ಮಧುಗಿರಿ: ವಿದ್ಯಾರ್ಥಿಗಳು ಗುರಿಗಳೊಂದಿಗೆ ತಮ್ಮ ಕನಸುಗಳನ್ನು ನನಸಾಗಿಸಿಕೊಂಡಾಗ ಮಾತ್ರ ಮುಂದಿನ ದಿನಗಳಲ್ಲಿ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಲು ಸಾಧ್ಯ ವಾಗುತ್ತದೆ ಎಂದು ಸಹಕಾರ ಸಚಿವ ಹಾಗೂ ಹಾಸನ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಎನ್.ರಾಜಣ್ಣರವರು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಅವರು ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕೆ.ಎನ್ ಆರ್ ಸಭಾಂಗಣಾದಲ್ಲಿ ಆಯೋಜಿಸಿದ್ದ ಎನ್ ಎಸ್ ಎಸ್ , ಕ್ರೀಡೆ , ಸ್ಕೌಟ್ ಅಂಡ್ ಗೈಡ್ , ಶೈಕ್ಷಣಿಕ ಚಟುವಟಿಕೆಗಳ ಸಮಾರೋಪ ಸಮಾರಂಭ. ಹಾಗೂ 2023 – 24 ನೇ ಸಾಲಿನ ಪ್ರಥಮ ವರ್ಷದ ಸ್ನಾತಕ. ಸ್ನಾತಕೊತ್ತರ. ವಿದ್ಯಾರ್ಥಿಗಳ ಸ್ವಾಗತ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಅಬ್ದುಲ್ ಕಲಾಂ ಅವರು ಹೇಳಿದಂತೆ ಕನಸುಗಳನ್ನು ಕಂಡಾಗ ನಿಮ್ಮ ಗುರಿಗಳನ್ನು ಸಾಧಿಸಲು ಸಾಧ್ಯ . ಸಮಾಜಮುಖಿ ಚಿಂತನೆ ಗಳಿಂದ ಅಭಿವೃದ್ಧಿಯ ಜೊತೆಯಲ್ಲಿ ನೀವುಗಳು ಮತ್ತಷ್ಟು ಬೆಳೆಯಲು ಸಾಧ್ಯ. ವಿದ್ಯಾರ್ಥಿ ಜೀವನದಲ್ಲಿದ್ದಾಗ ಅದರ ಮಹತ್ವವನ್ನು ವಿದ್ಯಾರ್ಥಿಗಳು ಅರಿತು ಕೊಳ್ಳಬೇಕು ಎಂದರು.
ಸಂಘ ಸಂಸ್ಥೆಗಳಿಂದ ಇಂದು ವಿದ್ಯಾಭ್ಯಾಸ ಮಾಡಲು ಸಹಕಾರ ದೊರೆಯತ್ತದೆ. ಅಂದಿನ ಕಾಲದಲ್ಲಿ ಉನ್ನತ ಶಿಕ್ಷಣ ಪಡೆಯಬೇಕಾದರೆ ತುಮಕೂರು ನಗರಕ್ಕೆ ಹೋಗಬೇಕಾಗಿತ್ತು. ಆದರೆ ಈಗ ನಿಮಗೆ ಹತ್ತಿರದಲ್ಲೇ ಕಾಲೇಜುಗಳಿದ್ದು ವಿದ್ಯಾರ್ಥಿಗಳು ಶಿಕ್ಷಣ ಪಡೆದು ಹೆತ್ತ ತಂದೆ ತಾಯಿಗೆ ಹಾಗೂ ಊರಿಗೆ ಕೀರ್ತಿ ತರಬೇಕು ಎಂದರು.
ದೇವರು ಎಲ್ಲರಿಗೂ ಒಂದೇ ರೀತಿಯ ಬುದ್ದಿಯನ್ನು ನೀಡಿದ್ದು ನೀವುಗಳು ಆ ಬುದ್ದಿ ಶಕ್ತಿಯನ್ನು ಸರಿಯಾಗಿ ರೂಢಿಸಿಕೊಳ್ಳುವುದು ನಿಮ್ಮ ಕರ್ತವ್ಯ. ಖಾಸಗಿ ಶಾಲೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಇಂಗ್ಲಿಷ್ ಭಾಷೆಯಲ್ಲಿ ಮಾತನಾಡುವುದನ್ನು ನೋಡಿ ನಿಮ್ಮಲ್ಲಿ ಕೀಳರಿಮೆ ಬೆಳೆಸಿಕೊಳ್ಳದೆ ಅದನ್ನು ಸವಾಲಾಗಿ ಸ್ವೀಕರಿಸಬೇಕು. ವಿದ್ಯೆ ಸಾಧಕನ ಸ್ವತ್ತೆ ಹೊರತು ಸೋಮರಿಯ ಸ್ವತ್ತಲ್ಲ ಎಂದು ಕಿವಿ ಮಾತು ಹೇಳಿದರು.
ಕಾಲೇಜಿನಲ್ಲಿ ಉತ್ತಮವಾದ ಪರಿಸರವನ್ನು ಸೃಷ್ಡಿಸಿದ್ದಾರೆ. ಸಾರ್ವಜನಿಕರ ಸಹಕಾರ ಇದ್ದಾಗ ಮಾತ್ರ ಅಭಿವೃದ್ದಿ ಕಾರ್ಯಗಳು ವೇಗವಾಗಿ ಆಗಲು ಸಾಧ್ಯವಾಗುತ್ತದೆ. ಪರಿಸರವನ್ನು ದುರ್ಬಳಕೆ ಮಾಡದೆ ಮುಂದಿನ ಪೀಳಿಗೆಯ ಜನಾಂಗಕ್ಕೆ ಕೊಡಬೇಕು ಎಂದರು.
ನಂದಿನಿ ಹಾಲನ್ನು ಹೊರತು ಪಡಿಸಿದರೆ ಇನ್ನುಳಿದ ಹಾಲು ಕಲಬೆರಕೆ ಹಾಲು ಆದರಿಂದ ಗ್ರಾಹಕರು ಖರೀದಿಸುವಾಗ ಎಚ್ಚರಿಕೆ ವಹಿಸಬೇಕಾಗಿದೆ.ಅಂಗಡಿಗಳಲ್ಲಿ ಸ್ಟೋರ್ ಮಾಡಿ ಇತರೆ ಹಾಲಿನ ಪ್ಯಾಕೆಟ್ ಗಳನ್ನು ಮಾರುತ್ತಿರುವ ವಿರುದ್ಧ ಕ್ರಮ ವಹಿಸಲು ನಾನು ಪ್ರವಾಸ ಮಾಡಿದ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಿದ್ದೇನೆ ಎಂದರು.
ಯಾರಿಗೂ ಐಶ್ವರ್ಯ ವನ್ನು ನೀಡಲು ಸಾಧ್ಯವಾಗಿಲ್ಲ ಅದಕ್ಕಾಗಿ ವಿದ್ಯಾರ್ಥಿಗಳಿಗೆ ಮೊದಲು ಶಿಕ್ಷಣವನ್ನು ನೀಡಿದರೆ ಅವರು ಮುಂದೆ ಎಲ್ಲವನ್ನೂ ಸ್ವತ ಅವರೇ ಪಡೆದುಕೊಳ್ಳುತ್ತಾರೆ.ರಾಜ್ಯದ ಯಾವ ತಾಲ್ಲೂಕಿನಲ್ಲಿ ಸರ್ಕಾರದ ಹಣದಿಂದ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಬುಕ್ ವಿತರಣೆ ಮಾಡಿಲ್ಲ ಆದರೆ ನಾನು ನಮ್ಮ ತಾಲ್ಲೂಕಿನಲ್ಲಿ ಹಣ ಸಂಗ್ರಹಣೆ ಮಾಡಿ ವಿತರಣೆ ಮಾಡಲಾಗಿದೆ ಎಂದರು.
ವಿದ್ಯಾರ್ಥಿಗಳು ಕಾಲೇಜಿಗೆ ಗೈರು ಹಾಜರಾಗದೆ ಪ್ರತಿದಿನ , ಪಾಠ ಪ್ರವಚನಗಳನ್ನು ಕೇಳಿದಾಗ ಮಾತ್ರ ಪರೀಕ್ಷೆ ಬರೆಯಲು ಸುಲಭವಾಗುತ್ತದೆ ಎಂದರಲ್ಲದೆ ನಿರಂತರ 15ದಿನಗಳು ಗೈರು ಹಾಜರಾದ ವಿದ್ಯಾರ್ಥಿಗಳಿಗೆ ಮತ್ತೊಮ್ಮೆ ಶಿಕ್ಷಕರು ಪುನರ್ ಮನನ ಮಾಡುವಂತೆ ಸೂಚಿಸಿದರು.
ಸಾಂಸ್ಕೃತಿಕ ಮತ್ತು ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಾದ 75 ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ಮತ್ತು ಪದಕಗಳನ್ನು ವಿತರಿಸಲಾಯಿತು. ಪ್ರಥಮ ಬಿ.ಕಾಂ. ವಿದ್ಯಾರ್ಥಿ ತೇಜಸ್ ಸಹಕಾರಿ ಸಚಿವ ರಾಜಣ್ಣನವರ ಪೆನ್ಸಿಲ್ ನಿಂದ ರಚಿಸಿದ ಚಿತ್ರಪಟವನ್ನು ಇದೇ ಸಂಧರ್ಭದಲ್ಲಿ ಸಚಿವರಿಗೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ಅಂತಾರಾಷ್ಟ್ರೀಯ ಈಜುಪಟು ವಿಶ್ವಾಸ್ , ಚಲನ ಚಿತ್ರ ಯುವ ನಿರ್ದೇಶಕ ರಾಜಕುಮಾರ್, ಹಿರಿಯ ಸಾಹಿತಿ ಮ.ಲ.ನ ಮೂರ್ತಿ, ಬಿ.ನಾಗೇಶ್ ಬಾಬು , ಮೂರ್ತಿ , ಪ್ರಾಂಶುಪಾಲರಾದ ಮುನೀಂದ್ರ ಕುಮಾರ್ , ಪುರಸಭಾ ಮಾಜಿ ಅಧ್ಯಕ್ಷ ಎಂ ಕೆ ನಂಜುಂಡಯ್ಯ, ಅಯ್ಯುಬ್, ಪುರಸಭಾ ಸದಸ್ಯ ಅಲೀಮ್ ಉಲ್ಲಾ, ಕೆ ಎಂಎಫ್ ನಿರ್ದೇಶಕ ಮೈದನಹಳ್ಳಿ ಕಾಂತರಾಜು ಮುಖಂಡರುಗಳಾದ ತುಂಗೋಟಿ ರಾಮಣ್ಣ , ಸಾಧಿಕ್, ಬಾಬಾ ಫಕ್ರುದ್ದೀನ್ ಷರೀಫ್, ಸಿದ್ದಗಂಗಪ್ಪ ಉಪನ್ಯಾಸಕರಾದ ನಾಗಭೂಷಣ್ ಮಹಾಲಿಂಗೇಶ್ , ಡಾ. ಅಶೋಕ್ ಡಾ. ಬಂದ್ರೇಹಳ್ಳಿ ಕುಮಾರ , ಪುರುಷೋತ್ತಮ್ , ಮಂಜುನಾಥ್ .ಬಿ , ಪ್ರೂ.ಗಳಾದ ದಿವಾಕರ್ .ಕೆ , ವೇದಲಕ್ಷ್ಮೀ , ರೇಖಾ ಬಿ.ಎನ್. ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಮಧುಗಿರಿ ಪಟ್ಟಣದ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಹಕಾರ ಸಚಿವ ಕೆ ಎನ್. ರಾಜಣ್ಣ ಶೈಕ್ಷಣಿಕ ಚಟುವಟಿಕೆಗಳ ಸಮಾರೋಪ ಕಾರ್ಯಕ್ರಮವನ್ನು ದೀಪಾ ಬೆಳಗಿಸುವ ಮೂಲಕ ಉದ್ಘಾಟಿಸಿದರು.
ವರದಿ: ಅಬಿದ್ ಮಧುಗಿರಿ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8123382149 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA


