ತುಮಕೂರು: ಡಾ.ಜಿ.ಪರಮೇಶ್ವರ ಒಳಾಂಗಣ ಕ್ರೀಡಾ ಸಂಕೀರ್ಣವನ್ನು ಮಂಗಳವಾರ ಲೋಕಾರ್ಪಣೆಗೊಳಿಸಲಾಯಿತು. ಮೂಲತಃ ಕ್ರೀಡಾಪಟುವಾದ ತಮ್ಮ ಹೆಸರನ್ನು ಇಡುವುದಕ್ಕೆ ವಿರೋಧಿಸಿ ಪ್ರತಿಭಟಿಸಿದ ವಿರೋಧ ಪಕ್ಷದ ಬಿಜೆಪಿ ವಿರುದ್ಧ ವೇದಿಕೆಯಲ್ಲೇ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅಸಮಾಧಾನ ವ್ಯಕ್ತಪಡಿಸಿದರು.
ನಗರದ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ಸಂಕೀರ್ಣ ಕಾಮಗಾರಿ ಉದ್ಘಾಟಿಸಿ ಮಾತನಾಡಿದ ಅವರು, “ನಾನು ಮೂಲತಃ ಕ್ರೀಡಾಪಟು. ಕರ್ನಾಟಕ ರಾಜ್ಯ ಅಥ್ಲೆಟಿಕ್ ಅಸೋಸಿಯೇಷನ್ ಸಂಸ್ಥೆಯ ಅಧ್ಯಕ್ಷನಾಗಿ, ವಿದ್ಯಾರ್ಥಿಯಾಗಿದ್ದಾಗ ಅಥ್ಲೆಟಿಕ್ಸ್‌ನಲ್ಲಿ ಹಲವು ದಾಖಲೆಗಳನ್ನು ಮಾಡಿದ್ದೇನೆ. ಜಿಲ್ಲೆಯ ಶೈಕ್ಷಣಿಕ ಹಾಗೂ ಕ್ರೀಡೆ ಸೇರಿದಂತೆ ಅಭಿವೃದ್ಧಿಗೆ ನನ್ನ ಕೊಡುಗೆಯಿದೆ.”
ಒಳಾಂಗಣ ಕ್ರೀಡಾಂಗಣಕ್ಕೆ ನನ್ನ ಹೆಸರು ಇಡಬೇಕೆಂದು ನಾನು ಯಾರಿಗೂ ಹೇಳಲಿಲ್ಲ. ಜಿಲ್ಲೆಯ ಕ್ರೀಡಾಭಿಮಾನಿಗಳು, ಕ್ರೀಡಾಪಟುಗಳೇ ಆಸಕ್ತಿಯಿಂದ ಈ ಸಂಕೀರ್ಣಕ್ಕೆ ನನ್ನ ಹೆಸರಿಡಬೇಕೆಂದು ಮನವಿ ಸಲ್ಲಿಸಿದ್ದರು. ಅದಕ್ಕೆ ಇಲಾಖೆಯ ಸಮ್ಮತಿಯೊಂದಿಗೆ ನನ್ನ ಹೆಸರಿಟ್ಟಿದ್ದಾರೆ.
ಮಹಾತ್ಮ ಗಾಂಧಿ ಹೆಸರನ್ನು ಬದಲಿಸಿ ನನ್ನ ಹೆಸರು ಇಡಲಾಗಿದೆ ಎಂಬ ಬಿಜೆಪಿ ಅವರ ಪ್ರಚಾರ ಅಪ್ಪಟ ಸುಳ್ಳು ಮತ್ತು ಇದು ಕೇವಲ ರಾಜಕೀಯ ಅಪಪ್ರಚಾರ ಎಂದು ಅವರು ಹೇಳಿದರು.
ಪರಮೇಶ್ವರ್ ಪರ ಜೈಕಾರ:
ಒಳಾಂಗಣ ಕ್ರೀಡಾಂಗಣಕ್ಕೆ ಪರಮೇಶ್ವರ್ ಅವರ ಹೆಸರಿಡುವುದನ್ನು ವಿರೋಧಿಸಿ ಬಿಜೆಪಿಯವರು ನಡೆಸಿದ ಪ್ರತಿಭಟನೆಗೆ ಪ್ರತಿಯಾಗಿ ದಲಿತ ಪರ ಸಂಘಟನೆಗಳ ಮುಖಂಡರು ಜಿಲ್ಲಾ ಕ್ರೀಡಾಂಗಣದ ಮುಂಭಾಗ ಜೈಕಾರ ಕೂಗಿ ಬಿಜೆಪಿಯವರ ನಡೆಯನ್ನು ಖಂಡಿಸಿದರು.
ರಾಜ್ಯ ಒಲಿಂಪಿಕ್ ಅಸೋಸಿಯೇಷನ್ ಅಧ್ಯಕ್ಷ ಕೆ. ಗೋವಿಂದರಾಜು ಮಾತನಾಡಿ, “ಪರಮೇಶ್ವರ್ ಅವರು ಮೂಲತಃ ಕ್ರೀಡಾಪಟು ಎಂಬುದು ಗೊತ್ತಿತ್ತು. ಆದರೆ ಅಥ್ಲೆಟಿಕ್ಸ್‌ನಲ್ಲಿ ಅವರು ಮಾಡಿರುವ ದಾಖಲೆಗಳ ಪ್ರಮಾಣಪತ್ರ ನೋಡಿದಾಗ ಅಚ್ಚರಿಯಾಯಿತು. ಅವರು ರಾಜಕೀಯಕ್ಕೆ ಬಾರದಿದ್ದರೆ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದ ಅಥ್ಲೀಟ್ ಆಗಿ ಹೊರಹೊಮ್ಮುತ್ತಿದ್ದರು,” ಎಂದು ಶ್ಲಾಘಿಸಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


