ತುರುವೇಕೆರೆ: ಕಂದಾಯ ಇಲಾಖೆಯ ಮಹತ್ವಾಕಾಂಕ್ಷೆಯ ಯೋಜನೆಗಳನ್ನು ಸಾರ್ವಜನಿಕರಿಗೆ ತಲುಪಿಸುವಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ತುರುವೇಕೆರೆ ತಾಲೂಕಿನ ತಹಶೀಲ್ದಾರ್ ಕುಂಞಿ ಅಹಮದ್ ಹಾಗೂ ಭೂ ದಾಖಲೆಗಳ ಸಹಾಯಕ ನಿರ್ದೇಶಕ (ADLR) ಸಿ. ಜಗದೀಶ್ ಅವರು ರಾಜ್ಯ ಸರ್ಕಾರದ ಅಭಿನಂದನಾ ಪತ್ರಕ್ಕೆ ಭಾಜನರಾಗಿದ್ದಾರೆ.
ಕಂದಾಯ ಗ್ರಾಮಗಳ ಹಕ್ಕುಪತ್ರ ವಿತರಣೆ, ದರಖಾಸ್ತು ಪೋಡಿ (1.5) ತಂತ್ರಾಂಶದ ಬಳಕೆ ಹಾಗೂ ಇ-ಪೌತಿ ಯೋಜನೆಯನ್ನು ಅತ್ಯಂತ ಯಶಸ್ವಿಯಾಗಿ ಅನುಷ್ಠಾನಗೊಳಿಸಿದ ಕಂದಾಯ ಅಧಿಕಾರಿಗಳ ಶ್ರೇಷ್ಠ ಸೇವೆಯನ್ನು ಪರಿಗಣಿಸಿ ರಾಜ್ಯ ಸರ್ಕಾರವು ಈ ಗೌರವವನ್ನು ನೀಡಿದೆ. ರಾಜ್ಯಾದ್ಯಂತ ಆಯ್ದ ಅಧಿಕಾರಿಗಳ ಪಟ್ಟಿಯಲ್ಲಿ ತುರುವೇಕೆರೆ ತಾಲೂಕಿನ ಈ ಇಬ್ಬರು ಅಧಿಕಾರಿಗಳ ಹೆಸರು ಪ್ರಕಟವಾಗಿರುವುದು ತಾಲೂಕಿಗೆ ಹೆಮ್ಮೆಯ ವಿಷಯವಾಗಿದೆ.
ಅಧಿಕಾರಿಗಳ ಈ ಸಾಧನೆಗೆ ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ರುದ್ರೇಶ್ ಎಚ್.ಡಿ. ಹಾಗೂ ತುರುವೇಕೆರೆ ತಾಲೂಕು ಅಧ್ಯಕ್ಷ ದೊರೆಸ್ವಾಮಿ ಅವರು ಹರ್ಷ ವ್ಯಕ್ತಪಡಿಸಿದ್ದಾರೆ. ಸರ್ಕಾರದ ಅಭಿನಂದನಾ ಪತ್ರಕ್ಕೆ ಆಯ್ಕೆಯಾದ ತಹಶೀಲ್ದಾರ್ ಕುಂಞಿ ಅಹಮದ್ ಮತ್ತು ಭೂ ದಾಖಲೆಗಳ ಸಹಾಯಕ ನಿರ್ದೇಶಕ ಸಿ. ಜಗದೀಶ್ ಅವರಿಗೆ ವೇದಿಕೆಯ ಪರವಾಗಿ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಸಾರ್ವಜನಿಕ ಕೆಲಸಗಳನ್ನು ತ್ವರಿತವಾಗಿ ಮತ್ತು ಪಾರದರ್ಶಕವಾಗಿ ಮಾಡುವ ಇಂತಹ ಅಧಿಕಾರಿಗಳ ಸೇವೆ ಇತರರಿಗೆ ಮಾದರಿಯಾಗಲಿ ಎಂದು ಅವರು ಆಶಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


