ಉಕ್ರೇನ್ನಲ್ಲಿ ನಡೆಯುತ್ತಿರುವ ಸಂಘರ್ಷ, ಇಂಡೋ- ಪೆಸಿಫಿಕ್ನಲ್ಲಿನ ಪರಿಸ್ಥಿತಿ ಮತ್ತು ಭಯೋತ್ಪಾದನೆ ಸೇರಿದಂತೆ ವಿವಿಧ ದ್ವಿಪಕ್ಷೀಯ ಮತ್ತು ಜಾಗತಿಕ ವಿಷಯಗಳ ಕುರಿತು ಪ್ರಧಾನಿ ನರೇಂದ್ರ ಮೋದಿ ಮತ್ತು ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಅವರು ವ್ಯಾಪಕ ಚರ್ಚೆ ನಡೆಸಿದರು.
ಮೂರು ರಾಷ್ಟ್ರಗಳ ಯುರೋಪಿಯನ್ ಪ್ರವಾಸದ ಅಂತಿಮ ಹಂತದಲ್ಲಿ ಡೆನ್ಮಾರ್ಕ್ ನಿಂದ ಇಲ್ಲಿಗೆ ಆಗಮಿಸಿದ ಪ್ರಧಾನಿ ಮೋದಿ, ಒಂದು ವಾರದ ಹಿಂದೆ ಪ್ರಾನ್ಸ್ ಅಧ್ಯಕ್ಷರಾಗಿ ಪುನರಾಯ್ಕೆಯಾದ ಅವರೊಂದಿಗೆ ಸಮಾಲೋಚನೆ ನಡೆಸಿ, ಭಾರತ-ಫ್ರಾನ್ಸ್ ನಡುವೆ ಮುಂದಿನ ಹಂತದ ಮಹತ್ವಾಕಾಂಕ್ಷೆಯ ಕಾರ್ಯತಾಂತ್ರಿಕ ಪಾಲುದಾರಿಕೆಯ ಕಾರ್ಯಸೂಚಿಗಳನ್ನು ನಿರ್ಧರಿಸಿದ್ದರು.
ರಕ್ಷಣೆ, ಬಾಹ್ಯಾಕಾಶ, ನೀಲಿ ಆರ್ಥಿಕತೆ, ನಾಗರಿಕ ಪರಮಾಣು ಮತ್ತು ಜನರ ನಡುವಿನ ಸಂಬಂಧ ಸೇರಿದಂತೆ ದ್ವಿಪಕ್ಷೀಯ ವಿಷಯಗಳ ಸಂಪೂರ್ಣ ಶ್ರೇಣಿಯ ಕುರಿತು ಮೋದಿ ಮತ್ತು ಮ್ಯಾಕ್ರನ್ ಚರ್ಚೆ ನಡೆಸಿದರು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ನನ್ನ ಸ್ನೇಹಿತ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ರನ್ನು ಭೇಟಿಯಾಗಿದ್ದು ಸಂತೋಷವಾಗಿದೆ. ನಾವು ದ್ವಿಪಕ್ಷೀಯ ಮತ್ತು ಜಾಗತಿಕ ವಿಷಯಗಳ ಬಗ್ಗೆ ಸುದೀರ್ಘವಾಗಿ ಮಾತನಾಡಿದ್ದೇವೆ. ವಿವಿಧ ಕ್ಷೇತ್ರಗಳಲ್ಲಿರುವ ಭಾರತ ಮತ್ತು ಫ್ರಾನ್ಸ್ ಅಭಿವೃದ್ಧಿ ಪಾಲುದಾರಿಕೆ ಮುಂದುವರೆಯಲಿದೆ ಎಂದು ಮೋದಿ ಇಂಗ್ಲಿಷ್ ಮತ್ತು ಫ್ರೆಂಚ್ ಭಾಷೆಗಳಲ್ಲಿ ಟ್ವೀಟ್ ಮಾಡಿದ್ದಾರೆ.
ಜೊತೆ ಮ್ಯಾಕ್ರೋನ್ರನ್ನು ಅಪ್ಪಿಕೊಂಡಿರುವ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಉಭಯ ನಾಯಕರು ಪ್ರಾದೇಶಿಕ ಮತ್ತು ಜಾಗತಿಕ ಭದ್ರತಾ ವಿಷಯಗಳ ಕುರಿತು ಚರ್ಚೆ ನಡೆಸಿದರು. ಮುಂದುವರೆಯುವ ಈ ಪಾಲುದಾರಿಕೆ ಜಾಗತಿಕ ಒಳಿತಿಗಾಗಿ ಎರಡು ದೇಶಗಳನ್ನು ಬಲಿಷ್ಠ ಶಕ್ತಿಯನ್ನಾಗಿ ಮಾಡಲಿದೆ. ಪ್ರಧಾನಿಯವರ ಫ್ರಾನ್ಸ್ ಭೇಟಿ ಉಭಯ ದೇಶಗಳ ನಡುವೆ ಬಲವಾದ ಸ್ನೇಹ ಮತ್ತು ಸೌಹಾರ್ದತೆಯನ್ನು ದೃಢ ಪಡಿಸಿದೆ ಎಂದು ಮ್ಯಾಕ್ರನ್ ಟ್ವೀಟ್ ಮಾಡಿದ್ದಾರೆ.
ಅಂತರರಾಷ್ಟ್ರೀಯ ವಿಭಿನ್ನ ಬಿಕ್ಕಟ್ಟುಗಳು ಮತ್ತು ಎರಡು ದೇಶಗಳ ನಡುವೆ ಕಾರ್ಯತಂತ್ರದ ಪಾಲುದಾರಿಕೆ ಕುರಿತು ಚರ್ಚಿಸಿದ್ದೇವೆ. ನಾವು ಆಹಾರ ಭದ್ರತೆ ಸಮಸ್ಯೆಗಳು ಮತ್ತು ಎಫ್ಎಆರ್ಎಂ ಉಪಕ್ರಮದ ಬಗ್ಗೆಯೂ ಮಾತನಾಡಿದ್ದೇವೆ, ಇದರಲ್ಲಿ ಭಾರತ ಪ್ರಮುಖ ಪಾತ್ರ ವಹಿಸಲಿದೆ ಎಂದು ಹೇಳಿದ್ದಾರೆ.
ಇದೇ ವೇಳೆ ಮ್ಯಾಕ್ರೋನ್ರನ್ನು ಭಾರತಕ್ಕೆ ಭೇಟಿ ನೀಡುವಂತೆ ಪ್ರಧಾನಿ ಮೋದಿ ಆಹ್ವಾನಿಸಿದ್ದಾರೆ ಎಂದು ವಿದೇಶಾಂಗ ಇಲಾಖೆ ಪ್ರಕಟಣೆ ತಿಳಿಸಿದೆ.
ಸಭೆಯ ನಂತರ ಬಿಡುಗಡೆಯಾದ ಜಂಟಿ ಪತ್ರಿಕಾ ಹೇಳಿಕೆಯ ಪ್ರಕಾರ, ಭಾರತ ಮತ್ತು ಫ್ರಾನ್ಸ್ ಕೋವಿಡ್ ಸಾಂಕ್ರಾಮಿಕ ರೋಗದ ಬಳಿಕ ಜಾಗತಿಕ, ಭೌಗೋಳಿಕ ಮತ್ತು ರಾಜಕೀಯ ಸವಾಲುಗಳನ್ನು ಎದುರಿಸುತ್ತಿದೆ.
ಈ ನಿಟ್ಟಿನಲ್ಲಿ ಪರಸ್ಪರ ಸಹಕಾರವನ್ನು ಇನ್ನಷ್ಟು ಆಳಗೊಳಿಸುವ ಮೂಲಕ, ಹೊಸ ಕ್ಷೇತ್ರಗಳಲ್ಲಿ ಸೌಹಾರ್ದ ಸಂಬಂಧವನ್ನು ಮತ್ತಷ್ಟು ವಿಸ್ತರಿಸುವ ಮೂಲಕ, ಭವಿಷ್ಯಕ್ಕಾಗಿ ಒಟ್ಟಾಗಿ ತಯಾರಿ ಮಾಡುವ ಬದ್ಧತೆಯನ್ನು ಪುನರುಚ್ಚರಿಸಿವೆ.
ಉದಯೋನ್ಮುಖ ಸವಾಲುಗಳನ್ನು ಎದುರಿಸುವುದು ಮತು ಅಂತರರಾಷ್ಟ್ರೀಯ ಪಾಲುದಾರಿಕೆಯನ್ನು ವಿಸ್ತರಿಸುವುದು ಚರ್ಚೆಯ ಪ್ರಮುಖ ಭಾಗವಾಗಿತ್ತು. ದ್ವಿಪಕ್ಷೀಯ ಸಹಕಾರದ ಹೊರತಾಗಿ, ಭಾರತ ಮತ್ತು ಫ್ರಾನ್ಸ್ ಪ್ರಾದೇಶಿಕ ಸಮಾನ ಮನಸ್ಕ ರಾಷ್ಟ್ರಗಳ ಜೊತೆ ವಿವಿಧ ಸ್ವರೂಪಗಳಲ್ಲಿ ಹೊಸ ಪಾಲುದಾರಿಕೆಯನ್ನು ಮುಂದುವರೆಸಲು ಬಯಸಿವೆ.
ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಶಾಂತಿ, ಸ್ಥಿರತೆ ಮತ್ತು ಸಮೃದ್ಧಿಯನ್ನು ಕಾಪಾಡಿಕೊಳ್ಳುವುದು, ಅಂತರರಾಷ್ಟ್ರೀಯ ಕಾನೂನಿಗೆ ಬದ್ಧವಾಗಿರುವುದು, ಅನ್ಯ ರಾಷ್ಟ್ರಗಳ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಗೆ ಗೌರವ ನೀಡುವುದು, ಸ್ವಾತಂತ್ರ್ಯ ಪಾಲನೆ, ದಬ್ಬಾಳಿಕೆ ಹತ್ತಿಕ್ಕುವುದು ಮತ್ತು ಉದ್ವಿಗ್ನತೆ-ಘರ್ಷಣೆ ಮುಕ್ತವಾದ ವಾತಾವರಣ ಕುರಿತು ಸಮಾಲೋಚನೆ ನಡೆಸಲಾಗಿದೆ.
ಭಾತರದ ಆಯಕಟ್ಟಿನ ಪ್ರಮುಖ ಪ್ರದೇಶದಲ್ಲಿ ಚೀನಾದ ಆಕ್ರಮಣಕಾರಿ ನಡೆಗಳ ಕುರಿತು ಪ್ರಸ್ತಾಪಿಸಲಾಗಿದೆ, ಉಕ್ರೇನ್ನಲ್ಲಿ ನಡೆಯುತ್ತಿರುವ ಸಂಘರ್ಷ ಮತ್ತು ಮಾನವೀಯ ಬಿಕ್ಕಟ್ಟಿನ ಬಗ್ಗೆ ಉಭಯ ನಾಯಕರು ಗಂಭೀರ ಕಳವಳ ವ್ಯಕ್ತಪಡಿಸಿದ್ದಾರೆ. ಉಕ್ರೇನ್ನಲ್ಲಿ ನಾಗರಿಕರ ಸಾವುಗಳನ್ನು ಖಂಡಿಸುವ ಜೊತೆಗೆ, ಅಲ್ಲಿನ ಜನರಸಂಕಷ್ಟದ ಪರಿಹಾರಗಳ ಕುರಿತು ಉಭಯ ನಾಯಕರು ಮಾತುಕತೆ ನಡೆಸಿದ್ದಾರೆ.
ಉಕ್ರೇನ್ ಯುದ್ಧವನ್ನು ತಕ್ಷಣವೇ ನಿಲ್ಲಿಸಿ, ರಾಜತಾಂತ್ರಿಕತೆಗೆ ಉತ್ತೇಜನ ನೀಡುವಂತೆ ಎರಡು ದೇಶಗಳ ಪ್ರಧಾನಿಗಳು ಕರೆ ನೀಡಿದ್ದಾರೆ. ಯುದ್ಧದಿಂದಾಗುತ್ತಿರುವ ಪರಿಣಾಮಗಳು ಮತ್ತು ಅದನ್ನು ತಡೆಯಲು ಚರ್ಚೆ ನಡೆಸಲಾಗಿದೆ.
ಇದೇ ವೇಳೆ ಆಫ್ಘಾನಿಸ್ತಾನದಲ್ಲಿನ ಮಾನವೀಯ ಹಕ್ಕುಗಳ ಉಲ್ಲಂಘನೆಯ ಬಗ್ಗೆಯೂ ಗಂಭಿರ ಕಳವಳ ವ್ಯಕ್ತವಾಗಿದೆ.
ಶಾಂತಿಯುತ, ಸುರಕ್ಷಿತ ಮತ್ತು ಸ್ಥಿರವಾದ ಅಫ್ಘಾನಿಸ್ತಾನಕ್ಕೆ ಬಲವಾದ ಬೆಂಬಲವನ್ನು ಪುನರುಚ್ಚರಿಸಲಾಗಿದೆ. ಆದಾಗ್ಯೂ ಆಪ್ಘಾನಿಸ್ತಾನದ ಸಾರ್ವಭೌಮತೆ, ಏಕತೆ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಗೌರವಿಸುವುದು ಮತ್ತು ಅದರ ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡದಿರುವ ಬದ್ಧತೆಯನ್ನು ಎರಡು ದೇಶಗಳು ಪ್ರದರ್ಶಿಸಿವೆ.
ವರದಿ: ಆಂಟೋನಿ ಬೇಗೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5