ತುಮಕೂರು: ಗ್ರಾಮ ಪಂಚಾಯಿತಿ, ಪುರಸಭೆ, ನಗರಸಭೆ, ಕಾರ್ಪೊರೇಷನ್ ವ್ಯಾಪ್ತಿಯ ಎಲ್ಲಾ ಇ–ಖಾತಾ ಪ್ರಕ್ರಿಯೆ ಕಳೆದ 45 ದಿನಗಳಿಂದ ಸ್ಥಗಿತಗೊಳಿಸಿರುವುದು ಗಂಭೀರ ಸಮಸ್ಯೆಯಾಗಿದೆ. ಈ ಬಗ್ಗೆ ಸರ್ಕಾರ ಹೆಚ್ಚೆತ್ತುಕೊಂಡು ಕೂಡಲೇ ಸಮಸ್ಯೆ ಬಗೆಹರಿಸಬೇಕು ಎಂದು ಜಿಲ್ಲಾ ಲ್ಯಾಂಡ್ ಡೆವಲಪರ್ಸ್ ಅಸೋಸಿಯೇಷನ್ ಅಧ್ಯಕ್ಷ ಹಾಗೂ ಸ್ಫೂರ್ತಿ ಡೆವಲಪರ್ಸ್ ಮಾಲೀಕ ಎಸ್.ಪಿ. ಚಿದಾನಂದ್ ಒತ್ತಾಯಿಸಿದ್ದಾರೆ.
ಶನಿವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹೊಸ ಇ–ಪೌತಿ ಸಾಫ್ಟ್‌ವೇರ್ ಅಳವಡಿಕೆಯ ಕಾರಣದಿಂದ ಈ ಸ್ಥಗಿತ ಉಂಟಾಗಿದೆ. ಸರ್ಕಾರ ಯಾವುದೇ ಹೊಸ ತಾಂತ್ರಿಕತೆ ಅಳವಡಿಸಿಕೊಳ್ಳುವಾಗ ಹಾಲಿಯಿರುವ ಪ್ರಕ್ರಿಯೆಗೆ ತೊಂದರೆಯಾಗದಂತೆ ಪರ್ಯಾಯ ವ್ಯವಸ್ಥೆ ಮಾಡಬೇಕು ಅಥವಾ ಒಂದು ಹಳ್ಳಿ ಅಥವಾ ಪಟ್ಟಣವನ್ನು ಪೈಲೆಟ್ ಪ್ರಾಜೆಕ್ಟ್ ಆಗಿ ಮಾಡಿಕೊಂಡು ಹೊಸ ವ್ಯವಸ್ಥೆ ಅಲ್ಲಿ ಜಾರಿ ಮಾಡಿ, ಅದರ ಸಾಧಕಬಾಧಕಗಳನ್ನು ಪರಿಶೀಲಿಸಿದ ನಂತರ ರಾಜ್ಯಾದ್ಯಂತ ಜಾರಿ ಮಾಡಬೇಕು ಎಂದರು.
ಇ–ಖಾತಾ ಸ್ಥಗಿತದಿಂದ ಹೊಸ ನಿವೇಶನ, ವಸತಿಕೊಳ್ಳುವವರಿಗೆ ಮಾರಾಟ ಮಾಡುವವರಿಗೆ, ಬ್ಯಾಂಕುಗಳಿಂದ ಸಾಲಸೌಲಭ್ಯಗಳು ದೊರೆಯದೆ ತೊಂದರೆಯಾಗಿದೆ. ಸಿ.ಸಿ ಮತ್ತು ಓ.ಸಿ. ಪಡೆಯುವ ಪ್ರಕ್ರಿಯೆ ಸುಮಾರು ಎರಡು ವರ್ಷಗಳಿಂದ ವಿಳಂಬವಾಗುತ್ತಿದ್ದು ಕಟ್ಟಡ ಪರವಾನಗಿಗಳು ಆನ್‌ಲೈನ್‌ನಲ್ಲಿ ಅಪ್‌ಲೋಡ್ ಆಗದೆ ಇರುವುದರಿಂದ ಅಭಿವೃದ್ಧಿ ಕಾರ್ಯಗಳಿಗೆ ತಡೆ ಉಂಟಾಗಿದೆ. ಇನ್ನು ಪೂರ್ಣಗೊಂಡಿರುವ ರೆಸಿಡೆನ್ಸಿಯಲ್ ಲೇಔಟ್, ಪ್ಲಾಟ್ ಹಾಗೂ ಫ್ಲಾಟ್‌ಗಳಿಗೆ ತೊಂದರೆಯಾಗಿದೆ ಎಂದು ದೂರಿದರು.
ರಸ್ತೆ, ಸಿಎ ಜಾಗವನ್ನು ಸರ್ಕಾರಕ್ಕೆ ಬಿಟ್ಟುಕೊಡಲು ಹಿಂದೆ ಪರಿತ್ಯಾಜನ ಪತ್ರ ನೋಂದಣಿ ಆದರೆ ಸಾಕಿತ್ತು. ಆದರೆ ಈಗ ಅದನ್ನು ಇ ಖಾತೆ ಮಾಡಿಸಿಕೊಡಬೇಕೆಂಬ ನಿಯಮ ವಿಧಿಸಿದ್ದು ಇದರಿಂದ ಏಕ ನಿವೇಶನ ಲೇಔಟ್ ದಾರರಿಗೆ ತೊಂದರೆಯಾಗಿದೆ. ಸರ್ಕಾರಕ್ಕೆ ಉಚಿತವಾಗಿ ಬಿಟ್ಟುಕೊಡುವ ಜಾಗದ ಖಾತೆಗೂ ಲಂಚಕ್ಕೆ ಬೇಡಿಕೆಯಿಟ್ಟು ವಿಳಂಬ ಮಾಡಲಾಗುತ್ತಿದೆ. ಇನ್ನೂ ಆರ್ ಟಿಐ ಅರ್ಜಿಗಳ ಹೆಸರಲ್ಲೂ ಲ್ಯಾಂಡ್ ಡೆವಲಪರ್ಸ್‌ಗಳಿಗೆ ಸಾಕಷ್ಟು ಕಿರುಕುಳವಾಗುತ್ತಿದ್ದು, ಈ ಅರ್ಜಿಗಳನ್ನೇ ಆಧರಿಸಿ ಅಧಿಕಾರಿಗಳು ಅನಾವಶ್ಯಕ ವಿಳಂಬ ಮಾಡಿ ಹಣಕ್ಕೆ ಬ್ಲಾಕ್‌ಮೇಲ್ ಮಾಡಲಾಗುತ್ತಿದೆ. ಇದಕ್ಕೆಲ್ಲಾ ಕಡಿವಾಣ ಬೀಳಬೇಕು ಅಂತಾ ಒತ್ತಾಯಿಸಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


