ಮಾನ್ಸೂನ್‌ನ 2ನೇ ಹಂತದಲ್ಲಿ ಹಲವು ರಾಜ್ಯಗಳಲ್ಲಿ ಮತ್ತೆ ಭಾರೀ ಮಳೆ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ. ಒಡಿಶಾದಲ್ಲಿ ಉಂಟಾಗಿರುವ ಆಳವಾದ ಕಡಿಮೆ ಒತ್ತಡದ ಪರಿಣಾಮ ಬಂಗಾಳಕೊಲ್ಲಿಯಿಂದ ಆರ್ದ್ರ ಗಾಳಿ ಉತ್ತರ ಭಾರತವನ್ನು ತಲುಪುತ್ತಿದೆ. ಈ ಗಾಳಿಯಿಂದಾಗಿ ಆಗಸ್ಟ್ 14ರಂದು ರಾಷ್ಟ್ರ ರಾಜಧಾನಿ ದೆಹಲಿ ಸೇರಿದಂತೆ ಉತ್ತರ ಪ್ರದೇಶ, ಪಂಜಾಬ್ ಮತ್ತು ಹರಿಯಾಣ ಇತ್ಯಾದಿಗಳಲ್ಲಿ ಮಳೆಯಾಗಲಿವೆ ಎಂದು ಹೇಳಲಾಗಿದೆ.
ಈ ರಾಜ್ಯದಲ್ಲಿ ರೆಡ್ ಅಲರ್ಟ್
ಇಂದು ಒಡಿಶಾದಲ್ಲಿ ಭಾರೀ ಮಳೆಯಾಗಲಿದ್ದು, ರೆಡ್ ಅಲರ್ಟ್ ಘೋಷಿಸಲಾಗಿದೆ. ಇಲ್ಲಿ ಎಸ್‌ಡಿಆರ್‌ಎಫ್ ತಂಡಗಳು ಕಾರ್ಯನಿರ್ವಹಿಸುತ್ತಿವೆ. ಇಂದು ಇಲ್ಲಿನ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆ ಹಾಗೂ ಪ್ರವಾಹದಂತಹ ಪರಿಸ್ಥಿತಿ ಉಂಟಾಗುವ ಸಾಧ್ಯತೆ ಇದೆ. ಮತ್ತೊಂದೆಡೆ ಕೇರಳ, ತಮಿಳುನಾಡು ಮತ್ತು ಆಂಧ್ರಪ್ರದೇಶದ ಕೆಲವು ಭಾಗಗಳಲ್ಲಿ ಗ್ರೀನ್ ಅಲರ್ಟ್ ಇದೆ. ಮೋಡ ಕವಿದ ವಾತಾವರಣವಿರುವುದರಿಂದ ಬೆಂಗಳೂರು ಸೇರಿ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿಯೂ ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಈ ರಾಜ್ಯಗಳಿಗೆ ಹವಾಮಾನ ಇಲಾಖೆ ಎಚ್ಚರಿಕೆ
ಹಿಮಾಚಲ ಪ್ರದೇಶ, ಉತ್ತರಾಖಂಡ, ಮಧ್ಯಪ್ರದೇಶ (MP), ಛತ್ತೀಸ್‌ಗಢ ಮತ್ತು ಮಹಾರಾಷ್ಟ್ರ ಭಾಗಗಳಲ್ಲಿ ಹವಾಮಾನ ಇಲಾಖೆ (IMD) ಆರೆಂಜ್ ಅಲರ್ಟ್ ಎಚ್ಚರಿಕೆ ನೀಡಿದೆ. ಈ ರಾಜ್ಯಗಳ ಜನರು ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ. ಅದೇ ರೀತಿ ಇಂದು ಬೇರೆಲ್ಲ ರಾಜ್ಯಗಳಲ್ಲಿ ಯೆಲ್ಲೋ ಅಲರ್ಟ್ ಇದ್ದು, ಭಯ ಪಡುವ ಅಗತ್ಯವಿಲ್ಲವೆಂದು IMD ತಿಳಿಸಿದೆ.
IMD ಪ್ರಕಾರ ದೆಹಲಿಯ ಇಂದಿನ ಗರಿಷ್ಠ ತಾಪಮಾನ 34 ಡಿಗ್ರಿ ಸೆಲ್ಸಿಯಸ್ ಮತ್ತು ಇಂದಿನ ಕನಿಷ್ಠ ತಾಪಮಾನ 26 ಡಿಗ್ರಿ ಸೆಲ್ಸಿಯಸ್ ಇದೆ. ದೆಹಲಿ-ಎನ್‌ಸಿಆರ್‌ನಲ್ಲಿ ಇಂದು ಲಘು ಮಳೆಯಾಗುವ ಸಾಧ್ಯತೆಯಿದೆ. ಆಗಸ್ಟ್ 15ರ ಸ್ವಾತಂತ್ರ್ಯ ದಿನದಂದು ದೆಹಲಿಯಲ್ಲಿ ಲಘು ಅಥವಾ ತುಂತುರು ಮಳೆಯಾಗಲಿದೆ.
ದೆಹಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮೋಡ ಕವಿದ ವಾತಾವರಣ ಇದ್ದು, ತಾಪಮಾನ ಕಡಿಮೆಯಾಗಿದೆ. ಕೆಂಪು ಕೋಟೆಯಲ್ಲಿ ಧ್ವಜಾರೋಹಣ ಮತ್ತು ಭಾಷಣದ ಸಮಯದಲ್ಲಿ ಯಾವುದೇ ಪ್ರಮುಖ ಹವಾಮಾನ ಸಂಬಂಧಿತ ಅಡ್ಡಿಯಾಗುವ ಸಾಧ್ಯತೆಯಿಲ್ಲ. ಮತ್ತೊಂದೆಡೆ ಉತ್ತರ ಪ್ರದೇಶ, ಪಂಜಾಬ್ ಸೇರಿದಂತೆ ಆಗಸ್ಟ್ 14 ಮತ್ತು 15ರಂದು ಲಘು ಮಳೆಯಾಗುವ ಸಾಧ್ಯತೆಯಿದೆ. ಹವಾಮಾನ ಇಲಾಖೆ ಪ್ರಕಾರ ಆಗಸ್ಟ್ 17 ಮತ್ತು 18ರಂದು ಮತ್ತೆ ದೆಹಲಿ ಸೇರಿದಂತೆ ಹರಿಯಾಣ, ಉತ್ತರ ಪ್ರದೇಶದ ಹಲವು ಜಿಲ್ಲೆಗಳಲ್ಲಿ ಮಳೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.
ಛತ್ತೀಸ್‌ಗಢದಲ್ಲಿ ಭಾರೀ ಮಳೆಯ ಎಚ್ಚರಿಕೆ
ಛತ್ತೀಸ್‌ಗಢದ ಹಲವು ಜಿಲ್ಲೆಗಳಲ್ಲಿ ಇನ್ನೆರಡು ದಿನಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಹವಾಮಾನ ಇಲಾಖೆ ಶನಿವಾರ ಈ ಮಾಹಿತಿ ನೀಡಿದೆ. ಮುಂದಿನ 48 ಗಂಟೆಗಳಲ್ಲಿ ರಾಜ್ಯದ ರಾಯಗಢ, ಜಾಂಜ್‌ಗೀರ್-ಚಂಪಾ, ಬಲೋದಬಜಾರ್ ಮತ್ತು ಮಹಾಸಮುಂದ್ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಬಿಲಾಸ್‌ಪುರ್, ಕೊರ್ಬಾ, ಮುಂಗೇಲಿ, ಗರಿಯಾಬಂದ್, ರಾಯ್‌ಪುರ, ದುರ್ಗ್ ಮತ್ತು ಧಮ್ತಾರಿ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯಾಗಬಹುದು ಎಂದು ಹೇಳಲಾಗಿದೆ.
ಒಡಿಶಾದಲ್ಲಿ ಪ್ರವಾಹ ಭೀತಿ
ಒಡಿಶಾದ ಮೇಲಿನ ಜಲಾನಯನ ಪ್ರದೇಶಗಳಲ್ಲಿ ಭಾರೀ ಮಳೆ ಮತ್ತು ಹಿರಾಕುಡ್ ಜಲಾಶಯದಲ್ಲಿ ಹೆಚ್ಚಿನ ನೀರಿನ ಹರಿವು ಹಿನ್ನೆಲೆ ಮಹಾನದಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪ್ರವಾಹದ ಅಪಾಯ ಹೆಚ್ಚಾಗಿದೆ. ಅಧಿಕಾರಿಗಳ ಪ್ರಕಾರ, ಉತ್ತರ ಬಂಗಾಳ ಕೊಲ್ಲಿಯಲ್ಲಿ ಮತ್ತೊಂದು ಕಡಿಮೆ ಒತ್ತಡದ ಪ್ರದೇಶ ರಚನೆಯಾಗಿರುವುದರಿಂದ ಪರಿಸ್ಥಿತಿ ಇನ್ನಷ್ಟು ಹದಗೆಡಬಹುದು. ಇದರ ಪರಿಣಾಮ ರಾಜ್ಯದ 17 ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ.
ವರದಿ ಆಂಟೋನಿ ಬೇಗೂರ್
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy