಾಲರು ಕೂಡಲೇ ಮುಖ್ಯ ಕಾರ್ಯದರ್ಶಿಗಳಿಗೆ ಬರೆದಿರುವ ಪತ್ರವನ್ನು ವಾಪಸ್ ಪಡೆಯಬೇಕು ಎಂದು ಕರವೇ ಆಗ್ರಹಿಸಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


