ಔರಾದ: ತಾಲೂಕಿನ ಭೋಂತಿ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಬರುವ ಸಾವಗಾಂವ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆಯಿಂದ ಜನ ಪರದಾಡುತ್ತಿದ್ದಾರೆ.
ಹನಿ ನೀರಿಗಾಗಿ ಇಲ್ಲಿಯ ಜನರು ಹಾಹಾಕಾರ ಪಡುವ ಪರಿಸ್ಥಿತಿ ಉದ್ಭವಿಸಿದೆ. ಜೆಜೆಎಂ ಯೋಜನೆ ಮೂಲಕ ಕೋಟ್ಯಾಂತರ ರೂಪಾಯಿಗಳು ಖರ್ಚು ಮಾಡಿದರೂ, ಜನರಿಗೆ ಹನಿ ನೀರು ಒದಗಿಸಲು ಅಧಿಕಾರಿಗಳಿಂದ ಆಗುತ್ತಿಲ್ಲ, ಸಂಪೂರ್ಣ ಕಳಪೆ ಮಟ್ಟ ಕಾಮಗಾರಿ ಮಾಡಿರೋದ್ರಿಂದ ಈ ಯೋಜನೆ ದಿಕ್ಕು ತಪ್ಪಿದೆ ಎಂದು ಮುಖಂಡ ಸುಧಾಕರ್ ಕೊಳ್ಳುರ ಅವರು ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮದ ಮಿನಬಾಯಿ ಎನ್ನುವ ತುಂಬ ಗರ್ಭಿಣಿ ಮಗುವನ್ನು ಎತ್ತಿಕೊಂಡು ನೀರಿಗಾಗಿ ಅಲೆದಾಡುತ್ತಿರುವ ದೃಶ್ಯ ನೋಡಿದರೆ . ಇಡೀ ಮನುಕುಲದ ತಲೆತಗ್ಗಿಸುವ ಘಟನೆಯಾಗಿದೆ ಎಂದು ಸುಧಾಕರ್ ಕೊಳ್ಳುರ ಹೇಳಿದರು.
ಪ್ರತಿ ವರ್ಷ ಇಲ್ಲಿಯ ಜನರು ಕುಡಿಯುವ ನೀರಿಗಾಗಿ ಪರದಾಡುವ ಪರಿಸ್ಥಿತಿ ಎದುರಾಗುತ್ತಿದೆ. ಸಂಬಂಧಪಟ್ಟ ಗ್ರಾಮ ಪಂಚಾಯತ್ ಹಾಗೂ ಗ್ರಾಮೀಣ ನೀರು ಸರಬರಾಜು ಇಲಾಖೆ ಅಧಿಕಾರಿಗಳು ನಮಗೂ ಇದಕ್ಕೂ ಸಂಬಂಧವೇ ಇಲ್ಲ ಅನ್ನೋತರ ವರ್ತಿಸುತ್ತಿರುವುದು ಖಂಡನೀಯ ಎಂದು ಅವರು ಹೇಳಿದರು.
ಕುಡಿಯುವ ನೀರಿನ ಯೋಜನೆ ಹೆಸರಿನಲ್ಲಿ ಕೋಟ್ಯಾಂತರ ರೂಪಾಯಿ ಕೊಳ್ಳೆ ಹೊಡೆಯುತ್ತಿರುವ ಅಧಿಕಾರಿಗಳಿಗೆ ಹಾಗೂ ಗುತ್ತೇದಾರರುಗಳಿಗೆ ಶಿಕ್ಷೆ ಆಗಬೇಕು ಎಂದು ಅವರು ಒತ್ತಾಯಿಸಿದರು.
ತಾಲೂಕಿನ ಶಾಸಕರಾದ ಪ್ರಭು ಚೌವ್ಹಾಣ್ ಅವರು ವಾಸ ಮಾಡುವ ಗ್ರಾಮದಿಂದ ಕೇವಲ ಒಂದೂವರೆ ಕಿಲೋಮೀಟರ್ ದೂರದಲ್ಲಿ ಈ ಗ್ರಾಮ ಇದೆ. ಈ ಗ್ರಾಮದಿಂದಲೇ ದಿನಾಲು ಓಡಾಡುತ್ತಾರೆ ಅವರ ಪಂಚಾಯತ್ ವ್ಯಾಪ್ತಿಗೆ ಬರುವ ಗ್ರಾಮ ಆಗಿದೆ. ಆದರೂ ಶಾಸಕರು ಯಾವುದೇ ಕ್ರಮ ಕೈಗೊಂಡಿಲ್ಲ , ಶಾಸಕ ಪ್ರಭು ಚೌವ್ಹಾಣ್ ಅವರ ಗಮನಕ್ಕೆ ಸುಮಾರು ಬಾರಿ ಗ್ರಾಮಸ್ಥರು ತಂದರೂ, ಶಾಸಕರು ಸಮಸ್ಯೆ ಬಗ್ಗೆ ಹರಿಸುವ ಕೆಲಸ ಮಾಡಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯ ಬಾಲಾಜಿ, ಪದ್ಮಿನಿಬಾಯಿ, ಸೇವಂತಬಾಯಿ, ಮೀನಾಬಾಯಿ ಅವರು ಮಾತನಾಡಿ, ನಾವು ಎಷ್ಟೇ ಸರಿ ಗ್ರಾಮಕ್ಕೆ ನೀರು ಬಿಡಿ ಎಂದು ಮನವಿ ಮಾಡಿದರು ನಮ್ಮ ಸಮಸ್ಯೆ ಯಾರೂ ಕೇಳುತ್ತಿಲ್ಲ. ನಾವುಗಳು ಮನೆ ಕೆಲಸ ಮಾಡಿ, ಮಕ್ಕಳನ್ನು ಶಾಲೆಗೆ ಕಳುಹಿಸಿ, ಕೂಲಿ ಕೆಲಸಕ್ಕೆ ಹೋಗಬೇಕು. ಅಡುಗೆ ಮಾಡಲು ಕೂಡ ನೀರು ಇರುವುದಿಲ್ಲ. ನೀರಿಗಾಗಿ ಗ್ರಾಮದ ಹೊಲಗಳಿಗೆ ಅಲೆದಾಡಿ ನೀರು ತುಂಬುವುದರಲ್ಲೇ ಜೀವನ ಕಳೆಯುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ವಾರದಲ್ಲಿ ಸಮಸ್ಯೆ ಬಗೆಹರಿಸದೆ ಹೋದರೆ ತಾಲೂಕು ಪಂಚಾಯತ್ ಕಚೇರಿಯ ಎದುರು ಅನಿರ್ದಿಷ್ಠಾವಧಿ ಧರಣಿ ಸತ್ಯಾಗ್ರಹ ನಡೆಸುತ್ತವೆ ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದರು. ಹರಿದೇವ ಸಂಗನಾಳ, ಬಾಲಾಜಿ, ಮಹಾದೇವ , ತುಕಾರಾಮ ಮುಂತಾದವರು ಉಪಸ್ಥಿತರಿದ್ದರು.
ವರದಿ: ಅರವಿಂದ ಮಲ್ಲಿಗೆ, ಬೀದರ್
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx