ಹುಬ್ಬಳ್ಳಿ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಿಜೆಪಿಗೆ ಬರುವ ಬಗ್ಗೆ ಅನುಮಾನ ಮೂಡುತ್ತಿವೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವ್ಯಂಗ್ಯವಾಡಿದ್ದಾರೆ.
ಹುಬ್ಬಳ್ಳಿ ನಗರದ ಗೋಕುಲ ರಸ್ತೆಯ ಹೆಬಸೂರು ಭವನದಲ್ಲಿ ರಾಜ್ಯ ಬಿಜೆಪಿ ಕಾರ್ಯಕಾರಿಣಿ ವೇಳೆ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ನಿನ್ನೆ ಮಲ್ಲಿಕಾರ್ಜುನ ಖರ್ಗೆಯವರು 2024ಕ್ಕೂ ಅವರೇ ಅಂತಾ ಹೇಳಿದ್ದಾರೆ. ಇದನ್ನು ನೋಡಿದರೆ ಬಿಜೆಪಿಗೆ ಬರುತ್ತಾರೆ ಏನೋ ಅನ್ನೋ ಅನುಮಾನ ಇದೆ ಎಂದು ಕಾಲೆಳೆದರು.
ಇನ್ನೂ ಸಂಸದ ಡಿ.ಕೆ.ಸುರೇಶ್ ಅವರನ್ನು ಪರೋಕ್ಷವಾಗಿ ಮುಟ್ಠಾಳ ಎಂದು ಕರೆದ ಅವರು, ಯಾವ ಮುಟ್ಠಾಳನಾದರೂ ದೇಶ ಇಬ್ಭಾಗಿಸುತ್ತೇವೆ ಅಂತಾ ಹೇಳ್ತಾರಾ ಅಂತ ಪ್ರಶ್ನಿಸಿದರು.
ದೇಶ ಇಬ್ಭಾಗಿಸೋಕೆ ಇದೇನೂ ಅವರಪ್ಪನ ಮನೆ ಆಸ್ತಿನಾ? ಎಂದು ಪ್ರಶ್ನಿಸಿದ ಅವರು, ಅಕಸ್ಮಾತ್ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶ ಒಂದಿರಬೇಕೋ ಬೇಡ್ವೋ. ಈ ಹಿಂದೆ ಇದೇ ಕಾಂಗ್ರೆಸ್ ದೇಶವನ್ನು ತುಂಡರಿಸಿದ್ದು. ಕಾಂಗ್ರೆಸ್ ಪಕ್ಷಕ್ಕೆ ದೇಶ ಅಂದ್ರೆ ಭೂಮಿ ಮಾತ್ರ ಆದರೆ ಬಿಜೆಪಿಯ ಕಾರ್ಯಕರ್ತರಿಗೆ ದೇಶ ಅಂದರೆ ಮಾತೃಭೂಮಿ. ಭೂಮಿಗೂ ಮಾತೃಭೂಮಿಗೂ ವ್ಯತ್ಯಾಸ ಇದೆ. ಹೀಗಾಗಿ ಕಾಂಗ್ರೆಸ್ ನವರು ಯಾವಾಗಲೂ ತುಂಡರಿಸುವ ಮಾತಾಡ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.


