ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಮಹಿಳೆ, ದಲಿತ, ರೈತ, ಕಾರ್ಮಿಕ ಚಳವಳಿಗಳ ಬಗ್ಗೆ ಚರ್ಚಿಸುವ ಬದಲು, ಸಾಹಿತ್ಯಕೇಂದ್ರಿತವಾಗಿ ದಲಿತರು, ಪ್ರಗತಿಪರರು, ರೈತರು, ಮಹಿಳೆಯರು, ಕಾರ್ಮಿಕರ ವಿಷಯಗಳನ್ನು ಚರ್ಚಿಸುವ ಮೂಲಕ ಕನ್ನಡದ ವಿವೇಕವನ್ನು ವಿಸ್ತರಿಸುವ ಕೆಲಸವಾಗಬೇಕೆಂದು ಸಾಹಿತಿ ಡಾ.ಬರಗೂರು ರಾಮಚಂದ್ರಪ್ಪ ತಿಳಿಸಿದರು.
ನಗರದ ಅಮಾನಿಕೆರೆಯಲ್ಲಿ ನಡೆದ 16ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಕನ್ನಡ ಸಾಹಿತ್ಯ ಸಮಗ್ರವಾದದು. ಕನ್ನಡ ಸಾಹಿತ್ಯದ ವಿವೇಕ ಬಹಳ ವಿಸ್ತಾರವಾದದು. ಮಾನವೀಯತೆ ಬದಲು ಮತೀಯತೆ ಆವರಿಸಿಕೊಳ್ಳುತ್ತಿರುವ ಸಂದರ್ಭದಲ್ಲಿ ಪಂಪನಿಂದ ಇಂದಿನ ದಲಿತ, ಬಂಡಾಯ ಸಾಹಿತ್ಯದವರೆಗೆ ಕನ್ನಡ ಬಹು ದೊಡ್ಡ ವಿವೇಕವನ್ನು ಸಮಾಜಕ್ಕೆ ನೀಡಿದೆ. ಅದನ್ನು ಜನಸಾಮಾನ್ಯರ ಮಧ್ಯೆ ತೆಗೆದುಕೊಂಡು ಹೋಗುವ ಕೆಲಸ ಇಂತಹ ಸಮ್ಮೇಳನಗಳ ಮೂಲಕ ಆಗಬೇಕಾಗಿದೆ ಎಂದು ತಿಳಿಸಿದರು.
ಕನ್ನಡ ಭಾಷೆ ಧಾರ್ಮಿಕ, ರಾಜಕೀಯ, ಸಾಹಿತ್ಯಿಕ, ಸಾಮಾಜಿಕ, ಆರ್ಥಿಕ ವಿವೇಕಗಳನ್ನು ಕಲ್ಪಿಸಿರುವ ಭಾಷೆಯಾಗಿದೆ. ಕನ್ನಡ ಸಾಹಿತ್ಯದ ವಿವೇಕ ಬಹಳ ಪ್ರಾಚೀನವಾಗಿದ್ದು, ಪಂಪ-ರನ್ನರ ಕಾಲದಿಂದಲೂ ಹಲವು ವಿಷಯಗಳ ಕುರಿತು ಚರ್ಚಿಸಿಕೊಂಡು ಬರಲಾಗುತ್ತಿದೆ. ಕನ್ನಡ ಸಾಹಿತ್ಯವು ಜನಪದ, ಸಂಸ್ಕೃತಿ ಸೇರಿದಂತೆ ಸ್ಥಳೀಯ, ಪ್ರಾದೇಶೀಕ, ರಾಷ್ಟ್ರೀಯ, ಅಂತರಾಷ್ಟ್ರೀಯ ಮಟ್ಟದ ವಿಚಾರಗಳನ್ನು ಒಳಗೊಂಡಿದೆ ಎಂದರು.
ಜನಸಾಮಾನ್ಯರ ಬಗ್ಗೆ ಗೌರವ ಇದ್ದಾಗ ಮಾತ್ರ ಸಾಹಿತ್ಯ ಉತ್ಕೃಷ್ಟವಾಗಿರುತ್ತದೆ. ಬರೆಯದವರ ಬಗ್ಗೆ ಬರೆಯುವವರು ಗೌರವ ಹೊಂದಿದಾಗ ಮಾತ್ರ ಸಾಹಿತ್ಯ ಬರೆಯುವವರ ಗೌರವ ಹೆಚ್ಚಾಗುತ್ತದೆ ಎಂದು ಹೇಳಿದರು.
ಕನ್ನಡ ಸಾಹಿತ್ಯದಲ್ಲಿ 10ನೇ ಶತಮಾನದಿಂದ 21ನೇ ಶತಮಾನದವರೆಗೆ ಜಾತಿ ನಿರಾಕರಣೆ ಮಾಡುತ್ತಲೇ ಸಾಹಿತ್ಯವನ್ನು ವಿಸ್ತರಿಸುವ ಕೆಲಸ ಮಾಡಲಾಗುತ್ತಿದ್ದರೂ ಸಹ ಜಾತೀಯತೆ ಮತ್ತಷ್ಟು ಕಠಿಣ ಸ್ವರೂಪವನ್ನು ಪಡೆದುಕೊಳ್ಳುತ್ತಿರುವ ಬೆಳೆವಣಿಗೆಗಳು ಆತಂಕಕಾರಿಯಾಗಿವೆ. ಇಂದಿನ ರಾಜಕೀಯ ಪರಿಸ್ಥಿತಿ ಕುಮಾರವ್ಯಾಸರ “ಅರಸು ಮೊರೆವ ಹುಲಿ” ಎಂಬ ಹೇಳಿಕೆಯಂತೆ ಬಡವರ ಭಿನ್ನಪ್ಪವ ಕೇಳುವವರೇ ಇಲ್ಲದಂತಾಗಿದೆ ಎಂದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx