ತುಮಕೂರು: ಭಾರತದ ಸಮಗ್ರ ಅಭಿವೃದ್ಧಿಯಲ್ಲಿ ಸಿದ್ದಗಂಗಾ ಮಠ ಹಾಗೂ ಡಾ. ಶ್ರೀ ಶಿವಕುಮಾರಸ್ವಾಮೀಜಿ ಅವರ ಕೊಡುಗೆ ಅನನ್ಯವಾಗಿದ್ದು, ಮಠದ ಸಹಾಯಾರ್ಥ ಮಕ್ಕಳಿಗೆ ಅನ್ನ, ಆಶ್ರಯ, ಶಿಕ್ಷಣವನ್ನು ಶ್ರೀಗಳು ದಾನರೂಪದಲ್ಲಿ ನೀಡದೆ ಅವರ ಹಕ್ಕಾಗಿ ಒದಗಿಸುವ ಮೂಲಕ ದೊಡ್ಡ ಮಟ್ಟಕ್ಕೆ ಹಾಕಿಕೊಟ್ಟಿದ್ದಾರೆ ಎಂದು ಭಾರತದ ಉಪ ರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್ ಬಣ್ಣಿಸಿದರು.
ಸಿದ್ದಗಂಗಾ ಮಠದಲ್ಲಿ ಬುಧವಾರ ಜರುಗಿದ ಲಿಂಗೈಕ್ಯ ಡಾ.ಶ್ರೀ ಶಿವಕುಮಾರ ಸ್ವಾಮೀಜಿಯವರ 7ನೇ ಪುಣ್ಯಸ್ಮರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
“ಪ್ರಧಾನಿ ಮೋದಿ ಅವರ ವಿಕಸಿತ ಭಾರತದ ಪರಿಕಲ್ಪನೆಗೆ ಪೂರಕವಾಗಿ ಸಿದ್ದಗಂಗಾ ಮಠದ ಸೇವಾ ಚಟುವಟಿಕೆಗಳು ನಡೆಯುತ್ತಿದ್ದು, ಅನಿಶ್ಚಿತತೆ, ವಿಭಜನೆ ಮತ್ತು ಅಶಾಂತಿಯನ್ನು ಸೃಷ್ಟಿಸುತ್ತಿರುವ ಈ ಯುಗದಲ್ಲಿ ಸಿದ್ದಗಂಗೆಯ ಲಿಂಗೈಕ್ಯ ಶ್ರೀ ಶಿವಕುಮಾರ ಸ್ವಾಮೀಜಿಯವರ ಜೀವನ ನೈತಿಕ ದಿಕ್ಕನ್ನು ಸೂಚಿಸುವ ನಂದಾದೀಪ ವೆನಿಸಿದೆ” ಎಂದರು.
ಸಿದ್ಧಗಂಗಾ ಮಠಾಧ್ಯಕ್ಷರಾದ ಶ್ರೀ ಸಿದ್ಧಲಿಂಗ ಸ್ವಾಮೀಜಿ ಮಾತನಾಡಿ, “89 ವರ್ಷಗಳ ಕಾಲ ಶ್ರೀಮಠದಲ್ಲಿ ಸುದೀರ್ಘ ಸೇವೆ ಸಲ್ಲಿಸಿದ ನಮ್ಮೆಲ್ಲರ ಪೂಜ್ಯ ಗುರುಗಳಾದ ಡಾ.ಶಿವಕುಮಾರಸ್ವಾಮೀಜಿಯವರು, ನಮ್ಮಲ್ಲಿ ಸದಾ ಕಾಯಕ ಭಾವನೆ ಜಾಗೃತವಾಗಿರಬೇಕು, ಶ್ರೀಮಠದಲ್ಲಿ ದಾಸೋಹ, ಮಕ್ಕಳ ಶಿಕ್ಷಣ ಎಂದೂ ನಿಲ್ಲಬಾರದು ಎಂದು ಸೂಚನೆ ನೀಡಿದ್ದಾರೆ ಎಂದರು.
ಗೃಹ ಸಚಿವ ಡಾ.ಜಿ.ಪರಮೇಶ್ವರ್ ಮಾತನಾಡಿ, “ಸಂವಿಧಾನ, ಶರಣರ ಆಶಯವನ್ನು ನೈಜ ಅನುಷ್ಠಾನಕ್ಕೆ ತಂದವರು. 12ನೇ ಶತಮಾನದಲ್ಲಿ ಬಸವಾದಿ ಶರಣರ ಸಮಾನತೆ, ಅಸ್ಪೃಶ್ಯತೆ ನಿವಾರಣೆಯ ಆಶಯ, ಸಂವಿಧಾನದ ಪೂರ್ವ ಪೀಠಿಕೆಯ ಅಂಶಗಳನ್ನು 20ನೇ ಶತಮಾನದಲ್ಲಿ ಮಠದಲ್ಲಿ ಅನುಷ್ಠಾನಗೊಳಿಸಿದ ಕೀರ್ತಿ ಲಿಂಗೈಕ್ಯ ಶ್ರೀಗಳಿಗೆ ಸಲ್ಲುತ್ತದೆ” ಎಂದರು.
ಕೇಂದ್ರ ಸಚಿವ ವಿ. ಸೋಮಣ್ಣ ಮಾತನಾಡಿ, “ಸೂರ್ಯ ಚಂದ್ರರಿರುವವರೆಗೂ ಮಠ, ಶ್ರೀಗಳ ಸೇವೆ ಅಜರಾಮರ. ಸಿದ್ಧಗಂಗಾ ಮಠದಲ್ಲಿ ಅನ್ನ, ಆಶ್ರಯ, ಶಿಕ್ಷಣ ಪಡೆದ ಮಕ್ಕಳು ರಾಷ್ಟ್ರದ ಉದ್ದಗಲಕ್ಕೂ ಮಾತ್ರವಲ್ಲದೆ ವಿದೇಶಗಳಲ್ಲೂ ಸೇವೆ ಸಲ್ಲಿಸುವ ಮೂಲಕ ಸಮಾಜಕ್ಕೆ ಕೊಡುಗೆ ನೀಡುತ್ತಿದ್ದಾರೆ ಎಂದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


