ತುಮಕೂರು: ಜಿಲ್ಲೆ ತುರುವೇಕೆರೆ ಪಟ್ಟಣದಲ್ಲಿರುವ ಪ್ರವಾಸಿ ಮಂದಿರದಲ್ಲಿ ತುರುವೇಕೆರೆ ತಾಲೂಕು ಕರ್ನಾಟಕ ದಲಿತ ಸಂಘರ್ಷ ಸಮಿತಿ ಹಾಗೂ ಚಲವಾದಿ ಮಹಾಸಭಾ ವತಿಯಿಂದ ಜಂಟಿ ಪತ್ರಿಕಾಗೋಷ್ಠಿ ನಡೆಸಲಾಯಿತು.
ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಜಗದೀಶ್, ತುರುವೇಕೆರೆ ತಾಲೂಕಿನಲ್ಲಿ ಕುಣಿಗಲ್ ಡಿವೈಎಸ್ಪಿ ರಮೇಶ್ ಬಂದ ಮೇಲೆ ಸುಮಾರು ಏಳು ಪ್ರಕರಣಗಳು ದಾಖಲಾಗಿವೆ. ಆದರೆ ಎಸ್ಪಿ ರಮೇಶ್ ರವರು ದಲಿತ ದೌರ್ಜನ್ಯ ಕಾಯ್ದೆ ಪ್ರಕರಣಗಳಲ್ಲಿ ಕರ್ತವ್ಯ ಲೋಪ ಎಸಗಿದ್ದಾರೆ ಎಂದು ಆರೋಪಿಸಿದರು.
ದಲಿತ ದೌರ್ಜನ್ಯ ಪ್ರಕರಣಗಳು ದಾಖಲಾಗುವ ಮುಂಚೆಯೇ, ಸ್ಥಳ ಪರೀಕ್ಷೆ ಮಾಡುತ್ತೇವೆ, ಪ್ರಕರಣ ತನಿಖೆ ಮಾಡುತ್ತೇವೆ ಎಂದು ದೂರುದಾರರನ್ನು ದಾರಿ ತಪ್ಪಿಸುತ್ತಿದ್ದಾರೆ. ಈ ಪ್ರಕರಣ ದಾಖಲಿಸಲು ವಿಳಂಬ ಮಾಡುತ್ತಿದ್ದಾರೆ. ಈ ವಿಳಂಬದಿಂದಾಗಿ ತುರುವೇಕೆರೆ ತಾಲೂಕಿನಲ್ಲಿ ದೌರ್ಜನ್ಯ ಪ್ರಕರಣಗಳು ಮಿತಿಮೀರಿ ಹೋಗಿವೆ. ಸ್ಥಳೀಯ ಪೊಲೀಸರಿಗೆ ದೂರು ಬಂದ ತಕ್ಷಣ ಕೇಸು ದಾಖಲಿಸುವಲ್ಲಿ ಸರಿಯಾದ ನಿರ್ದೇಶನ ನೀಡುವಲ್ಲಿ ಅವರು ವಿಫಲರಾಗಿದ್ದಾರೆ ಎಂದು ದೂರಿದರು.
ಚಲವಾದಿ ಮಹಾಸಭಾದ ಪದಾಧಿಕಾರಿಗಳು ಖುದ್ದು ಭೇಟಿ ಮಾಡಿ ಕೇಸು ದಾಖಲು ಮಾಡುವಂತೆ ಒತ್ತಾಯಿಸಿದಾಗ ಅನಿವಾರ್ಯವಾಗಿ ಕೇಸು ದಾಖಲಿಸಿಕೊಳ್ಳುತ್ತಾರೆ. ಕೇಸು ದಾಖಲಿಸಿಕೊಂಡ ನಂತರ ಆರೋಪಿಗಳನ್ನು ಬಂಧಿಸಬೇಕು. ಆದರೆ , ಆರೋಪಿಗಳನ್ನು ಬಂಧಿಸದೇ ಉಡಾಫೆಯ ಉತ್ತರ ಹೇಳಿ ಕಳಿಸುತ್ತಾರೆ . ಆರೋಪಿಗಳು ನಿರೀಕ್ಷಣಾ ಜಾಮೀನು ಪಡೆಯಲು ಇವರೇ ದಾರಿ ಮಾಡಿಕೊಡುತ್ತಾರೆ. ಹೀಗೆ ಡಿವೈಎಸ್ಪಿ ರಮೇಶ್ ಬಂದ ಮೇಲೆ ಎಲ್ಲ ದಲಿತ ದೌರ್ಜಬ್ಯ ಪ್ರಕರಣಗಳಲ್ಲಿ 15 ದಿನಗಳಲ್ಲಿ ನಿರೀಕ್ಷಣಾ ಜಾಮೀನು ದೊರೆತಿವೆ. ಸರಿಯಾಗಿ ತನಿಖೆ ಮಾಡದೇ, ಚಾರ್ಜ್ ಶೀಟ್ ಮಾಡದೇ ಏಕಾಏಕಿ ಬಿ ರಿಪೋರ್ಟ್ ಮಾಡಿದ್ದಾರೆ ಎಂದು ಅವರು ಆರೋಪಿಸಿದರು.
ಒಟ್ಟು ಏಳು ಕೇಸುಗಳಾದ ನಾಗರಾಜು , ನಾಗರತ್ನಮ್ಮ, ಜ್ಯೋತಿ , ಶಿವಾನಂದ , ಮಂಜುನಾಥ , ಚಂದ್ರನಾಯಕ,. ಹಟ್ಟಯ್ಯ ಇದರಲ್ಲಿ ಮಂಜುನಾಥ್ ರವರ ಪ್ರಕರಣದಲ್ಲಿ ಬಿ ರಿಪೋರ್ಟ್ ನೀಡಿರುತ್ತಾರೆ. ಇನ್ನೆರಡು ಪ್ರಕರಣಗಳಲ್ಲಿ ದೂರಿನಲ್ಲಿ ಸೇರಿರುವ ಆರೋಪಿಗಳ ಪಟ್ಟಿಯಲ್ಲಿ ನೆಪಮಾತ್ರಕ್ಕೆ ಇಬ್ಬರು ಅಥವಾ ಮೂರು ಜನರ ಮೇಲೆ ಕೇಸು ದಾಖಲು ಮಾಡಿರುತ್ತಾರೆ. ಇವೆಲ್ಲವನ್ನು ಗಮನಿಸಿದರೆ ಡಿ ವೈ ಎಸ್ ಪಿ ರವರ ಕರ್ತವ್ಯ ಲೋಪ ಎದ್ದು ಕಾಣುತ್ತಿದೆ. ಇವರ ವಿಳಂಬ ನೀತಿಯಿಂದ ಆರೋಪಿಗಳು ನಿರೀಕ್ಷಣಾ ಜಾಮೀನು ತೆಗೆದುಕೊಳ್ಳಲು ಅವಕಾಶ ಮಾಡಿಕೊಟ್ಟಂತಾಗುತ್ತಿದೆ. ಆರೋಪಿಗಳಿಗೆ ಕಾಲಾವಕಾಶ ಕೊಟ್ಟ ಸಮಯದಲ್ಲಿ ಸಾಕ್ಷವನ್ನು ನಾಶ ಮಾಡುತ್ತಾರೆ ಎಂದು ಅವರು ಹೇಳಿದರು.
ಪ್ರಕರಣಗಳ ಚಾರ್ಜ್ ಶೀಟ್ ಮಾಡುವ ಸಂದರ್ಭದಲ್ಲಿ ದೂರುದಾರರನ್ನೇ ಆರೋಪಿಗಳಂತೆ ಕಾಣುತ್ತಾರೆ. ಆರೋಪಿಗಳಿಂದ ಮರುದೂರು ಪಡೆದುಕೊಂಡು, ದಲಿತ ದೂರುದಾರರ ಮೇಲೆ ಕೌಂಟರ್ ಕೇಸ್ ದಾಖಲೆಸಿಕೊಂಡು ದಲಿತರ ವಿರೋಧಿ ನೀತಿಯನ್ನು ಅನುಸರಿಸುತ್ತಿದ್ದಾರೆ. ಆದುದರಿಂದ ಡಿವೈಎಸ್ಪಿ ರವರ ನಡೆಯನ್ನು ಖಂಡಿಸುತ್ತೇವೆ. ಈ ಪ್ರಕರಣಗಳಲ್ಲಿ ಲೋಪದೋಷ ಇರುವ ಡಿ ವೈ ಎಸ್ ಪಿ ರವರನ್ನು ಈ ಕೂಡಲೇ ಅಮಾನತು ಮಾಡಬೇಕು ಇಲ್ಲದಿದ್ದಲ್ಲಿ ಉಗ್ರವಾದ ಹೋರಾಟವನ್ನು ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಪತ್ರಿಕಾಗೋಷ್ಠಿಯಲ್ಲಿ ಚಲವಾದಿ ಮಹಾಸಭಾ ಅಧ್ಯಕ್ಷ ಡೊಂಕಿಹಳ್ಳಿ ರಾಮಣ್ಣ, ಪುರ ರಾಮಚಂದ್ರು, ಮಾಜಿ ಜಿಲ್ಲಾ ಪಂಚಾಯತಿ ಅಧ್ಯಕ್ಷ ಕೆಎಚ್ ಹನುಮಂತಯ್ಯ, ಕಾಚಿಹಳ್ಳಿ ಪುಟ್ಟರಾಜು, ಬಾಳೆಕಾಯಿ ಶಿವಶೇಖರ್, ನರಿಗೆಹಳ್ಳಿ ಹಟ್ಟಯ್ಯ, ತುರುವೇಕೆರೆ ಮುರುಳಿ ಇದ್ದರು.
ವರದಿ: ಸುರೇಶ್ ಬಾಬು, ತುರುವೇಕೆರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz