ತುಮಕೂರು: ಸಾಹಿತಿ ಡಾ.ಕಮಲಾ ಹಂಪನಾ ರವರಿಗೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನುಡಿನಮನ ಸಲ್ಲಿಸಲಾಯಿತು.
ಇದೇ ವೇಳೆ ಮಾತನಾಡಿದ ಜಿಲ್ಲಾ ಕಸಾಪ ಅಧ್ಯಕ್ಷರಾದ ಕೆ.ಎಸ್.ಸಿದ್ಧಲಿಂಗಪ್ಪ, ಕಮಲಾ ಹಂಪನಾರವರು ಅಧ್ಯಯನ, ಅಧ್ಯಾಪನ, ಲೇಖನ, ಭಾಷಣ ಮತ್ತು ಸಂಶೋಧನೆಗಳಿಂದ ೬೦ ವರ್ಷಗಳ ಕಾಲ ಸಾಹಿತ್ಯ ಕ್ಷೇತ್ರದಲ್ಲಿ ಅವಿರತವಾಗಿ ಕೃಷಿ ಮಾಡುತ್ತಾ ಬಂದಿದ್ದಾರೆ. ಸಮಕಾಲೀನ ಕನ್ನಡ ಸಾಹಿತ್ಯದ ಹಿರಿಯ ಬರಹಗಾರ್ತಿ. ಅವರ ದೀರ್ಘಕಾಲಿಕ ಹಾಗೂ ಮೌಲಿಕ ಕೊಡುಗೆಗೆ ಸಂದ ಗೌರವಗಳಲ್ಲಿ ಪ್ರಮುಖವಾದುವು, ಮೂಡುಬಿದರೆಯಲ್ಲಿ ನಡೆದ ಅಖಿಲ ಭಾರತ ೭೧ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ಸರ್ಕಾರದ ಪುರಸ್ಕಾರವಾದ ದಾನಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ ಹಾಗೂ ಹಂಪಿ ಕನ್ನಡ ವಿಶ್ವವಿದ್ಯಾಲಯವು ಕೊಡಮಾಡುವ ನಾಡೋಜ ಪ್ರಶಸ್ತಿ. ಡಾ. ಕಮಲಾ ಹಂಪನಾ ಅವರ ಬರವಣಿಗೆಯ ಹರಹು ದೊಡ್ಡದು ಎಂದರು.
ಅವರ ಸಮಗ್ರ ಸಾಹಿತ್ಯವನ್ನು ಒಳಗೊಂಡ ಒಂಬತ್ತು ಬೃಹತ್ ಸಂಪುಟಗಳು ಹೊರಬಂದಿವೆ. ಸಂಶೋಧನೆ ಅವರ ಮೊದಲ ಆಯ್ಕೆ. ಪ್ರಕಟವಾದ ೬೦ಕ್ಕೂ ಹೆಚ್ಚು ಕೃತಿಗಳಲ್ಲಿ ಸೃಜನಕೃತಿಗಳೂ ಸೇರಿವೆ. ನಾಟಕ, ಕತೆಗಳು ಮತ್ತು ವಚನಗಳಲ್ಲಿ ಸೃಷ್ಟಿಶಕ್ತಿಯ ವಿನ್ಯಾಸ ಕೆನೆಕಟ್ಟಿದೆ. ಬಿಂದಲಿ, ಬುಗುಡಿ ಹಾಗೂ ಬಯಲು ಇವು ಆಧುನಿಕ ವಚನಗಳಿರುವ ಸಂಕಲನಗಳು. ಇವಲ್ಲದೆ Attimabbe and Chalukyas ಹಾಗೂ Jainism and Other Essays- ಎಂಬ ಎರಡು ಇಂಗ್ಲಿಷ್ ಪುಸ್ತಕಗಳನ್ನು ರಚಿಸಿದ್ದಾರೆ ಎಂದು ತಿಳಿಸಿದರು.
ಜೀವಪರ ಸಂವೇದನೆ, ಸಾಮಾಜಿಕ ಬದ್ಧತೆ, ಸಾಂಸೃತಿಕ ಕಾಳಜಿಯನ್ನು ಪ್ರಭಾವಶಾಲಿಯಾಗಿ ಬಿಂಬಿಸುವಕಮಲಾ ಹಂಪನಾ ಕನ್ನಡದ ಹೆಮ್ಮೆ. ಕರ್ನಾಟಕ ಸರ್ಕಾರ ಅವರ ಸಾಕ್ಷ್ಯಚಿತ್ರವನ್ನು ಸಿದ್ಧಪಡಿಸಿದೆ ಎಂದರು.
ಇವೆಲ್ಲದಕ್ಕೂ ಕಿರೀಟಪ್ರಾಯವಾಗಿ – ಜಗತ್ತಿನ ಅಯ್ದು ಆದರ್ಶ ಜೋಡಿಗಳನ್ನು ಆಧರಿಸಿ ಜರ್ಮನಿಯ ಯಾಸೇಮಿನ್ ನಿರ್ದೇಶಿಸಿರುವ ಅಂತರರಾಷ್ಟ್ರೀಯ ಸಾಕ್ಷ್ಯಚಿತ್ರದಲ್ಲಿ ಇಡೀ ಭಾರತದ ಪರವಾಗಿ ಕಮಲಾ–ಹಂಪನಾ ಜೋಡಿ ಆಯ್ಕೆಯಾಗಿ ಸೇರಿರುವುದು. ಅವರು ಪಟ್ಟ ಶ್ರಮ, ನಡಸಿದ ನಿರಂತರ ಹೋರಾಟ, ಮಾಡಿದ ಸಾಧನೆಗಳು ಹಲವಾರು. ಅವರ ಪರಿಶ್ರಮದ ಫಲವಾಗಿ ೧. ಕರ್ನಾಟಕ ಸರ್ಕಾರ ಪ್ರತಿವರ್ಷ ಲೇಖಕಿಯೊಬ್ಬರಿಗೆ ಮೂರು ಲಕ್ಷರೂಪಾಯಿ ನಗದನ್ನೂ ಒಳಗೊಂಡ ದಾನಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿಯನ್ನು ನೀಡುತ್ತಿದೆ ಎಂದರು.
ಜಿಲ್ಲಾ ಕಸಾಪ ಕಾರ್ಯದರ್ಶಿ ಡಾ. ಡಿ.ಎನ್.ಯೋಗೀಶ್ವರಪ್ಪ ಮಾತನಾಡಿ, ಸುಮಾರು ೮೦ಕ್ಕೂ ಹೆಚ್ಚು ವಿದ್ವತ್‌ಪೂರ್ಣ ಕೃತಿಗಳನ್ನು ಕನ್ನಡ ಸಾಹಿತ್ಯಲೋಕಕ್ಕೆ ನೀಡಿರುವ ಡಾ. ಕಮಲಾ ಹಂಪನಾ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ, ಪ್ರಾಂಶುಪಾಲರಾಗಿ, ಸಂಶೋಧನೆ, ವಿಮರ್ಶೆ ಮೊದಲಾದ ಕ್ಷೇತ್ರಗಳಲ್ಲಿ ಆಳವಾಗಿ ಅಧ್ಯಯನ ನಡೆಸಿರುವ ಇವರು ಅಗಣಿತ ಸ್ನೇಹ ವಿದ್ಯಾರ್ಥಿ ಬಳಗದ ಒಡತಿಯಾಗಿದ್ದರು. ಲೇಖಕಿ, ಅನುವಾದಕಿ, ವಾಗ್ಮಿ, ಹೋರಾಟಗಾರ್ತಿ, ಆಶಾವಾದಿ, ಸುಸಂಸ್ಕೃತೆ, ಸಜ್ಜನ ಮೃದು ಮಾತಿನ, ದಿಟ್ಟ ನಿಲುವಿನ ಹೆಣ್ಣುಮಗಳಾಗಿದ್ದ ಕಮಲಾ ಹಂಪನಾ ತುಮಕೂರು ಜಿಲ್ಲೆಯ ಕ್ಯಾತ್ಸಂದ್ರದವರಾಗಿರುವುದು ಹೆಮ್ಮೆಯ ವಿಷಯ ಎಂದರು.
ಜಿಲ್ಲಾ ಕಸಾಪ ನಿಕಟಪೂರ್ವ ಅಧ್ಯಕ್ಷರಾದ ಬಾ.ಹ.ರಮಾಕುಮಾರಿ ಮಾತನಾಡಿ, ತುಮಕೂರು ಜಿಲ್ಲಾ ಲೇಖಕಿಯರ ಸಂಘದ ಪ್ರಥಮ ಮಹಿಳಾ ಸಮ್ಮೇಳನದ ಅಧ್ಯಕರಾಗಿ ಲೇಖಕಿಯರಿಗೆ ಸ್ಫೂರ್ತಿ ತುಂಬಿದ್ದಾರೆ. ಹಂಪನಾ ಮತ್ತು ಕಮಲಾ ಹಂಪನಾ ದಂಪತಿಗಳು ಮುದ್ದಣ ಮನೋರಮೆಯರಂತೆ ಮಾದರಿಯಾಗಿದ್ದರು. ಜೈನ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿ, ಅಮೂಲ್ಯ ಕೃತಿಗಳ ರಚನೆ ಮಾಡಿದ್ದಾರೆ. ಕಮಲಾ ಹಂಪನಾ ನೆನಪಿನ ವಿಚಾರ ಸಂಕಿರಣವನ್ನು ಏರ್ಪಡಿಸಿ, ಮತ್ತಷ್ಟು ವಿಷಯಗಳನ್ನು ಸಾಹಿತ್ಯಾಸಕ್ತರು ಮೆಲುಕು ಹಾಕುವಂತೆ ಮಾಡಬೇಕೆಂದರು.
ಕಾಯಕ್ರಮದಲ್ಲಿ ಜೈನ ಅಧ್ಯಕ್ಷರಾದ ನಾಗರಾಜ್ ನುಡಿನಮನ ಸಲ್ಲಿಸಿ ಕಳೆದ ಆರು ತಿಂಗಳ ಹಿಂದೆ ತುಮಕೂರಿಗೆ ಭೇಟಿ ತಮ್ಮೊಂದಿಗೆ ಕಾಲ ಕಳೆದ ನೆನಪನ್ನು ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ಕೆ.ಎಸ್.ಉಮಾಮಹೇಶ್, ಚಿಕ್ಕಬೆಳ್ಳಾವಿ ಶಿವಕುಮಾರ್, ಕೆಂಕೆರೆ ಮಲ್ಲಿಕಾರ್ಜುನ್, ಜಿ.ಹೆಚ್.ಮಹದೇವಪ್ಪ, ರಾಣಿ ಚಂದ್ರಶೇಖರ್, ನಟರಾಜ್, ಜಲದಿ ರಾಜು, ಚೆಲುವರಾಜು, ಚಾಂದು ಮುಂತಾದವರು ಭಾಗವಹಿಸಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA